ಶೀತ ಗಾಳಿ, ಆಗಾಗ, ಹಿಮದಂತೆ ಸೂರಿಯುವ ಸೋನೆ ಮಳೆ, ಮೈ ಕೊರೆಯುವ ಚಳಿ. ಸಾಮಾನ್ಯವಾಗಿ ಈ ರೀತಿಯ ವಾತಾವರಣವು ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ನಿತ್ಯ ಕಂಡು ಬರುತ್ತದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಒಂದು ಹಂತಕ್ಕೆ ಕಾಶ್ಮೀರವನ್ನೂ ಮೀರಿಸುವಂತಹ ಮೋಹಕ ರಮಣೀಯ ವಾತಾವರಣ ಸೃಷ್ಟಿ
ಬೆಂಗಳೂರು : ಶೀತ ಗಾಳಿ, ಆಗಾಗ, ಹಿಮದಂತೆ ಸೂರಿಯುವ ಸೋನೆ ಮಳೆ, ಮೈ ಕೊರೆಯುವ ಚಳಿ. ಸಾಮಾನ್ಯವಾಗಿ ಈ ರೀತಿಯ ವಾತಾವರಣವು ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ನಿತ್ಯ ಕಂಡು ಬರುತ್ತದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಒಂದು ಹಂತಕ್ಕೆ ಕಾಶ್ಮೀರವನ್ನೂ ಮೀರಿಸುವಂತಹ ಮೋಹಕ ರಮಣೀಯ ವಾತಾವರಣ ಸೃಷ್ಟಿಯಾಗಿದೆ.
ದಿತ್ವಾ ಚಂಡಮಾರುತದ ರೆಕ್ಕೆಗಳು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಬಳಸಿಕೊಂಡು ಹಾರುತ್ತಿರುವುದರಿಂದ ಇಡೀ ನಗರವು ಕಳೆದ ಎರಡು ದಿನಗಳಿಂದ ಅಕ್ಷರಶಃ ಹವಾನಿಯಂತ್ರಿತ ಪೆಟ್ಟಿಗೆಯಂತೆ ಮಾರ್ಪಟಿದೆ. ಹೀಗಾಗಿ, ಐಟಿ ಮಂದಿಯು ಸ್ವೆಟರ್, ಮಫ್ಲರ್, ಜಾಕೆಟ್, ಟೋಪಿ ಇಲ್ಲದೇ ಮನೆಯಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಶುಕ್ರವಾರದಿಂದಲೇ ಬೆಂಗಳೂರು ನಗರದಲ್ಲಿ ವಿಪರೀತ ಅನಿಸುವಷ್ಟು ತಂಗಾಳಿ, ನಡುಗುವಷ್ಟು ಚಳಿಯ ಅನುಭವ ಆಗುತ್ತಿದೆ. ಕೇವಲ ಮುಂಜಾನೆ, ಸಂಜೆ ಅಲ್ಲದೆ ದಿನವಿಡಿಯೂ ಕಳೆದೆರಡು ದಿನದಿಂದ ಮೋಡ ತುಂಬಿದ್ದು, ಭಾನುವಾರ ಕೂಡಾ ಇದೇ ವಾತಾವರಣ ಮುಂದುವರೆದಿದೆ. ಸೋಮವಾರ ಬಿಸಿಲು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಿಲಿಕಾನ್ ಸಿಟಿ ಮಂದಿ ವಾರಾಂತ್ಯಕ್ಕಾಗಿ ಕಾದು ಕುಳಿತಿರುತ್ತಾರೆ. ಅದೆಲ್ಲದಕ್ಕೂ ಚಳಿ ಹಾಗೂ ಸೋನೆ ಮಳೆ ಒಂದು ಹಂತಕ್ಕೆ ಅಡ್ಡಿ ಪಡಿಸಿದೆ ಎನ್ನಬಹುದಾಗಿದೆ. ಶನಿವಾರ ಹಾಗೂ ಭಾನುವಾರ ನಗರದ ಮಾಲ್, ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್‌ಗಳಲ್ಲಿ ತುಂಬಿ ತುಳುಕುತ್ತಿದ್ದವು. ಆದರೆ, ಭಾನುವಾರದ ವಾರಾಂತ್ಯದಲ್ಲಿ ಅದ್ಯಾವುದೂ ದೊಡ್ಡ ಪ್ರಮಾಣದಲ್ಲಿ ಕಂಡು ಬರಲಿಲ್ಲ. ಅತ್ಯಗತ್ಯ ಕೆಲಸಗಳನ್ನು ಹೊರತು ಪಡಿಸಿ ಮನೆಯಿಂದ ಹೊರ ಬರಲಿಲ್ಲ. ಇದರಿಂದ ನಗರದ ರಸ್ತೆಗಳು ಬಹುತೇಕ ಖಾಲಿ ಖಾಲಿ ಕಂಡು ಬಂದವು.
ಫಾಸ್ಟ್ ಪುಡ್ ಮುಂದೆ ಸಾಲು:
ಸಂಜೆ ಸಮಯದಲ್ಲಿ ಗರಿ ಗರಿ ಮಿರ್ಚಿ, ಮಂಡಕ್ಕಿ, ಬಿಸಿ ಪಾನಿಪೂರಿ, ಫಾಸ್ಟ್ ಪುಡ್, ಕಾಫಿ, ಟೀ ಸೆಂಟರ್‌ಗಳ ಮುಂದೆ ಭಾರೀ ಪ್ರಮಾಣ ಗ್ರಾಹಕರು ಕಂಡು ಬಂದರು. ಮತ್ತೆ ಕೆಲವರೂ ತಮ್ಮ ತಮ್ಮ ಮನೆಗಳಲ್ಲಿಯೇ ಬಿಸಿ ಬಿಸಿ ಕಾಫಿ, ಟೀ, ಕುರುಕಲು ತಿಂಡಿ ಸೇವನೆ ಮಾಡುತ್ತಾ ಟಿವಿ ಮುಂದೆ ಕುಳಿತು ದಿನ ಕಳೆದರು.
ಪಾರ್ಕ್ ಮತ್ತು ಆಟದ ಮೈದಾನ ಖಾಲಿ ಖಾಲಿ:
ಸಾಮಾನ್ಯವಾಗಿ ವಾರಾಂತ್ಯದಲ್ಲಿ ಉದ್ಯಾನವನಗಳು ಹಾಗೂ ಮೈದಾನಗಳಲ್ಲಿ ಭಾರೀ ಪ್ರಮಾಣದ ಜನಸಂಖ್ಯೆ ಕಂಡು ಬರುತ್ತಿತ್ತು. ಇಡೀ ದಿನ ಚಳಿ ವಾತಾವರಣ ಇರುವುದರಿಂದ ಪಾರ್ಕ್‌ಗಳಲ್ಲಿ ಬೆರಳೆಣಿಯಷ್ಟು ಮಂದಿ ಮಾತ್ರ ಕಂಡು ಬಂದರು. ಇನ್ನೂ ಮಕ್ಕಳು ಆಟದ ಮೈದಾನದ ಕಡೆ ಸುಳಿಯಲೇ ಇಲ್ಲ.
ವಾಯುವಿವಾರಕ್ಕೆ ಬ್ರೇಕ್:
ಚಳಿ, ಮಳೆಯ ಕಾರಣಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ವಾಯು ವಿಹಾರಕ್ಕೆ ತೆರಳುವವರ ಸಂಖ್ಯೆ ಕಡಿಮೆಯಾಗಿದೆ. ಚಳಿಗೆ ಆರೋಗ್ಯ ಸಮಸ್ಯೆ ಉಂಟಾಗಲಿದೆ ಎಂಬ ಕಾರಣಕ್ಕೆ ಮನೆಯಲ್ಲಿಯೇ ಟ್ರಡ್‌ಮಿಲ್‌ಗಳ ಮೇಲೆ ಬೆವರು ಇಳಿಸುವ ಪ್ರಯತ್ನಗಳನ್ನು ಮಾಡಬೇಕಾಯಿತು.
ಭಾನುವಾರ ಗರಿಷ್ಠ ಉಷ್ಣಾಂಶ 7.2 ಡಿಗ್ರಿ ಕುಸಿತ:
ಭಾನುವಾರ ಗರಿಷ್ಠ ಉಷ್ಣಾಂಶವು 20.2, ಕನಿಷ್ಠ ಉಷ್ಣಾಂಶವು 18.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ವಾಡಿಕೆ ಪ್ರಮಾಣಕ್ಕಿಂತ ಬರೋಬ್ಬರಿ 7.2 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶನಿವಾರ ನಗರದಲ್ಲಿ ಗರಿಷ್ಠ ಉಷ್ಣಾಂಶವು ವಾಡಿಕೆ ಪ್ರಮಾಣಕ್ಕಿಂತ 5.5 ಡಿಗ್ರಿ ಸಲ್ಶಿಯಸ್ ಕುಸಿತವಾಗಿತ್ತು.
