ಸಾರಾಂಶ
ಒಲಂಪಿಕ್ಸ್ ಸೇರಿ ಇನ್ನಿತರ ಜಾಗತಿಕ ಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸುವಂತಹ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ನಗರದಲ್ಲಿರುವ ಪ್ರಾಧಿಕಾರದ ಆವರಣದಲ್ಲಿ ‘ಉನ್ನತ ಪ್ರದರ್ಶನ ಕೇಂದ್ರ’ವನ್ನು ಸ್ಥಾಪಿಸಲು ಮುಂದಾಗಿವೆ.
ಬೆಂಗಳೂರು : ಒಲಂಪಿಕ್ಸ್ ಸೇರಿ ಇನ್ನಿತರ ಜಾಗತಿಕ ಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸುವಂತಹ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ನಗರದಲ್ಲಿರುವ ಪ್ರಾಧಿಕಾರದ ಆವರಣದಲ್ಲಿ ‘ಉನ್ನತ ಪ್ರದರ್ಶನ ಕೇಂದ್ರ’ವನ್ನು ಸ್ಥಾಪಿಸಲು ಮುಂದಾಗಿವೆ.
ಶುಕ್ರವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್‌ಎಎಲ್ ಸಿ.ಎಂ.ಡಿ ಡಾ.ಡಿ.ಕೆ. ಸುನೀಲ್ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ವಿಷ್ಣು ಸುಧಾಕರನ್ ಉಪಸ್ಥಿತರಿದ್ದರು.
ಎಚ್‌ಎಎಲ್‌ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮದಡಿ ಸ್ಥಾಪನೆಯಾಗುತ್ತಿರುವ ನೂತನ ಕೇಂದ್ರದಲ್ಲಿ, ಭಾರತೀಯ ಕ್ರೀಡಾ ಲೋಕಕ್ಕೆ ಶ್ರೇಷ್ಠ ಪ್ರತಿಭೆಗಳನ್ನು ಪರಿಚಯಿಸಲು, ಜಾಗತಿಕ ವೇದಿಕೆಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಅಗತ್ಯವಾದ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಮಾನವ ಶರೀರ ರಚನಾ ಶಾಸ್ತ್ರ, ಜೀವ ರಸಾಯನಶಾಸ್ತ್ರ, ಪೌಷ್ಠಿಕ ಆಹಾರ, ವ್ಯಾಯಾಮ, ಶಾರೀರಿಕ ಜೀವವಿಜ್ಞಾನ, ಕ್ರೀಡಾ ಚಿಕಿತ್ಸೆ ಸೇರಿ ಇನ್ನಿತರ ವಲಯಗಳಲ್ಲಿ ಆಧುನಿಕ ಮತ್ತು ವಿಶೇಷ ಸೌಲಭ್ಯಗಳು ನೂತನ ಕೇಂದ್ರದಲ್ಲಿ ಒದಗಿಸಲಾಗುತ್ತದೆ. ಕ್ರೀಡಾಪಟುಗಳ ಪ್ರದರ್ಶನ, ಸಾಮರ್ಥ್ಯವನ್ನು ವೃದ್ಧಿಗೊಳಿಸಲು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿರುವ ಅವಕಾಶಗಳನ್ನು ಕೂಡ ಈ ಕೇಂದ್ರದಲ್ಲಿ ಬಳಸಿಕೊಳ್ಳಲಾಗುತ್ತದೆ.