ಸಾರಾಂಶ
ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ 4ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಹಾಲಿ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ ಕೊಕೊ ಗಾಫ್ ಕೂಡಾ ಮುಂದಿನ ಸುತ್ತಿಗೇರಿದ್ದಾರೆ.ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.1 ಪೋಲೆಂಡ್‌ನ ಇಗಾ, ಚೆಕ್ ಗಣರಾಜ್ಯದ ಮೇರಿ ಬೌಜ್ಕೋವಾ ವಿರುದ್ಧ 6-4, 6-2ರಲ್ಲಿ ಗೆಲುವು ಸಾಧಿಸಿದರು. 20 ವರ್ಷದ ವಿಶ್ವ ನಂ.3 ಗಾಫ್ ಅವರು ಉಕ್ರೇನ್‌ನ ಡಯಾನಾ ವಿರುದ್ಧ 6-2, 6-4ರಲ್ಲಿ ಗೆದ್ದು 4ನೇ ಸುತ್ತು ಪ್ರವೇಶಿಸಿದರು. ಆದರೆ ಮಾಜಿ ಗ್ರ್ಯಾನ್ ಸ್ಲಾಂ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ರಷ್ಯಾದ ಮಿರ್ರಾ ಆ್ಯಂಡ್ರೀವಾ ವಿರುದ್ಧ ಸೋತು ಅಭಿಯಾನ ಕೊನೆಗೊಳಿಸಿದರು.
ರುಬ್ಲೆವ್‌ಗೆ ಸೋಲು: 6ನೇ ಶ್ರೇಯಾಂಕಿತ ಅಲೆಕ್ಸಾಂಡರ್ ರುಬ್ಲೆವ್ ಪುರುಷರ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಅರ್ನಾಲ್ಡಿ ವಿರುದ್ಧ 6-7(6/8), 2-6, 4-6 ಸೆಟ್‌ಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು. 2ನೇ ಶ್ರೇಯಾಂಕಿತ ಜಾನಿಕ್ ಸಿನ್ನರ್ 4ನೇ ಸುತ್ತಿಗೇರಿದರು.
2ನೇ ಸುತ್ತಿಗೆ ಭಾರತದ ಶ್ರೀರಾಮ್
ಪುರುಷರ ಡಬಲ್ಸ್‌ನಲ್ಲಿ ಮೆಕ್ಕಿಕೋದ ವರೆಲಾ ಜೊತೆಗೂಡಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಭಾರತದ ಶ್ರೀರಾಮ್ ಬಾಲಾಜಿ ಮೊದಲ ಸುತ್ತಿನಲ್ಲಿ ಅಮೆರಿಕದ ರೀಸ್ ಸ್ಟಾಲ್ಡರ್-ನೆದರ್‌ಲೆಂಡ್ಸ್‌ನ ಸೆಮ್ ವೆರ್ಬೀಕ್ ವಿರುದ್ಧ 6-3, 6-4ರಲ್ಲಿ ಗೆದ್ದು 2ನೇ ಸುತ್ತಿಗೇರಿದರು. ಆದರೆ ಭಾರತದ ಯೂಕಿ ಭಾಂಬ್ರಿ- ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಮೊದಲ ಸುತ್ತಲ್ಲೇ ಸೋತರು.