ಸಾರಾಂಶ
ನವಿ ಮುಂಬೈ: ಪಾದಾರ್ಪಣಾ ಪಂದ್ಯದಲ್ಲೇ ಆಕರ್ಷಕ ಅರ್ಧಶತಕಗಳನ್ನು ಬಾರಿಸಿದ ಇಬ್ಬರು ಯುವ ಆಟಗಾರ್ತಿಯರು ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್‌ನ ಮೊದಲ ದಿನವೇ ಭಾರತ 400 ರನ್ ದಾಟಲು ನೆರವಾದರು. ಮೊದಲ ಬಾರಿಗೆ ಭಾರತ ತಂಡದಲ್ಲಿ ಆಡುತ್ತಿರುವ ಕರ್ನಾಟಕದ ಶುಭಾ ಸತೀಶ್ ಹಾಗೂ ಸೀಮಿತ ಓವರ್‌ಗಳಲ್ಲಿ 113 ಬಾರಿ ಭಾರತವನ್ನು ಪ್ರತಿನಿಧಿಸಿದ ಬಳಿಕ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದ ಜೆಮಿಮಾ ರೋಡ್ರಿಗ್ಸ್ ಇಬ್ಬರೂ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ ಸಹ ಅರ್ಧಶತಕಗಳನ್ನು ಬಾರಿಸಿದ ಪರಿಣಾಮ, ಮೊದಲ ದಿನದಂತ್ಯಕ್ಕೆ ಭಾರತ 94 ಓವರಲ್ಲಿ 7 ವಿಕೆಟ್‌ಗೆ 410 ರನ್ ಕಲೆಹಾಕಿತು. ದಿನದಾಟದುದ್ದಕ್ಕೂ ಸರಾಸರಿ 4.5ರ ರನ್ ರೇಟ್ ಕಾಯ್ದುಕೊಂಡ ಭಾರತ, ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿತು. ಆರಂಭಿಕರಾದ ಸ್ಮೃತಿ (17) ಹಾಗೂ ಶಫಾಲಿ (19) ಔಟಾದ ಬಳಿಕ 3ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಶುಭಾ ಹಾಗೂ ಜೆಮಿಮಾ 146 ಎಸೆತದಲ್ಲಿ 115 ರನ್ ಸೇರಿಸಿದರು. ಈ ಜೊತೆಯಾಟ, ಭಾರತಕ್ಕೆ ಚೇತರಿಕೆ ನೀಡಿದ್ದಲ್ಲದೇ ತಂಡ ದೊಡ್ಡ ಮೊತ್ತದತ್ತ ಸಾಗಲು ಸಹ ನೆರವಾಯಿತು. ತಮ್ಮ ಇನ್ನಿಂಗ್ಸಲ್ಲಿ 13 ಬೌಂಡರಿಗಳನ್ನು ಬಾರಿಸಿದ ಶುಭಾ, 76 ಎಸೆತದಲ್ಲಿ 69 ರನ್ ಗಳಿಸಿ ಔಟಾದರೆ, 11 ಬೌಂಡರಿಗಳೊಂದಿಗೆ 68 ರನ್ ಸಿಡಿಸಿ ಜೆಮಿಮಾ ವಿಕೆಟ್ ಕಳೆದುಕೊಂಡರು. ಬಳಿಕ, 5ನೇ ವಿಕೆಟ್‌ಗೆ ಹರ್ಮನ್‌ಪ್ರೀತ್ ಕೌರ್ (49) ಹಾಗೂ ಯಸ್ತಿಕಾ ಭಾಟಿಯಾ (66) ಶತಕದ ಜೊತೆಯಾಟವಾಡಿದರು. 146 ಎಸೆತದಲ್ಲಿ 116 ರನ್ ಸೇರಿಸಿದರು. 7ನೇ ವಿಕೆಟ್‌ಗೆ ಮತ್ತೊಂದು ದೊಡ್ಡ ಜೊತೆಯಾಟ ಮೂಡಿಬಂತು. ದೀಪ್ತಿ ಶರ್ಮಾ ಹಾಗೂ ಸ್ನೇಹ್ ರಾಣಾ 92 ರನ್ ಕಲೆಹಾಕಿದರು. ದೀಪ್ತಿ 60 ರನ್ ಗಳಿಸಿ ಔಟಾಗದೆ ಉಳಿದಿದ್ದು, 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸ್ಕೋರ್: ಭಾರತ (ಮೊದಲ ದಿನದಂತ್ಯಕ್ಕೆ) 94 ಓವರಲ್ಲಿ 410/7 (ಶುಭಾ 69, ಜೆಮಿಮಾ 68, ಯಸ್ತಿಕಾ 66, ದೀಪ್ತಿ 60*, ಬೆಲ್ 2-64) ==410 ರನ್: 2ನೇ ಗರಿಷ್ಠ!ಭಾರತ ಗಳಿಸಿದ 410 ರನ್, ಮಹಿಳಾ ಟೆಸ್ಟ್ ಇತಿಹಾಸದಲ್ಲಿ ಪಂದ್ಯದ ಮೊದಲ ದಿನ ದಾಖಲಾದ 2ನೇ ಗರಿಷ್ಠ ಎನಿಸಿಕೊಂಡಿದೆ. 1935ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಮೊದಲ ದಿನ 4 ವಿಕೆಟ್‌ಗೆ 431 ರನ್ ಗಳಿಸಿದ್ದು ದಾಖಲೆಯಾಗೇ ಉಳಿದಿದೆ.