‘31,000 ಕನಿಷ್ಠ ವೇತನ ಜಾರಿಯಾದ್ರೆ ಕಷ್ಟ’ - ನೆರೆ ರಾಜ್ಯಗಳಲ್ಲಿ ಕನಿಷ್ಠ ವೇತನ ಕಡಿಮೆ

| N/A | Published : Oct 30 2025, 12:04 PM IST

 Uma Reddy
‘31,000 ಕನಿಷ್ಠ ವೇತನ ಜಾರಿಯಾದ್ರೆ ಕಷ್ಟ’ - ನೆರೆ ರಾಜ್ಯಗಳಲ್ಲಿ ಕನಿಷ್ಠ ವೇತನ ಕಡಿಮೆ
Share this Article
  • FB
  • TW
  • Linkdin
  • Email

ಸಾರಾಂಶ

  ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಕೈಗಾರಿಕಾ ಕ್ಷೇತ್ರದ ಕೇಂದ್ರ ಬಿಂದು. ಸಂಸ್ಥೆಯ 2025-26ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಉಮಾ ರೆಡ್ಡಿ ಆಯ್ಕೆಯಾಗಿದ್ದಾರೆ. ‘31,000 ಕನಿಷ್ಠ ವೇತನ ಜಾರಿಯಾದ್ರೆ ಕಷ್ಟ’ - ನೆರೆ ರಾಜ್ಯಗಳಲ್ಲಿ ಕನಿಷ್ಠ ವೇತನ ಕಡಿಮೆ ಎಂದಿದ್ದಾರೆ

ಮುಖಾಮುಖಿ 

- ಉಮಾ ರೆಡ್ಡಿ

 ಮಯೂರ್ ಹೆಗಡೆ

  ಬೆಂಗಳೂರು

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಕೈಗಾರಿಕಾ ಕ್ಷೇತ್ರದ ಕೇಂದ್ರ ಬಿಂದು. ಸಂಸ್ಥೆಯ 2025-26ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಉಮಾ ರೆಡ್ಡಿ ಆಯ್ಕೆಯಾಗಿದ್ದಾರೆ. ಸರ್‌ ಎಂ.ವಿಶ್ವೇಶ್ವರಯ್ಯ ಸ್ಥಾಪಿಸಿದ ಎಫ್‌ಕೆಸಿಸಿಐನ 108 ವರ್ಷಗಳ ಇತಿಹಾಸದಲ್ಲಿ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು. ಹೊಸ ಜವಾಬ್ದಾರಿ ಹೊತ್ತಿರುವ ಅವರು ಪ್ರಸ್ತುತ ಉದ್ಯಮಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಕೈಗೊಳ್ಳಬೇಕಾದ ಪರಿಹಾರ, ಉದ್ಯಮಗಳು ಬೆಳೆಯಲು ಸರ್ಕಾರದಿಂದ ನಿರೀಕ್ಷಿಸುತ್ತಿರುವ ನೆರವು, ಬಂಡವಾಳ ಹೂಡಿಕೆ, ವಿಶೇಷವಾಗಿ ಮಹಿಳೆಯರಿಗೆ ಉದ್ಯಮ ಕ್ಷೇತ್ರದ ಪ್ರವೇಶಕ್ಕೆ ಬೇಕಾದ ತಯಾರಿ, ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೈಗಾರಿಕೆ ವಲಯಗಳ ಸಮಸ್ಯೆಗಳ ಪರಿಹಾರದ ಬಗ್ಗೆ ‘ಕನ್ನಡಪ್ರಭ’ದ ಜತೆಗೆ ‘ಮುಖಾಮುಖಿ’ಯಾಗಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಬಂದ ದಾರಿ ಹೇಗಿತ್ತು?

- ಹೈಟೆಕ್ ಮ್ಯಾಗ್ನೆಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್‌ ನನ್ನ ಕಂಪನಿ. ಟ್ರಾನ್ಸ್‌ಫಾರ್ಮರ್‌, ಕಾಯಿಲ್, ಎಲೆಕ್ಟ್ರಾನಿಕ್ಸ್‌, ಇಂಡಸ್ಟ್ರಿಯಲ್‌ ಅಪ್ಲಿಕೇಶನ್‌ ಸಂಬಂಧಿತ ಪರಿಕರ ಉತ್ಪಾದನೆ ನಮ್ಮದು. ನಾನು ಉದ್ಯಮ ಆರಂಭಿಸಿದ್ದು 80ರ ದಶಕದ ಅನ್‌ಲಾಗ್ ಯುಗದಲ್ಲಿ, ಈಗ ಡಿಜಿಟಲ್‌ನಿಂದ ಎಐ, ರೊಬೋಟಿಕ್ಸ್‌ನತ್ತ ಹೊರಳುತ್ತಿದ್ದೇನೆ. ಕ್ಲಿಕ್‌, ಅವೇಕ್‌ ಮಹಿಳಾ ಉದ್ದಿಮೆದಾರರ ಸಂಸ್ಥೆ ನಿರ್ವಹಣೆಯ ಅನುಭವ ಕೊಟ್ಟಿತು. ಇ-ಮರ್ಜ್‌ ಸಂಸ್ಥೆ ಸ್ಥಾಪಿಸಿದೆ. 2005ರಿಂದ ಎಫ್‌ಕೆಸಿಸಿಐ ನಲ್ಲಿದ್ದೇನೆ. ಮಹಿಳೆಯಾಗಿ ಎಫ್‌ಕೆಸಿಸಿಐ ಯಂಥ ರಾಜ್ಯಮಟ್ಟದ ಮುಖ್ಯವಾಹಿನಿ ಸಂಘಟನೆಯ ಅಧ್ಯಕ್ಷೆಯಾಗಿ ಆಯ್ಕೆಯಾಗುವುದು ಸುಲಭ ಆಗಿರಲಿಲ್ಲ.

*ಎಫ್‌ಕೆಸಿಸಿಐ ಅಧ್ಯಕ್ಷರಾಗಿ ಇಟ್ಟುಕೊಂಡಿರುವ ಗುರಿ, ಕನಸುಗಳೇನು?

ಅಧ್ಯಕ್ಷಳಾಗಿ ನಾನು ನನ್ನದೇ ಆದ ಅಲ್ಪಾವಧಿ, ದೀರ್ಘಕಾಲೀನ ಗುರಿ ಇಟ್ಟುಕೊಂಡಿದ್ದೇನೆ. ಅಂತಾರಾಷ್ಟ್ರೀಯ ವ್ಯವಹಾರ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಿತಿ ನಿರ್ವಹಿಸಿದ್ದೇನೆ. ಏಕಾಏಕಿ ಬದಲಾವಣೆ ಸಾಧ್ಯವಿಲ್ಲ. ಆದರೆ, ಸಂಸ್ಥೆಯು ಭವಿಷ್ಯದಲ್ಲಿ ರಾಜ್ಯದಲ್ಲಿ 10 ಲಕ್ಷ ಹೊಸ ಉದ್ಯಮಿಗಳನ್ನು ರೂಪಿಸುವ ಗುರಿ ಹೊಂದಿದೆ. ಎನ್‌ಆರ್‌ಐ, ವಿದೇಶಿ ಕನ್ನಡಿಗರು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ, ಓಲೈಕೆ ಮಾಡುವುದು ನಮ್ಮ 2025-26ರ ವಿಷನ್‌ ಸ್ಟೇಟ್‌ಮೆಂಟ್‌. ಯುವ ಉದ್ಯಮಿಗಳಿಗೆ ಅವಕಾಶ ಕಲ್ಪಿಸುವ ಕಾರ್ಯ ನಡೆಯಲಿದೆ. ಸಂಸ್ಥೆ ಒಳಗೊಂಡ 5 ಸಾವಿರ ನೇರ, 2 ಲಕ್ಷ ಪರೋಕ್ಷ ಸದಸ್ಯರ ಅಹವಾಲನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ, ಬಜೆಟ್‌ ವೇಳೆ ನೀತಿ ನಿರೂಪಣೆ ವಿಚಾರದಲ್ಲಿ ಸರ್ಕಾರಕ್ಕೆ ನೆರವು, ಜತೆಗೆ ರಾಜ್ಯದ ಕೈಗಾರಿಕೆ, ವಾಣಿಜ್ಯೋದ್ಯಮ, ಪ್ರವಾಸೋದ್ಯಮ, ಕೃಷಿಟೆಕ್‌ ಎಕ್ಸ್‌ಪೋ, ಸಿಎಸ್ಆರ್ ನಿಧಿ ಬಳಕೆ ಮಾರ್ಗದರ್ಶನ ಮುಂದುವರಿಯಲಿದೆ. ಶೀಘ್ರ ಎಫ್‌ಕೆಸಿಸಿಐ ಪುನಃ ‘ಐಎಸ್‌ಒ-9001’ ಪ್ರಮಾಣಪತ್ರ ಪಡೆಯುವಂತೆ ಆಗಬೇಕು. ಇಲ್ಲಿನ ವ್ಯವಹಾರ ಡಿಜಿಟಲೀಕರಣ ಮಾಡಬೇಕಿದೆ.

*ಸಂಸ್ಥೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರಾ ಕಡಿಮೆಯಾಗಿಲ್ಲವೇ, ಹೆಚ್ಚಿಸುವ ಉದ್ದೇಶವಿದೆಯೇ?

ಸಂಸ್ಥೆಯ 72 ಬೋರ್ಡ್‌ನಲ್ಲಿ ಪ್ರತಿವರ್ಷ 4-5 ಮಹಿಳೆಯರು ಮಾತ್ರ ಇದ್ದೇವೆ. ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ಗುರಿಯಿದೆ. ಸಭೆಗೆ ಬರುವ ಆಹ್ವಾನಿತ ಸದಸ್ಯರಲ್ಲಿ ಮಹಿಳೆಯರ ಸಂಖ್ಯೆಯನ್ನು ಆರಕ್ಕೆ ಏರಿಸಿ ಅವರಿಗೆ ಎಫ್‌ಕೆಸಿಸಿಐ ಕಾರ್ಯಕಲಾಪದ ಅನುಭವ ದೊರಕಿಸಿಕೊಡಬೇಕು. ಈ ಅವಕಾಶ ಕಲ್ಪಿಸುವ ಮೂಲಕ ಅವರಿಗೆ ಮುಖ್ಯವಾಹಿನಿಗೆ ಬರಲು ಅನುವು ಮಾಡಿಕೊಡುವ ಉದ್ದೇಶವಿದೆ.

*ಕೈಗಾರಿಕೆ, ವಾಣಿಜ್ಯೋದ್ಯಮ ವಿಷಯದಲ್ಲಿ ಸರ್ಕಾರದಿಂದ ತುರ್ತಾಗಿ ಆಗಬೇಕಾದ ಪರಿಹಾರವೇನು?

ಸಾಕಷ್ಟಿದೆ. ಮೊದಲು ಎಂಎಸ್‌ಎಂಇ ( ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ) ನೀತಿಯಿಂದ ಎಂಎಸ್‌ಇ (ಮೈಕ್ರೋ ಸ್ಮಾಲ್‌ ಇಂಡಸ್ಟ್ರಿ) ನೀತಿ ಪ್ರತ್ಯೇಕಿಸಿ ಸಣ್ಣ ಉದ್ಯಮ ಬೆಳೆಯಲು ಅವಕಾಶ ಕೊಡಬೇಕು. ಎಂಎಸ್‌ಎಂಇ ಅಡಿ ರಾಜ್ಯದಲ್ಲಿ 2.50ಲಕ್ಷ ಕೈಗಾರಿಕೆಗಳಿವೆ. ಆದರೆ, ಇದರಲ್ಲಿ ಶೇ.96ರಷ್ಟು ₹50 ಕೋಟಿ ಮಿತಿಯೊಳಗಿನ ಮೈಕ್ರೋ ಮತ್ತು ಸಣ್ಣ ಉದ್ದಿಮೆಗಳಿವೆ (ಎಂಎಸ್‌ಇ) ಇವೆ. ಪ್ರಸ್ತುತ ಎಂಎಸ್ಎಂಇ ನೀತಿ ₹500 ಕೋಟಿ ಮೌಲ್ಯದ ಮಧ್ಯಮ ಉದ್ದಿಮೆಗಳಿಗೆ ಮಾತ್ರ ಪೂರಕವಾಗಿದೆ. ಸೀಮಿತ ಅನುದಾನದಲ್ಲಿ ಅವರಿಗೇ ಹೆಚ್ಚಿನ ಸಬ್ಸಿಡಿ ಸಿಗುತ್ತಿದೆ. ಹೀಗಾಗಿ ಪ್ರತ್ಯೇಕ ಎಂಎಸ್‌ಇ ನೀತಿ ರೂಪಿಸಿ ಹಣಕಾಸು ನೆರವು ಒದಗಿಸಬೇಕಿದೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ನೀಡುತ್ತಿದ್ದ ಶೇ.4ರಷ್ಟು ಬಡ್ಡಿದರದ ಸಾಲಸೌಲಭ್ಯ ಸ್ಥಗಿತಗೊಂಡಿದ್ದು, ಅದನ್ನು ಮರು ಪ್ರಾರಂಭಿಸಬೇಕು. ಜತೆಗೆ ಕೈಗಾರಿಕಾ ಪಾರ್ಕ್‌ಗಳಲ್ಲಿ ಮಹಿಳೆಯರಿಗೆ ಶೇ.30ರಷ್ಟು ನಿವೇಶನ ನಿಗದಿಸುವಂತೆ ಆಗ್ರಹಿಸುತ್ತೇವೆ.

*ಬೆಂಗಳೂರಿನ ರಸ್ತೆ ಸಮಸ್ಯೆ, ಮೂಲಸೌಕರ್ಯ ಕೊರತೆ ನಿವಾರಣೆಗೆ ಸಂಸ್ಥೆ ದನಿ ಎತ್ತುತ್ತಿಲ್ಲ ಎಂಬ ಮಾತಿದೆಯಲ್ಲಾ?

ಕಿರಣ್‌ ಮಜುಂದಾರ್ ಷಾ, ಮೋಹನ್‌ದಾಸ್ ಪೈ ಎತ್ತಿದ್ದ ವಿಚಾರಕ್ಕೆ ನಮ್ಮ ಸಹಮತ ಇದೆ. ಉದ್ದಿಮೆ, ವಹಿವಾಟು ಜಾಗತಿಕವಾದಾಗ ಸ್ಪರ್ಧೆಯಲ್ಲುಳಿಯಬೇಕಾದರೆ ರಸ್ತೆ, ಸರಕು ಸಾಗಣೆ, ವಿದ್ಯುತ್‌ ಮೂಲಸೌಲಭ್ಯ ಅಂಶಗಳು ಪ್ರಧಾನ ಪಾತ್ರ ವಹಿಸುತ್ತವೆ. ಜಿಡಿಪಿಗೆ ಕೊಡುಗೆ ನೀಡುವ ಎಂಎಸ್‌ಎಂಇ ಹೆಚ್ಚಬೇಕು, ವಿಶ್ವದರ್ಜೆಯ ಕಂಪನಿ ರಾಜ್ಯಕ್ಕೆ ಬೇಕು ಎಂದರೆ ವಿಶ್ವದರ್ಜೆಯ ಸೌಲಭ್ಯ ಕಲ್ಪಿಸಬೇಕು. ಚೈನಾದಂತೆ ಪ್ರತಿ ಇಂಡಸ್ಟ್ರಿ ಬ್ಲಾಕ್‌ನಲ್ಲಿ ಇನ್‌ಕ್ಯುಬೇಶನ್‌ ಸೆಂಟರ್‌, ಟೆಸ್ಟಿಂಗ್‌ ಲ್ಯಾಬ್‌, ಕಾಮನ್‌ ಫೆಸಿಲಿಟಿ ಸೆಂಟರ್‌, ಲಾಜಿಸ್ಟಿಕ್‌ ಸೌಲಭ್ಯ ಬೇಕು. ಮಂಗಳೂರು ಬಂದರಿಗೆ ರಸ್ತೆಯೇ ಇಲ್ಲದಿದ್ದರೆ, ಕಸ್ಟಮ್ಸ್‌ ವ್ಯವಸ್ಥೆ ವಿಳಂಬವಾದರೆ ಹೇಗೆ? ಪೀಣ್ಯ ಇಂಡಸ್ಟ್ರಿಗೆ ಸುಮ್ಮನೆ ಹೋಗಿ ನೋಡಿ ಒಳ ರಸ್ತೆ ಹೋಪ್‌ಲೆಸ್‌ ಆಗಿದೆ. ಎಲ್‌ಸಿಎ ಎಲೆಕ್ಟ್ರಾನಿಕ್‌ ಸಿಟಿಯನ್ನು ಉದ್ದಿಮೆಗಳೇ ನಿರ್ವಹಿಸುತ್ತಿರುವುದಕ್ಕೆ ಚೆನ್ನಾಗಿದೆ. ಕೈಗಾರಿಕಾ ಮೂಲಸೌಕರ್ಯ ಸಮಸ್ಯೆ ಪರಿಹಾರ ಆಗಲೇಬೇಕು.

*ನೆರೆ ರಾಜ್ಯಗಳು ಕರ್ನಾಟಕದ ಉದ್ದಿಮೆಗಳನ್ನು ಸೆಳೆಯುತ್ತಿರುವುದರಿಂದ ಹೂಡಿಕೆದಾರರಲ್ಲಿ ತಪ್ಪು ಸಂದೇಶ ಹೋಗುವುದಿಲ್ಲವೇ?

ಗೂಗಲ್‌ ಕೈತಪ್ಪಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದಕ್ಕೆ ಈ ಪ್ರಶ್ನೆ ಕೇಳುತ್ತಿದ್ದೀರಿ, ಈ ನಡುವೆ ಕರ್ನಾಟಕದಲ್ಲಿ ನೆಲೆ ಹುಡುಕುತ್ತಿದ್ದ ಜಪಾನಿನ ಕಂಪನಿಯೊಂದು ಚೆನ್ನೈನ ಎಸ್‌ಇಝಡ್‌ ಪಾಲಾಗಿದೆ. ರಾಜ್ಯಕ್ಕೆ ಬರಬೇಕಾದ ₹1 ಹೂಡಿಕೆ ಅನ್ಯರ ಪಾಲಾದರೂ ನಮಗದು ನಷ್ಟವೇ. ಬೆಂಗಳೂರು ಅದ್ಭುತ ವಾತಾವರಣ, ಮಾನವ ಸಂಪನ್ಮೂಲ, ಉದ್ಯಮ ಸ್ನೇಹಿ ವಾತಾವರಣದಲ್ಲಿ ಉತ್ಕೃಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನಾವು ಮುಂದಕ್ಕೆ ಹೋಗಬೇಕೆಂದರೆ ಇದಿಷ್ಟೇ ಸಾಲಲ್ಲ. ಸಿಎಂ, ಡಿಸಿಎಂ, ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದೆ. ಮುಂದಿನ ದಿನಗಳಲ್ಲಿ ಇಂಥ ನಷ್ಟ ತಪ್ಪಿಸಲು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡೋಣ.

*ಉದ್ಯಮಗಳು ಬೆಂಗಳೂರು ಹೊರತು ಪಡಿಸಿ ರಾಜ್ಯದ ಬೇರೆಡೆ ಸ್ಥಾಪನೆಯಾಗಲು ನಿಮ್ಮ ಯೋಚನೆ ಏನು?

ಈಚೆಗೆ ಕೊಡಗಿಗೆ ಹೋಗಿದ್ದೆವು. ಆ ಜಿಲ್ಲೆ ವಿಪರೀತ ಪ್ರವಾಸೋದ್ಯಮದ ಅಪಾಯ ಎದುರಿಸುತ್ತಿದೆ. ಶುಭ್ರ ಪರಿಸರ ಪ್ಲಾಸ್ಟಿಕ್‌ ತ್ಯಾಜ್ಯದ ಗೂಡಾಗುವ ಅಪಾಯವಿದೆ. ಮಲೆನಾಡು, ಕರಾವಳಿ, ಉತ್ತರ ಕರ್ನಾಟಕಕ್ಕೆ ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಐಟಿ ರೀತಿಯ ಇಂಡಸ್ಟ್ರಿ ಬೆಳೆಯಬೇಕು. ಡಿಜಿಟಲ್ ಯುಗದಲ್ಲಿ ಅಲ್ಲಿನ ಯುವಕರು ಬೆಂಗಳೂರಿಗೆ ಬಾರದೆ ಸ್ಟಾರ್ಟ್‌ಅಪ್‌ ಅನ್ನು ಅಲ್ಲಿಂದಲೇ ನಿರ್ವಹಿಸಲು ಸಾಧ್ಯ. ಆ ರೀತಿ ಯೋಚನೆ, ಯೋಜನೆ ಇದ್ದರೆ ಎಫ್‌ಕೆಸಿಸಿಐ ಅಗತ್ಯ ಮಾರ್ಗದರ್ಶನ, ತಂತ್ರಜ್ಞಾನ ಆಧರಿತ ಕೌಶಲ್ಯ ತರಬೇತಿ, ಸಹಕಾರ ನೀಡಲಿದೆ. ಅದಕ್ಕಾಗಿಯೇ ನಾವು ಸಮಿತಿಯನ್ನೂ ಮಾಡಿದ್ದೇವೆ.

*ಇವತ್ತಿನ ದುಬಾರಿ ಕಾಲದಲ್ಲಿ ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ವೇತನ ಜಾರಿಗೆ ಆಕ್ಷೇಪ ಯಾಕೆ?

ರಾಜ್ಯ ಸರ್ಕಾರ ಕನಿಷ್ಠ ವೇತನ ನಿಗದಿಸುವ ಸಭೆಗೆ ಉದ್ದಿಮೆದಾರರನ್ನೇ ಆಹ್ವಾನಿಸಿರಲಿಲ್ಲ. ಏಕಮುಖ ನಿರ್ಧಾರ ಕೈಗೊಳ್ಳದಂತೆ ಆಕ್ಷೇಪಿಸಿದ್ದೆವು. ನಮ್ಮಲ್ಲಿ ₹ 31 ಸಾವಿರ ಕನಿಷ್ಠ ವೇತನ ಜಾರಿಯಾದಲ್ಲಿ ಎಂಎಸ್‌ಎಂಇ ನಡೆಯುವುದು ಕಷ್ಟ. ಆಂಧ್ರದಲ್ಲಿ ₹12-13ಸಾವಿರ, ತಮಿಳುನಾಡಲ್ಲಿ ₹15-16 ಸಾವಿರ ಇದೆ. ಹೀಗಿರುವಾಗ ನಮ್ಮಲ್ಲಿ ₹ 21ಸಾವಿರ ಮಾಡಿದರೂ ಕಷ್ಟವಾಗಲಿದೆ. ಹಿಂದೆ ವಿದ್ಯುತ್‌ ಸಮಸ್ಯೆ ಆದಾಗ ಹೊಸೂರು ಸೇರಿ ನೆರೆ ರಾಜ್ಯಕ್ಕೆ ನಮ್ಮ ಉದ್ದಿಮೆಗಳು ಹೋಗಿದ್ದನ್ನು ಮರೆಯುವಂತಿಲ್ಲ. ಪುನಃ ಅಂತಹ ಸ್ಥಿತಿ ನಿರ್ಮಾಣವಾಗುವ ಸಂದರ್ಭ ಬರಬಾರದು. ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಅವರು ಸೂಕ್ತ ನಿರ್ಧಾರದ ಭರವಸೆ ಕೊಟ್ಟಿದ್ದಾರೆ.

*ಜಾಗತಿಕವಾಗಿ ತೆರಿಗೆ ಯುದ್ಧ ನಡೆಯುತ್ತಿರುವುದು ಉದ್ಯಮಗಳ ಮೇಲೆ ದುಷ್ಪರಿಣಾಮ ಬೀರಿಲ್ಲವೇ?

ದೇಶ ಕೋವಿಡ್‌ನಂಥ ಸಂಕಷ್ಟವನ್ನೇ ನಿಭಾಯಿಸಿದೆ, ಇದನ್ನು ಕೂಡ ನಿರ್ವಹಿಸುತ್ತದೆ. ರಾಜ್ಯದ ವಿಚಾರಕ್ಕೆ ಬಂದರೆ ತೆರಿಗೆ ಯುದ್ಧ ಹೇಳಿಕೊಳ್ಳುವಂತಹ ಸಮಸ್ಯೆ ಸೃಷ್ಟಿಸಿಲ್ಲ. ಇದನ್ನು ಸಕಾರಾತ್ಮಕವಾಗಿ, ಲಾಭದಾಯಕವಾಗಿ ಬದಲಿಸಿಕೊಳ್ಳುವ ಅವಕಾಶವೂ ನಮ್ಮೆದುರಿದೆ.

*ಮಹಿಳೆಯರು ಉದ್ಯಮ ಕ್ಷೇತ್ರಕ್ಕೆ ಬರುವುದು ಕಷ್ಟಕರವೇ?

ಮಹಿಳೆಯರು ಮಲ್ಟಿಟಾಸ್ಕಿಂಗ್‌ ಪರಿಣತೆಯರು. ರಕ್ತಗತವಾಗಿರುವ ಆ ಗುಣದ ಕೌಶಲ್ಯ ಹೆಚ್ಚಿಸಿಕೊಳ್ಳಿ. ದೌರ್ಬಲ್ಯ ಆಗಬಹುದಾದ, ಕುಗ್ಗಿಸುವ ಭಾವನಾತ್ಮಕ ವಿಚಾರಗಳಿಂದ ಎಚ್ಚರವಾಗಿರಿ. ಉದ್ಯಮ, ವಹಿವಾಟಿನ ವಿಚಾರದಲ್ಲಿ ಉತ್ತಮ ಹಾಗೂ ಸೂಕ್ತ ನೆಟ್‌ವರ್ಕ್‌ ಸ್ಥಾಪಿಸಿಕೊಳ್ಳಿ. ಸವಾಲನ್ನು ಎದುರಿಸುವ ದೃಢತೆ ಬೆಳೆಸಿಕೊಂಡು ಮುನ್ನುಗ್ಗಿ.

- ಉಮಾ ರೆಡ್ಡಿ 

Read more Articles on