ಸಾರಾಂಶ
ಸಿಂಗಾಪುರ: 2 ಬಾರಿ ಒಲಿಂಪಿಕ್ಸ್ ಪದಕ ವಿಜೇತ ಪಿ.ವಿ.ಸಿಂಧು ಹಾಗೂ ಎಚ್.ಎಸ್.ಪ್ರಣಯ್ ಸಿಂಗಾಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ.
ಇದೇ ವೇಳೆ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ಮಾಜಿ ವಿಶ್ವ ಚಾಂಪಿಯನ್ ಸಿಂಧು, ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಬದ್ಧವೈರಿ, ಸ್ಪೇನ್‌ನ ಕ್ಯಾರೊಲಿನಾ ಮರೀನ್ ವಿರುದ್ಧ 21-13, 11-21, 20-22 ಗೇಮ್‌ಗಳಲ್ಲಿ ವೀರೋಚಿತ ಸೋಲನುಭವಿಸಿದರು. ಇದು ಮರೀನ್ ವಿರುದ್ಧ ಸಿಂಧುಗೆ ಸತತ 6ನೇ ಸೋಲು.
ಮೊದಲ ಗೇಮ್‌ನಲ್ಲಿ ಗೆದ್ದ ಹೊರತಾಗಿಯೂ ಕೊನೆ 2 ಸೆಟ್‌ಗಳಲ್ಲಿ ಸಿಂಧುಗೆ ತೀವ್ರ ಪೈಪೋಟಿ ನೀಡಿದ ಮರೀನ್, ಕೊನೆ ಕ್ಷಣದ ಒತ್ತಡ ಮೀರಿ ನಿಂತು ಜಯಭೇರಿ ಬಾರಿಸಿದರು.ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್, ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ 13-21, 21-14, 15-21 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಇದು ಕೆಂಟಾ ವಿರುದ್ಧ ಪ್ರಣಯ್‌ಗೆ 6 ಪಂದ್ಯಗಳಲ್ಲಿ 4ನೇ ಸೋಲು
ತ್ರೀಸಾ-ಗಾಯತ್ರಿಗೆ ಜಯ: ಮಹಿಳಾ ಡಬಲ್ಸ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕಂಚು ವಿಜೇತ ತ್ರೀಸಾ-ಗಾಯತ್ರಿ ಗೋಪಿಚಂದ್ ಅವರು ವಿಶ್ವ ನಂ.2 ದಕ್ಷಿಣ ಕೊರಿಯಾದ ಬೀಕ್ ಹಾನಾ-ಲೀ ಸೊ ಹೀ ವಿರುದ್ಧ 21-9, 14-21, 21-15ರಲ್ಲಿ ಗೆಲುವು ಸಾಧಿಸಿದರು. ಸದ್ಯ ಭಾರತೀಯರ ಪೈಕಿ ಇವರಿಬ್ಬರನ್ನು ಹೊರತುಪಡಿಸಿ ಇತರರು ಅಭಿಯಾನ ಕೊನೆಗೊಳಿಸಿದ್ದಾರೆ.