ಇಂದು ಭಾರತ vs ಬಾಂಗ್ಲಾ ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ

| Published : Jun 01 2024, 12:45 AM IST / Updated: Jun 01 2024, 04:23 AM IST

ಸಾರಾಂಶ

ನ್ಯೂಯಾರ್ಕ್‌ನಲ್ಲಿ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿರುವ ಟೀಂ ಇಂಡಿಯಾ. ಐಪಿಎಲ್‌ ಗುಂಗಿನಿಂದ ಹೊರಬಂದು ಅಮೆರಿಕ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ

ನ್ಯೂಯಾರ್ಕ್‌: 17 ವರ್ಷಗಳ ಬಳಿಕ ಐಸಿಸಿ ಟಿ20 ವಿಶ್ವಕಪ್‌ ಗೆಲ್ಲುವ ನಿರೀಕ್ಷೆಯೊಂದಿಗೆ ಅಮೆರಿಕಕ್ಕೆ ಪ್ರಯಾಣಿಸಿರುವ ಟೀಂ ಇಂಡಿಯಾ, ಶನಿವಾರ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುವ ಮೂಲಕ ಬಹುನಿರೀಕ್ಷಿತ ಟೂರ್ನಿಗೆ ಸಿದ್ಧತೆ ನಡೆಸಲಿದೆ. 

ಅಭೂತಪೂರ್ವ ಪ್ರದರ್ಶನ ನೀಡುವ ಮೂಲಕ ಟೂರ್ನಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಭಾರತೀಯ ಆಟಗಾರರು ಕಾತರಿಸುತ್ತಿದ್ದಾರೆ.ಭಾರತ ತಂಡದಲ್ಲಿರುವ ಎಲ್ಲಾ 15 ಆಟಗಾರರು ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಆಡಿದ್ದರು. ಆದರೆ ಐಪಿಎಲ್‌ ಬಹುತೇಕ ಪಂದ್ಯಗಳನ್ನು ರಾತ್ರಿ ವೇಳೆ ಆಡಿರುವ ಆಟಗಾರರು, ಟಿ20 ವಿಶ್ವಕಪ್‌ ಪಂದ್ಯಗಳನ್ನು ಹಗಲಿನಲ್ಲಿ ಆಡಬೇಕಿದೆ. 

ಟೂರ್ನಿಯ ಗುಂಪು ಹಂತದಲ್ಲಿ ಭಾರತ ಎಲ್ಲಾ ಪಂದ್ಯಗಳನ್ನು ಸ್ಥಳೀಯ ಕಾಲಮಾನ ಬೆಳಗ್ಗೆ 10.30ಕ್ಕೆ(ಭಾರತೀಯ ಕಾಲಮಾನ ರಾತ್ರಿ 8) ಆಡಲಿದೆ.ಹೀಗಾಗಿ ಟೂರ್ನಿಯ ಮಹತ್ವದ ಪಂದ್ಯಗಳಿಗೂ ಮುನ್ನ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಇದೆ. ಅಲ್ಲದೆ ಐಪಿಎಲ್‌ನಲ್ಲಿ ಹೊಡಿಬಡಿ ಆಟದ ಮೂಲಕ ಗಮನ ಸೆಳೆದಿದ್ದ ಆಟಗಾರರು ವಿಶ್ವಕಪ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ.ಇನ್ನು, ಹಲವು ಆಟಗಾರರು ಅಮೆರಿಕದಲ್ಲಿ ಮೊದಲ ಬಾರಿ ಆಡುತ್ತಿದ್ದು, ಅಲ್ಲಿನ ಪಿಚ್‌ ಹೇಗೆ ವರ್ತಿಸಲಿದೆ ಎಂಬುದನ್ನು ತಿಳಿಸಿಕೊಳ್ಳುವ ಅವಕಾಶ ಅಭ್ಯಾಸ ಪಂದ್ಯದ ಮೂಲಕ ಲಭಿಸಲಿದೆ. ತಂಡದಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿಕೊಂಡು ತುಂಬು ಆತ್ಮವಿಶ್ವಾಸದೊಂದಿಗೆ ಟೂರ್ನಿಗೆ ಕಾಲಿಡಲು ಭಾರತ ತಂಡ ಕಾಯುತ್ತಿದೆ.

ವಿರಾಟ್‌ ಗೈರು?

ಅಭ್ಯಾಸ ಪಂದ್ಯದಲ್ಲಿ ಭಾರತದ 14 ಮಂದಿ ಮಾತ್ರ ಕಣಕ್ಕಿಳಿಯುವ ಸಾಧ್ಯತೆಯಿದೆ. ಶುಕ್ರವಾರ ತಂಡ ಕೂಡಿಕೊಂಡಿರುವ ವಿರಾಟ್‌ ಕೊಹ್ಲಿ ಏಕೈಕ ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಪಂದ್ಯ: ರಾತ್ರಿ 8ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಡಿಸ್ನಿ+ಹಾಟ್‌ಸ್ಟಾರ್‌

ಕಾತರದಿಂದ ಕಾಯುತ್ತಿದ್ದೇವೆ

ನಾವು ಮೊದಲ ಬಾರಿ ನ್ಯೂಯಾರ್ಕ್‌ನಲ್ಲಿ ಆಡುತ್ತಿರುವುದರಿಂದ ಮುಖ್ಯವಾಗಿ ಇಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಅಭಿಮಾನಿಗಳು ಕೂಡಾ ಇಲ್ಲಿ ಮೊದಲ ಬಾರಿ ಪಂದ್ಯ ನೋಡುವ ಕುತೂಹಲದಲ್ಲಿದ್ದಾರೆ. ಪಿಚ್‌ ಹೇಗೆ ವರ್ತಿಸಲಿದೆ ಎಂಬುದು ಗೊತ್ತಿಲ್ಲ. ಇಲ್ಲಿನ ವಾತಾವರಣ, ಕ್ರೀಡಾಂಗಣ ಸುಂದರವಾಗಿದೆ. ಟೂರ್ನಿಯಲ್ಲಿ ಆಡಲು ಕಾತರದಿಂದ ಕಾಯುತ್ತಿದ್ದೇವೆ.

-ರೋಹಿತ್‌ ಶರ್ಮಾ, ಭಾರತದ ನಾಯಕ