ಕಂಠೀರವ ಸ್ಟುಡಿಯೋಸ್‌ ನಿಗಮದ ವತಿಯಿಂದ ಓಟಿಟಿ ಆರಂಭಿಸಲು ಸಿಎಂ ಸಿದ್ದರಾಮಯ್ಯಗೆ ಮನವಿ

| Published : Dec 08 2024, 01:19 AM IST / Updated: Dec 08 2024, 05:58 AM IST

Siddaramaiah

ಸಾರಾಂಶ

ಕಂಠೀರವ ಸ್ಟುಡಿಯೋಸ್‌ ನಿಗಮದ ವತಿಯಿಂದ ಓಟಿಟಿ ಆರಂಭಿಸಲು ಸಹಾಯ ನೀಡಿ, ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಆದೇಶ ನೀಡುವಂತೆ ಕಂಠೀರವ ಸ್ಟುಡಿಯೋಸ್‌ ನಿಗಮದ ಅಧ್ಯಕ್ಷ ಮೆಹಬೂಬ್ ಪಾಷ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

 ಬೆಂಗಳೂರು : ಕಂಠೀರವ ಸ್ಟುಡಿಯೋಸ್‌ ನಿಗಮದ ವತಿಯಿಂದ ಓಟಿಟಿ ಆರಂಭಿಸಲು ಸಹಾಯ ನೀಡಿ, ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಆದೇಶ ನೀಡುವಂತೆ ಕಂಠೀರವ ಸ್ಟುಡಿಯೋಸ್‌ ನಿಗಮದ ಅಧ್ಯಕ್ಷ ಮೆಹಬೂಬ್ ಪಾಷ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಿಗೆ ಪತ್ರ ಬರೆದಿರುವ ಮೆಹಬೂಬ್‌ ಪಾಷ ಅವರು, ‘ಇತ್ತೀಚೆಗೆ ನಿಮಗದ ಸಭೆ ಕರೆಯಲಾಗಿತ್ತು. ಕಂಠೀರವ ಸ್ಟುಡಿಯೋಸ್‌ ನಿಗಮವು ಮುಂದಿನ ದಿನಗಳ‍ಲ್ಲಿ ವಾಣಿಜ್ಯೋದ್ಯಮಕ್ಕೂ ಪ್ರವೇಶ ಮಾಡುತ್ತಿರುವುದರಿಂದ, ಚಲನಚಿತ್ರ ಹಾಗೂ ಕಿರುಚಿತ್ರಗಳ ನಿರ್ಮಾಣದ ಜತೆಗೆ ಸಿನಿಮಾ ವಿತರಣೆ ಮತ್ತು ಪ್ರದರ್ಶನಕ್ಕಾಗಿ ಓಟಿಟಿ ಆರಂಭಿಸುವ ಅನುಮೋದನೆ ಸಿಕ್ಕಿದೆ. 

ಇದಕ್ಕಾಗಿ ಮೆಮೊರಂಡಮ್‌ ಆಫ್‌ ಅಸೋಸಿಯೇಷನ್‌ನಲ್ಲಿ ತಿದ್ದುಪಡಿಯನ್ನೂ ಸಹ ಮಾಡಲಾಗಿದೆ. ಹೀಗಾಗಿ ಹೊಸದಾಗಿ ಓಟಿಟಿಯನ್ನು ಆರಂಭಿಸಲು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ಸೂಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳವಂತೆ ಆದೇಶಿಸಬೇಕು’ ಎಂದು ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.‘ಕೇರಳ ರಾಜ್ಯ ಸರ್ಕಾರವು ಈಗಾಗಲೇ ಫಿಲಂ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ನಡೆಸುತ್ತಿದ್ದು, ಅದು ಲಾಭದಾಯಕವಾಗಿದೆ. ಆ ಮೂಲಕ ಅಲ್ಲಿನ ಸರ್ಕಾರ ಸ್ವಂತ ಓಟಿಟಿಯನ್ನೂ ಸಹ ಹೊಂದಿದೆ. 

ಕೇರಳ ಮಾದರಿಯಲ್ಲಿ ನಮ್ಮಲ್ಲೂ ಓಟಿಟಿ ಅಭಿವೃದ್ಧಿಪಡಿಸಿ ಅದರ ಮೂಲಕ ಸಿನಿಮಾ ನಿರ್ಮಾಣ, ವಿತರಣೆ, ಪ್ರದರ್ಶನ ಸೇರಿ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶಗಳು ಇವೆ. ಹೀಗಾಗಿ ಓಟಿಟಿ ಆರಂಭಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು’ ಎಂದು ಮೆಹಬೂಬ್‌ ಪಾಷ ಅವರು ಕೇಳಿಕೊಂಡಿದ್ದಾರೆ.