ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ 7ನೇ ಸೋಲು!

| Published : Nov 13 2024, 12:50 AM IST

ಸಾರಾಂಶ

ಬೆಂಗಳೂರು ಬುಲ್ಸ್‌ಗೆ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 32-39 ಅಂಕಗಳ ಅಂತರದಲ್ಲಿ ಸೋಲು. ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲೇ ಉಳಿದ ಬುಲ್ಸ್‌.

ನೋಯ್ಡಾ: ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ 7ನೇ ಸೋಲು ಅನುಭವಿಸಿದೆ. ಮಂಗಳವಾರ ನಡೆದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧದ ಪಂದ್ಯದಲ್ಲಿ ಬುಲ್ಸ್‌ 32-39 ಅಂಕಗಳ ಅಂತರದಲ್ಲಿ ಸೋಲುಂಡಿತು.

ಮೊದಲಾರ್ಧದಲ್ಲಿ 19-17ರಿಂದ ಮುಂದಿದ್ದ ಬುಲ್ಸ್‌ಗೆ ದ್ವಿತೀಯಾರ್ಧದಲ್ಲಿ ಆಘಾತ ಎದುರಾಯಿತು. ಜೈಪುರ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಅರ್ಜುನ್‌ ದೇಶ್ವಾಲ್‌ ಪಂದ್ಯದಲ್ಲಿ ಒಟ್ಟು 28 ರೈಡ್‌ಗಳನ್ನು ಮಾಡಿ 18 ಅಂಕ ಕಲೆಹಾಕಿದರು.

ಅಲ್ಲದೇ 1 ಟ್ಯಾಕಲ್‌ ಅಂಕ ಸಹ ಗಳಿಸಿ ತಂಡವನ್ನು ಹುರಿದುಂಬಿಸಿದರು. ದ್ವಿತೀಯಾರ್ಧದಲ್ಲಿ 2 ಬಾರಿ ಆಲೌಟ್‌ ಆಗಿದ್ದು ಬುಲ್ಸ್‌ಗೆ ಮುಳುವಾಯಿತು. 9 ಪಂದ್ಯಗಳಲ್ಲಿ ಬುಲ್ಸ್ ಕೇವಲ 2 ಜಯ ಸಾಧಿಸಿದ್ದು ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲೇ ಉಳಿದಿದೆ.

ಇನ್ನು ಸೋಮವಾರ ಮತ್ತೊಂದು ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ಹಾಗೂ ಪುಣೇರಿ ಪಲ್ಟನ್‌ ತಂಡಗಳು 38-38 ಅಂಕಗಳಲ್ಲಿ ಟೈಗೆ ತೃಪ್ತಿ ಪಟ್ಟವು.