ಸಾರಾಂಶ
ಬೆಂಗಳೂರು ಬುಲ್ಸ್ ಸತತ 2 ಗೆಲುವುಗಳೊಂದಿಗೆ ತವರಿನ ಚರಣವನ್ನು ಮುಕ್ತಾಯಗೊಳಿಸಿದೆ. ಬುಧವಾರ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 32-30 ಅಂಕಗಳ ರೋಚಕ ಗೆಲುವು ಸಂಪಾದಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಬುಲ್ಸ್ ಸತತ 2 ಗೆಲುವುಗಳೊಂದಿಗೆ ತವರಿನ ಚರಣವನ್ನು ಮುಕ್ತಾಯಗೊಳಿಸಿದೆ. ಬುಧವಾರ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 32-30 ಅಂಕಗಳ ರೋಚಕ ಗೆಲುವು ಸಂಪಾದಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಮೊದಲ ಚರಣದಲ್ಲಿ 2 ಸೋಲು ಅನುಭವಿಸಿದ್ದ ಬುಲ್ಸ್, ತವರಿನ ಚರಣದ ಮೊದಲೆರಡು ಪಂದ್ಯಗಳಲ್ಲೂ ಸೋಲುಂಡಿತ್ತು. ಬುಧವಾರ ಪ್ಯಾಂಥರ್ಸ್‌ನಿಂದ ಬುಲ್ಸ್‌ಗೆ ಕಠಿಣ ಸವಾಲು ಎದುರಾಯಿತು. ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿದ ಜೈಪುರ 10ನೇ ನಿಮಿಷದಲ್ಲಿ ಬೆಂಗಳೂರನ್ನು ಆಲೌಟ್ ಮಾಡಿ 10-6ರ ಮುನ್ನಡೆ ಪಡೆಯಿತು. ಮೊದಲಾರ್ಧದ ಕೊನೆಯಲ್ಲಿ ವಿಕಾಸ್ ಖಂಡೋಲಾ ಅವರ ಆಕರ್ಷಕ ರೈಡ್ ಅಂಕವಾಗಿ ಪರಿವರ್ತನೆಗೊಳ್ಳಲಿಲ್ಲ. 20 ನಿಮಿಷಗಳ ಅಂತ್ಯಕ್ಕೆ ಬುಲ್ಸ್ 14-17ರ ಹಿನ್ನಡೆ ಅನುಭವಿಸಿತು. ದ್ವಿತೀಯಾರ್ಧವನ್ನು ಸಕಾರಾತ್ಮಕವಾಗಿ ಆರಂಭಿಸಿದ ಬುಲ್ಸ್, 27ನೇ ನಿಮಿಷದಲ್ಲಿ ಜೈಪುರವನ್ನು ಆಲೌಟ್ ಮಾಡಿ ಅಂತರವನ್ನು 20-21ಕ್ಕೆ ಇಳಿಸಿಕೊಂಡಿತು. ಬಳಿಕ 28ನೇ ನಿಮಿಷದಲ್ಲಿ ಮೊದಲ ಬಾರಿಗೆ ಬುಲ್ಸ್ ಮುನ್ನಡೆ ಕಂಡಿತು. ಅಲ್ಲಿಂದಾಚೆಗೆ ಅಂಕ ಗಳಿಕೆಯಲ್ಲಿ ಬೆಂಗಳೂರು ಹಿಂದೆ ಬೀಳಲಿಲ್ಲ. ಪಂದ್ಯದ ಕೊನೆಯ ರೈಡ್‌ನಲ್ಲಿ ಜೈಪುರಕ್ಕೆ ಅಂಕ ಪಡೆಯಲು ಬಿಡದ ಬುಲ್ಸ್ 2 ಅಂಕಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡು ಸಂಭ್ರಮಿಸಿತು. ಬುಲ್ಸ್ ಪರ ಭರತ್ ಹಾಗೂ ವಿಕಾಸ್ ತಲಾ 8 ರೈಡ್ ಅಂಕ ಗಳಿಸಿದರೆ, ನಾಯಕ ಸೌರಭ್ ನಂದಲ್ 5 ಟ್ಯಾಕಲ್ ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೆಂಗಳೂರು ಚರಣ ಮುಕ್ತಾಯಗೊಂಡಿದ್ದು, ಗುರುವಾರ ಯಾವುದೇ ಪಂದ್ಯಗಳಿಲ್ಲ. ಶುಕ್ರವಾರದಿಂದ ಪುಣೆ ಚರಣ ಆರಂಭಗೊಳ್ಳಲಿದೆ. ಬುಲ್ಸ್‌ಗೆ 5 ದಿನ ವಿಶ್ರಾಂತಿ ಸಿಗಲಿದ್ದು, ತನ್ನ ಮುಂದಿನ ಪಂದ್ಯವನ್ನು ಡಿ.20ರಂದು ಪುಣೇರಿ ಪಲ್ಟನ್ ವಿರುದ್ಧ ಆಡಲಿದೆ. ==ಟೈಟಾನ್ಸ್‌ಗೆ 4ನೇ ಸೋಲುಬುಧವಾರ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 36-38ರಲ್ಲಿ ತಮಿಳ್ ತಲೈವಾಸ್ ವಿರುದ್ಧ ಸೋಲುಂಡಿತು. ಟೈಟಾನ್ಸ್‌ಗೆ ಇದು ಸತತ 4ನೇ ಸೋಲು. ತಂಡ ಇನ್ನಷ್ಟೇ ಜಯದ ಖಾತೆ ತೆರೆಯಬೇಕಿದೆ.