ಕೆಐಎಡಿಬಿಗೆ ಯಾವ ಕಾರಣಕ್ಕೂ ಭೂಮಿ ಬಿಡುವುದಿಲ್ಲ

| Published : May 06 2025, 12:15 AM IST

ಸಾರಾಂಶ

ತಾಲ್ಲೂಕಿನ ಉತ್ತರದ ಭಾಗದಲ್ಲಿ ದಿಬ್ಬೂರಹಳ್ಳಿ ಸಮೀಪದಲ್ಲಿ ಸುದ್ದೆ ಫ್ಯಾಕ್ಟರಿಗೆ ಭೂಮಿಯನ್ನು ಸರ್ಕಾರ ಕೊಟ್ಟಿದೆ. ಅದನ್ನು ತೆಗೆದುಕೊಳ್ಳಲಿ, ಫಲವತ್ತಾದ ಭೂಮಿಯನ್ನು ಕೆಐಎಡಿಬಿಗೆ ರೈತರು ನೀಡುವುದಿಲ್ಲ. ರೈತರ ಒಗ್ಗಟ್ಟನ್ನು ಒಡೆಯುವುದೇ ರಾಜಕಾರಣಿಗಳು, ರೈತರು ನ್ಯಾಯಾಲಯಕ್ಕೆ ಹೋಗುತ್ತೇವೆ, ಕಾನೂನು ಪ್ರಕ್ರಿಯೆಗೆ ಹೋದರೆ ಅಧಿಕಾರಿಗಳು ಅಪರಾಧಿಕಾರಿಗಳಾಗುತ್ತೀರಿ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿನ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಕೆಐಎಡಿಬಿಗೆ ನೀಡುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಹೇಳಿದರು.

ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಛೇರಿಯವರೆಗೆ ಸೋಮವಾರ ನೂರಾರು ರೈತರು ಕಾಲ್ನಡಿಗೆ ಜಾಥಾ ನಡೆಸಿ ತಾಲ್ಲೂಕು ಕಛೇರಿಯ ಮುಂಭಾಗದ ರಸ್ತೆಯಲ್ಲಿ ಕುಳಿತು ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಪಾರದರ್ಶಕವಾಗಿಲ್ಲ:

ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ನಡೆದ ರೈತರ ಅಭಿಪ್ರಾಯ ಸಂಗ್ರಹ ಪಾರದರ್ಶಕವಾಗಿ ನಡೆದಿಲ್ಲ. ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ರೈತರನ್ನು ವಂಚಿಸುವ ಕೆಲಸ ಮಾಡಿದ್ದಾರೆ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಆಗಬಾರದು. ರೈತರು ಯಾವ ಪಕ್ಷ, ಯಾವ ಜಾತಿ, ಯಾವ ಧರ್ಮ ಎಂಬುವುದು ಅಗತ್ಯವಿಲ್ಲ. ಕೃಷಿ ಮಾಡುವವರೇ ರೈತರು, ರೈತರ ತಾಳ್ಮೆಯನ್ನು ಪರೀಕ್ಷೆ ಮಾಡಬಾರದು. ನಾವು ತಾಳ್ಮೆ ಕಳೆದುಕೊಂಡರೆ ಅದನ್ನು ತಡೆಯಲು ಸಾಧ್ಯವಿಲ್ಲವೆಂದು ಸರ್ಕಾರವನ್ನು ಎಚ್ಚರಿಸಿದರು.

ಈ ತಾಲ್ಲೂಕಿನ ಉತ್ತರದ ಭಾಗದಲ್ಲಿ ದಿಬ್ಬೂರಹಳ್ಳಿ ಸಮೀಪದಲ್ಲಿ ಸುದ್ದೆ ಫ್ಯಾಕ್ಟರಿಗೆ ಭೂಮಿಯನ್ನು ಸರ್ಕಾರ ಕೊಟ್ಟಿದೆ. ಅದನ್ನು ತೆಗೆದುಕೊಳ್ಳಲಿ, ಫಲವತ್ತಾದ ಭೂಮಿಯನ್ನು ಕೆಐಎಡಿಬಿಗೆ ರೈತರು ನೀಡುವುದಿಲ್ಲ. ರೈತರ ಒಗ್ಗಟ್ಟನ್ನು ಒಡೆಯುವುದೇ ರಾಜಕಾರಣಿಗಳು, ರೈತರು ನ್ಯಾಯಾಲಯಕ್ಕೆ ಹೋಗುತ್ತೇವೆ, ಕಾನೂನು ಪ್ರಕ್ರಿಯೆಗೆ ಹೋದರೆ ಅಧಿಕಾರಿಗಳು ಅಪರಾಧಿಕಾರಿಗಳಾಗುತ್ತೀರಿ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು. ಕೂಡಲೇ ರೈತರು ಭೂಮಿ ಕೊಡುವುದಿಲ್ಲವೆಂಬ ವರದಿಯನ್ನು ಸರ್ಕಾರಕ್ಕೆ ಕಳುಹಿಸುವ ಕೊಡುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಒತ್ತಾಯಿಸಿದರು.

ಫಲವತ್ತಾದ ಭೂಮಿ ಸ್ವಾಧೀನ ಬೇಡ

ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿಲ್ಲ. ತಾಲ್ಲೂಕಿನಲ್ಲಿ ಸಾಕಷ್ಟು ಬರಡು ಭೂಮಿಯಿದೆ ಆ ಭೂಮಿಯಲ್ಲಿ ಕೈಗಾರಿಕೆಗಳು ಮಾಡಿದರೆ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈಕಡೆ ಗಮನಹರಿಸಲಿ ಎಂದರು.

ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಕೆ

ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿ ಮಾತನಾಡಿ ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಿ ಅಂತಿಮವಾಗಿ ತಿಳಿಸಲಾಗುವುದು. ತಕ್ಷಣವೇ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಾಜಣ್ಣ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸೀಕಲ್ ಆನಂದ್ ಗೌಡ, ರೈತ ಮುಖಂಡರಾದ ನಾರಾಯಣಸ್ವಾಮಿ, ವೇಣುಗೋಪಾಲ್, ಹಿರೇಬಲ್ಲ ಕೃಷ್ಣಪ್ಪ, ಹಿತ್ತಲಹಳ್ಳಿ ರಮೇಶ್, ಗುಡಿಹಳ್ಳಿ ಕೆಂಪಣ್ಣ, ವೀರಾಪುರ ಮುನಿನಂಜಪ್ಪ, ದಲಿತ ಮುಖಂಡ ವೆಂಕಟೇಶ್, ಮತ್ತಿತರರು ಇದ್ದರು.