ಸಾರಾಂಶ
ಚೆನ್ನೈ: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ಎದುರು ನೋಡುತ್ತಿರುವಭಾರತ ಮಹಿಳಾ ತಂಡ, ಮಂಗಳವಾರ ಸರಣಿಯ 3ನೇ ಹಾಗೂ ಕೊನೆ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ಗೆಲುವಿನೊಂದಿಗೆ ಸರಣಿ ಕೈವಶಪಡಿಸಿಕೊಳ್ಳುವ ಕಾತರದಲ್ಲಿದೆ.ಸರಣಿಯ ಮೊದಲ ಪಂದ್ಯದಲ್ಲಿ ಭಾರತ 12 ರನ್‌ಗಳ ಸೋಲನುಭವಿಸಿತ್ತು.
ಭಾನುವಾರದ 2ನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಹೀಗಾಗಿ ಸದ್ಯ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ ಸರಣಿ 1-1 ಅಂತರದಲ್ಲಿ ಕೊನೆಗೊಳ್ಳಲಿದೆ.ಏಕದಿನ ಸರಣಿ ಹಾಗೂ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಭಾರತ ಟಿ20 ಸರಣಿಯಲ್ಲಿ ಮಂಕಾಗಿದೆ.
ಬೌಲರ್‌ಗಳು ವಿಕೆಟ್ ಪಡೆಯಲು ವಿಫಲರಾಗುತ್ತಿದ್ದು, ದೊಡ್ಡ ಮೊತ್ತ ಬಿಟ್ಟುಕೊಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ದ.ಆಫ್ರಿಕಾ 9 ವಿಕೆಟ್‌ಗೆ 189, 2ನೇ ಪಂದ್ಯದಲ್ಲಿ 6 ವಿಕೆಟ್‌ಗೆ 177 ರನ್ ಕಲೆಹಾಕಿತ್ತು. ಹೀಗಾಗಿ ಕೊನೆ ಪಂದ್ಯದಲ್ಲಿ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದರಷ್ಟೇ ಭಾರತಕ್ಕೆ ಗೆಲುವು ಸುಲಭವಾಗಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗ್ಸ್, ನಾಯಕಿ ಹರ್ಮನ್‌ಪ್ರೀತ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಪಂದ್ಯ: ಸಂಜೆ 7 ಗಂಟೆಗೆ, ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್, ಸೋನಿ ಲೈವ್