ಸಾರಾಂಶ
ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಭಾರತ, 4ನೇ ಬಾರಿಗೆ ಕಿರಿಯರ ಹಾಕಿ ವಿಶ್ವಕಪ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ತಂಡದ ಫೈನಲ್ ಹಾದಿಯಲ್ಲಿ ಜರ್ಮನಿ ಎದುರಿದ್ದು, ಗುರುವಾರ ಸೆಮಿಫೈನಲ್‌ನಲ್ಲಿ ಜಯಭೇರಿ ಬಾರಿಸುವುದು ಭಾರತದ ಮುಂದಿರುವ ಗುರಿ.
ಕೌಲಾ ಲಂಪುರ: ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಭಾರತ, 4ನೇ ಬಾರಿಗೆ ಕಿರಿಯರ ಹಾಕಿ ವಿಶ್ವಕಪ್ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ತಂಡದ ಫೈನಲ್ ಹಾದಿಯಲ್ಲಿ ಜರ್ಮನಿ ಎದುರಿದ್ದು, ಗುರುವಾರ ಸೆಮಿಫೈನಲ್‌ನಲ್ಲಿ ಜಯಭೇರಿ ಬಾರಿಸುವುದು ಭಾರತದ ಮುಂದಿರುವ ಗುರಿ.
ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.4 ನೆದರ್‌ಲೆಂಡ್ಸ್ ವಿರುದ್ಧ ಅಮೋಘ ಪ್ರದರ್ಶನ ತೋರಿದ ಭಾರತ, 0-2ರಿಂದ ಹಿಂದಿದ್ದ ಹೊರತಾಗಿಯೂ 4-3ರಲ್ಲಿ ಗೆದ್ದು ಮುನ್ನಡೆದಿತ್ತು. ಪಂದ್ಯ ಮುಕ್ತಾಯಗೊಳ್ಳಲು ಕೇವಲ 3 ನಿಮಿಷ ಬಾಕಿ ಇದ್ದಾಗ ನಾಯಕ ಉತ್ತಮ್ ಸಿಂಗ್ ಗೋಲು ಬಾರಿಸಿ ತಂಡವನ್ನು ಗೆಲ್ಲಿಸಿದ್ದರು. ಗೋಲ್ ಕೀಪರ್ ಕರ್ನಾಟಕದ ಮೋಹಿತ್ ಎಚ್.ಎಸ್. ಪ್ರಚಂಡ ಲಯ ಪ್ರದರ್ಶಿಸುತ್ತಿದ್ದು, ಅವರ ಮೇಲೆ ತಂಡ ಮತ್ತೆ ಅವಲಂಬಿತಗೊಂಡಿದೆ. ಜರ್ಮನಿ ತನ್ನ ಪ್ರಬಲ ರಕ್ಷಣಾತ್ಮ ಆಟ ಹಾಗೂ ಎದುರಾಳಿಯ ರಕ್ಷಣಾ ಕೋಟೆಯನ್ನು ಕೌಂಟರ್ ಅಟ್ಯಾಕ್ ಮೂಲಕ ಭೇದಿಸಲು ಹೆಸರುವಾಸಿಯಾಗಿದ್ದು, ಭಾರತಕ್ಕೆ ಕಠಿಣ ಪೈಪೋಟಿ ಎದುರಾಗುವುದು ನಿಶ್ಚಿತ. ಈ ವರ್ಷ ಜರ್ಮಿನಿ ವಿರುದ್ಧ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಭಾರತ ಸೋಲುಂಡಿದೆ. ಇತ್ತೀಚೆಗೆ ಸುಲ್ತಾನ್ ಆಫ್ ಜೋಹರ್ ಕಪ್‌ನ ಸೆಮೀಸ್‌ನಲ್ಲಿ 3-6ರಿಂದ ಪರಾಭವಗೊಂಡಿತ್ತು. ಮತ್ತೊಂದು ಸೆಮೀಸ್‌ನಲ್ಲಿ ಸ್ಪೇನ್ ಹಾಗೂ ಫ್ರಾನ್ಸ್ ಸೆಣಸಲಿವೆ.ಭಾರತ-ಜರ್ಮನಿ ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಜಿಯೋ ಸಿನಿಮಾ