ಗ್ರಾಮೀಣ ಜನರ ಸೇವೆಗೆ ವೈದ್ಯರು ಸಮಯ ಮೀಸಲಿಡಿ: ಅಜೀಂ ಪ್ರೇಮ್‌ಜಿ

| Published : May 07 2025, 01:46 AM IST

ಗ್ರಾಮೀಣ ಜನರ ಸೇವೆಗೆ ವೈದ್ಯರು ಸಮಯ ಮೀಸಲಿಡಿ: ಅಜೀಂ ಪ್ರೇಮ್‌ಜಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರ ಪ್ರದೇಶ, ಕಾರ್ಪೊರೇಟ್‌ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಕೂಡ ತಮ್ಮ ಸಮಯದ ಒಂದು ಭಾಗವನ್ನಾದರೂ ಕೊಳಗೇರಿ ನಿವಾಸಿಗಳು, ಗ್ರಾಮೀಣ ಭಾಗದ ಜನರ ಸೇವೆಗೆ ಮೀಸಲಿಡಬೇಕು ಎಂದು ಅಜೀಂ ಪ್ರೇಮ್‌ಜಿ ಫೌಂಡೇಷನ್ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ಪ್ರದೇಶ, ಕಾರ್ಪೊರೇಟ್‌ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಕೂಡ ತಮ್ಮ ಸಮಯದ ಒಂದು ಭಾಗವನ್ನಾದರೂ ಕೊಳಗೇರಿ ನಿವಾಸಿಗಳು, ಗ್ರಾಮೀಣ ಭಾಗದ ಜನರ ಸೇವೆಗೆ ಮೀಸಲಿಡಬೇಕು ಎಂದು ಅಜೀಂ ಪ್ರೇಮ್‌ಜಿ ಫೌಂಡೇಷನ್ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಸಲಹೆ ನೀಡಿದ್ದಾರೆ.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಮಂಗಳವಾರ ನಗರದ ನಿಮ್ಹಾನ್ಸ್‌ ಸಭಾಂಗಣದಲ್ಲಿ ಆಯೋಜಿಸಿದ್ದ 27ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ದೇಶದ ಅಭಿವೃದ್ಧಿ ಹಾಗೂ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಾಮುಖ ಪಾತ್ರವಹಿಸುತ್ತವೆ. ಇಲ್ಲಿ ಕಾರ್ಯನಿರ್ವಹಿಸುವವರು ಪ್ರಾಮಾಣಿಕತೆ, ಸಮಗ್ರತೆ ಮತ್ತು ನೈತಿಕತೆಯನ್ನು ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ವೈದ್ಯರು ದುರ್ಬಲ ವರ್ಗದ ಜನರು ವಾಸಿಸುವ ಕೊಳಗೇರಿಗಳು ಹಾಗೂ ಆರೋಗ್ಯ ಸೇವೆ ಸಮರ್ಪಕವಾಗಿಲ್ಲದ ಗ್ರಾಮೀಣ ಭಾಗಗಳಲ್ಲಿ ಸೇವೆಗಾಗಿ ಮಹಾನಗರ ಅಥವಾ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರೂ ತಮ್ಮ ಸಮಯದ ಒಂದು ಭಾಗವನ್ನಾದರೂ ಮೀಸಲಿಡಬೇಕು. ವೈದ್ಯಕೀಯ ವೃತ್ತಿಯನ್ನು ಕೇವಲ ವ್ಯಾವಹಾರದ ದೃಷ್ಟಿಯಿಂದಷ್ಟೇ ನೋಡದೆ, ಸೇವಾ ಮನೋಭಾವದಿಂದಲೂ ನೋಡಿದರೆ ಒಳ್ಳೆಯ ವೈದ್ಯರಾಗಬಹುದು ಎಂದು ಹೇಳಿದರು.

ರಾಜ್ಯಪಾಲ ಥಾವರ್ ಚಂದ್‌ ಗೆಹಲೋತ್‌ ಮಾತನಾಡಿ, ಮಹರ್ಷಿ ಚರಕನನ್ನು ಭಾರತದಲ್ಲಿ ಆಯುರ್ವೇದ ಮತ್ತು ಔಷಧದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಮಹರ್ಷಿ ಸುಶ್ರುತನನ್ನು ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಸ್ವಾತಂತ್ರ್ಯದ ನಂತರ, ದೇಶವು ವೈದ್ಯಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಆದರೂ, ಗ್ರಾಮೀಣ ಭಾರತದಲ್ಲಿ ಇನ್ನೂ ಕೂಡ ಆರೋಗ್ಯ ವ್ಯವಸ್ಥೆ ಸಮರ್ಪಕವಾಗಿಲ್ಲ. ನಮ್ಮ ಯುವ ವೈದ್ಯರು ಹಳ್ಳಿಗಳತ್ತ ಮುಖ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಯುವ ವೈದ್ಯರು ಮುಂದಾಗಬೇಕು ಎಂದು ಕರೆ ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಮಾತನಾಡಿ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಪದವಿ ಪಡೆಯುವ ಪ್ರತಿಯೊಬ್ಬರಿಗೂ ಸೇವೆಯೇ ಮುಖ್ಯ ಧ್ಯೇಯವಾಗಿರಬೇಕು. ರೋಗಿಗಳನ್ನು ಅತ್ಯಂತ ಶ್ರದ್ಧೆಯಿಂದ ಹಾಗೂ ಹೆಚ್ಚು ಕಾಳಜಿ ವಹಿಸಿ ಆರೈಕೆ ಮಾಡಬೇಕು. ನಿಮ್ಮ ಸೇವೆಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್, ಕುಲಸಚಿವ ಶಿವಪ್ರಸಾದ್ ಪಿ.ಆರ್ ಉಪಸ್ಥಿತರಿದ್ದರು.

63,982 ವಿದ್ಯಾರ್ಥಿಗಳಿಗೆ ಪದವಿ, ಮೂವರಿಗೆ ಡಾಕ್ಟರೇಟ್‌ ಪ್ರದಾನ:

ಘಟಿಕೋತ್ಸದದಲ್ಲಿ 93 ವಿದ್ಯಾರ್ಥಿಗಳಿಗೆ 109 ಚಿನ್ನದ ಪದಕ ಹಾಗೂ ಪದವಿ ಪ್ರದಾನ ಪತ್ರ ಮತ್ತು ಈ ಬಾರಿ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಅರ್ಹರಾಗಿರುವ 63,982 ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಸಾಂಕೇತಿಕವಾಗಿ ಗಣ್ಯರು ಪದವಿ ಪ್ರದಾನ ಮಾಡಿದರು. ನಂತರ ಉಳಿದ ವಿದ್ಯಾರ್ಥಿಗಳಿಗೆ ಅಜೀಂ ಪ್ರೇಮ್‌ಜಿ ಹಾಗೂ ರಾಜ್ಯಪಾಲರು ಪದವಿ ಪ್ರಮಾಣ ಪತ್ರ ವಿತರಿಸಿದರು. ಇದೇ ವೇಳೆ ವಿಜ್ಞಾನಿ, ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್‌ ಕೇಂದ್ರದ ಮುಖ್ಯಸ್ಥ ಡಾ.ಹೊಂಬೇಗೌಡ ಶರತ್‌ಚಂದ್ರ, ಒಎಂಎಫ್ ಸರ್ಜನ್ ಡಾ. ಗಿರೀಶ್ ರಾವ್ ಮತ್ತು ನರರೋಗ ತಜ್ಞ ಡಾ. ಜಿ.ಟಿ. ಸುಭಾಷ್ ಅವರಿಗೆ ರಾಜ್ಯಪಾಲರು ಡಾಕ್ಟರ್ ಆಫ್ ಸೈನ್ಸ್‌ ಪ್ರದಾನ ಮಾಡಿ ಗೌರವಿಸಿದರು.