ರಾಜಧಾನಿ ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆಯಿಂದ ವಾಹನಗಳಿಗೆ ಮಾತ್ರ ಅನುಕೂಲವಾಗುತ್ತದೆಯೇ ಹೊರತು ಜನಸಾಮಾನ್ಯರಿಗೆ ಉಪಯೋಗವಿಲ್ಲ. ಯೋಜನೆಯಿಂದ ಹೆಬ್ಬಾಳ ಕೆರೆ, ಸ್ಯಾಂಕಿ ಕೆರೆ ಸೇರಿದಂತೆ ಲಾಲ್‌ಬಾಗ್‌ನಂತಹ ಪರಿಸರಕ್ಕೂ ಹಾನಿ ಉಂಟಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆಯಿಂದ ವಾಹನಗಳಿಗೆ ಮಾತ್ರ ಅನುಕೂಲವಾಗುತ್ತದೆಯೇ ಹೊರತು ಜನಸಾಮಾನ್ಯರಿಗೆ ಉಪಯೋಗವಿಲ್ಲ. ಯೋಜನೆಯಿಂದ ಹೆಬ್ಬಾಳ ಕೆರೆ, ಸ್ಯಾಂಕಿ ಕೆರೆ ಸೇರಿದಂತೆ ಲಾಲ್‌ಬಾಗ್‌ನಂತಹ ಪರಿಸರಕ್ಕೂ ಹಾನಿ ಉಂಟಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ ವರೆಗೆ ಹಾಗೂ ಕೆ.ಆರ್‌.ಪುರದಿಂದ ಮೈಸೂರು ರಸ್ತೆವರೆಗೆ ಎರಡು ಹಂತದಲ್ಲಿ ಸಾವಿರಾರು ಕೋಟಿ ರು. ವೆಚ್ಚ ಮಾಡಿ ಸುರಂಗ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವ ಕುರಿಂತೆ ನಗರದ ಎಸ್‌ಸಿಎಂ ಹೌಸ್‌ನಲ್ಲಿ ಭಾನುವಾರ ಬೆಂಗಳೂರು ಉಳಿಸಿ ಸಮಿತಿ ಆಯೋಜಿಸಿದ್ದ ‘ಬೆಂಗಳೂರು ಸುರಂಗ ರಸ್ತೆ ಯೋಜನೆ ಕೈಬಿಡಿ, ಜನಸಮಾವೇಶ’ದಲ್ಲಿ ಸಾರಿಗೆ, ಪರಿಸರ ವಿಜ್ಞಾನ, ಭೂವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದ ತಜ್ಞರು ಯೋಜನೆಯನ್ನು ಒಕ್ಕೊರಲಿನಿಂದ ವಿರೋಧಿಸಿದರು.

ಈ ವೇಳೆ ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆ, ಪರಿಸರ ವಿಜ್ಞಾನಕೇಂದ್ರ ವೈಜ್ಞಾನಿಕ ಅಧಿಕಾರಿ ಡಾ.ಟಿ.ವಿ.ರಾಮಚಂದ್ರ, ಬೆಂಗಳೂರು ನಗರ ಪ್ರವಾಹ ಮತ್ತು ಮಳೆಯನ್ನು ಸಹಿಸುವ ಶಕ್ತಿಯನ್ನು ಈಗಾಗಲೇ ಕಳೆದುಕೊಂಡಿದೆ. ಅತಿ ವೇಗದ ನಗರೀಕರಣ, ಸಸ್ಯವರ್ಗ ಮತ್ತು ಜಲಮೂಲಗಳ ನಾಶ ಮತ್ತು ಅನಿಯಂತ್ರಿತ ಕಾಂಕ್ರೀಟೀಕರಣದಿಂದ ಬೆಂಗಳೂರಿನ ಹವಾಮಾನದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸಾರಿಗೆ ತಜ್ಞ ಪ್ರೊ.ಆಶೀಶ್ ವರ್ಮಾ ಮಾತನಾಡಿ, ಸುರಂಗ ಯೋಜನೆಯು ಸಾರ್ವಜನಿಕ ಹಣದ ವ್ಯರ್ಥ ಮತ್ತು ತಲೆಮಾರುಗಳವರೆಗೆ ನಗರಕ್ಕೆ ಹಾನಿ ಮಾಡುವ ಯೋಜನೆಯಾಗಿದೆ. ಯೋಜನೆಯು ಖಾಸಗಿ ವಾಹನ ಬಳಕೆ ಉದ್ದೇಶವನ್ನು ಹೊಂದಿದೆ. ಮೆಟ್ರೋ ಮತ್ತು ಉಪನಗರ ರೈಲುಗಳ ಪ್ರಯಾಣಿಕರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಂಗಳೂರಿನ ಸಮಗ್ರ ಚಲನಶೀಲತಾ ಯೋಜನೆಯನ್ನು ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಸಿದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಪ್ರೊ. ಸಿ.ಪಿ.ರಾಜೇಂದ್ರನ್ ಮಾತನಾಡಿ, ಸುರಂಗ ಯೋಜನೆಯಿಂದ ನಗರದಲ್ಲಿ ಸಮಸ್ಯೆ ಹೆಚ್ಚಾಗಲಿದೆ ಹೊರತು, ಯಾವುದೇ ರೀತಿಯಲ್ಲೂ ಜನೋಪಯುಕ್ತವಲ್ಲ. ಸುರಂಗ ಯೋಜನೆಯಿಂದ ಭೂಕಂಪನ ಅಪಾಯಗಳನ್ನು ಎದುರಿಸಬೇಕಾಗಲಿದ್ದು, ಬದಲಾಯಿಸಲಾಗದ ಪರಿಸರ ಹಾನಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ನಗರ ಸಾರಿಗೆ ಯೋಜನಾ ತಜ್ಞ ಪ್ರೊ. ಎಂ.ಎನ್. ಶ್ರೀಹರಿ ಮಾತನಾಡಿ, ಸುರಂಗ ಯೋಜನೆಗಳು ಮುಖ್ಯವಾಗಿ ಮುಂಬೈ, ಚೆನ್ನೈನಂತಹ ಕರಾವಳಿ ನಗರಗಳಿಗೆ ಸೂಕ್ತವಾಗುತ್ತದೆ. ಇದು ಜನ ಸಾಮಾನ್ಯರ ಪರವಾಗಿಲ್ಲ. ಈ ಯೋಜನೆಯನ್ನು ಕೈಬಿಟ್ಟು, ಸಾಮೂಹಿಕ ಸಾರಿಗೆ ವ್ಯವಸ್ಥೆಗಳನ್ನು ವಿಸ್ತರಿಸುವಲ್ಲಿ ಹೂಡಿಕೆಗಳಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಸಿವಿಕ್ ಬೆಂಗಳೂರು ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್‍ ಮಾತನಾಡಿ, ಇಂತಹ ದುಬಾರಿ, ಕಾರು ಕೇಂದ್ರಿತ ಯೋಜನೆಗಳ ಬದಲಿಗೆ, ಬಸ್‌ ವಿಸ್ತರಿಸುವುದು, ಉಪನಗರ ರೈಲುಗಳನ್ನು ಸುಧಾರಿಸುವುದು, ಕೊನೆಯ ಮೈಲಿ ಸಂಪರ್ಕವನ್ನು ಖಚಿತಪಡಿಸುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಕೈಗೆಟುಕುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಬೆಂ.ವಿವಿ ಭೂವಿಜ್ಞಾನ ಭಾಗದ ನಿಕಟಪೂರ್ವ ಮುಖ್ಯಸ್ಥ ಪ್ರೊ.ರೇಣುಕಾ ಪ್ರಸಾದ್, ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, ಡಾ. ಧರ್ಮಾನಂದ್ ಮತ್ತು ಭೂವಿಜ್ಞಾನ ಪ್ರಾಧ್ಯಾಪಕ ಶ್ರೀನಿವಾಸ್ ಸೇರಿದಂತೆ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು

ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ₹70000 ಕೋಟಿ ವೆಚ್ಚ:

ಬೆಂಗಳೂರು ಉಳಿಸಿ ಸಮಿತಿ ಸಂಚಾಲಕ ಜಿ.ಶಶಿಕುಮಾರ್ ಮಾತನಾಡಿ, ಸುರಂಗ ರಸ್ತೆಯ ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ವೆಚ್ಚವು ₹70 ಸಾವಿರ ಕೋಟಿಗೆ ತಲುಪಲಿದೆ. ಜನರು 40 ವರ್ಷ ಟೋಲ್‌ ಹೊರೆ ಹೊರಬೇಕಾಗುತ್ತದೆ. ಇಲ್ಲಿ ಗಂಟೆಗೆ 1,800 ಕಾರು ಪ್ರಯಾಣಿಕರು ಸಂಚರಿಸಬಹುದು. ಅದೇ ಸಮಯದಲ್ಲಿ ಮೆಟ್ರೊದಲ್ಲಿ 69,000, ಬಿಎಂಟಿಸಿ ಬಸ್‌ಗಳಲ್ಲಿ 1.75 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ವಿವರಿಸಿದರು.