ಸಾರಾಂಶ
ಮಾಲೆ(ಮಾಲ್ಡೀವ್ಸ್): ಟಿ20 ವಿಶ್ವಕಪ್ ಗೆಲುವಿಗೆ ಸಂಭ್ರಮಾಚರಣೆ ನಡೆಸಲು ಮಾಲ್ಡೀವ್ಸ್‌ಗೆ ಬನ್ನಿ ಎಂದು ಭಾರತ ಕ್ರಿಕೆಟ್ ತಂಡಕ್ಕೆ ಮಾಲ್ಡೀವ್ಸ್ ಪ್ರವಾಸೋದ್ಯಮ ಇಲಾಖೆ, ಮಾರುಕಟ್ಟೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷ ಆಹ್ವಾನ ನೀಡಿದೆ.
ಈ ಬಗ್ಗೆ ಎರಡೂ ಇಲಾಖೆಗಳು ಜಂಟಿ ಪ್ರಕಟನೆ ಹೊರಡಿಸಿದ್ದು, ಟಿ20 ವಿಶ್ವಕಪ್ ಗೆಲುವಿಗೆ ಮಾಲ್ಡೀವ್ಸ್‌ನಲ್ಲಿ ಸಂಭ್ರಮಾಚರಣೆ ನಡೆಸಿ ಎಂದು ಭಾರತದ ಆಟಗಾರರಿಗೆ ಆಹ್ವಾನ ನೀಡಿದೆ. ‘ಭಾರತ ತಂಡಕ್ಕೆ ಆತಿಥ್ಯ ವಹಿಸುವುದು ನಮ್ಮ ಗೌರವ ಎಂದು ಭಾವಿಸಿದ್ದೇವೆ.
ಇಲ್ಲಿ ನಿಮಗೆ ಸ್ಮರಣೀಯ ಕ್ಷಣಗಳ ಅನುಭವವಾಗಲಿದೆ. ಭಾರತ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಮತ್ತು ಗೆಲುವಿನ ಸಂತೋಷದಲ್ಲಿ ಪಾಲ್ಗೊಳ್ಳುವುದು ಮಾಲ್ಡೀವ್ಸ್ ಪಾಲಿಗೆ ಗೌರವ. ಸಂಭ್ರಮಾಚರಣೆಗೆ ಬೇಕಾದ ಎಲ್ಲಾ ವ್ಯವಸ್ಥೆ ನಾವು ಮಾಡುತ್ತೇವೆ’ ಎಂದು ತಿಳಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ರೋಚಕವಾಗಿ ಗೆದ್ದ ಭಾರತ 17 ವರ್ಷಗಳ ಬಳಿಕ ವಿಶ್ವಕಪ್ ಎತ್ತಿಹಿಡಿದಿತ್ತು. ಈ ಕಾರಣಕ್ಕೆ ಬಿಸಿಸಿಐ ಭಾರತ ತಂಡಕ್ಕೆ ಬರೋಬ್ಬರಿ ₹125 ಕೋಟಿ ನೀಡುವುದಾಗಿ ಘೋಷಿಸಿತ್ತು. ಇತ್ತೀಚೆಗೆ ವಾಂಖೇಡೆ ಕ್ರೀಡಾಂಗಣದಲ್ಲಿ ಬಿಸಿಸಿಐ ಅಧಿಕಾರಿಗಳು 125 ಕೋಟಿ ರು. ಚೆಕ್ ಆಟಗಾರರಿಗೆ ಹಸ್ತಾಂತರಿಸಿದ್ದರು.ಇತ್ತೀಚೆಗಷ್ಟೇ ಭಾರತ ತಂಡ ಮುಂಬೈನಲ್ಲಿ ಬೃಹತ್ ವಿಜಯೋತ್ಸವ ನಡೆಸಿತ್ತು. ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಸದ್ಯ ವಿಶ್ವಕಪ್ ತಂಡದಲ್ಲಿದ್ದ ಬಹುತೇಕ ಆಟಗಾರರು ವಿಶ್ರಾಂತಿಯಲ್ಲಿದ್ದಾರೆ.