ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು(ಐಸಿಸಿ) ಹೊರಗಿಟ್ಟಿದ್ದಕ್ಕೆ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ, ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಂಡರೂ ಭಾರತ ವಿರುದ್ಧ ಪಂದ್ಯ ಆಡದಿರಲು ಚಿಂತನೆ ನಡೆಸುತ್ತಿದೆ
ಲಾಹೋರ್: ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು(ಐಸಿಸಿ) ಹೊರಗಿಟ್ಟಿದ್ದಕ್ಕೆ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ, ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಂಡರೂ ಭಾರತ ವಿರುದ್ಧ ಪಂದ್ಯ ಆಡದಿರಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶಕ್ಕೆ ತನ್ನ ಬೆಂಬಲ ಘೋಷಿಸಿರುವ ಪಾಕಿಸ್ತಾನವು, ಬಾಂಗ್ಲಾವನ್ನು ಹೊರಗಿಟ್ಟರೆ ತಾನೂ ವಿಶ್ವಕಪ್‌ನಿಂದ ಹೊರಗುಳಿಯುವುದಾಗಿ ಬೆದರಿಸಿತ್ತು. ಇದಕ್ಕೆ ಐಸಿಸಿ ಈಗಾಗಲೇ ತೀಕ್ಷ್ಣವಾಗಿ ಉತ್ತರಿಸಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ತನ್ನ ನಿರ್ಧಾರವನ್ನು ಅಲ್ಪ ಬದಲಿಸಿದಂತಿರುವ ಪಾಕ್, ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ ಫೆ.15ಕ್ಕೆ ನಿಗದಿಯಾಗಿರುವ ಭಾರತ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿದೆ.
ಈ ನಡುವೆ ಸೋಮವಾರ ವಿಶ್ವಕಪ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ‘ಪ್ರಧಾನ ಮಂತ್ರಿ ಶೆಹಬಾಜ್ ಶರೀಫ್ ಜೊತೆ ಸಭೆ ನಡೆಸಿ, ವಿಶ್ವಕಪ್ ವಿಚಾರವನ್ನು ಅವರಿಗೆ ವಿವರಿಸಿದ್ದೇನೆ. ಎಲ್ಲಾ ಆಯ್ಕೆಯನ್ನು ಮುಂದಿಟ್ಟುಕೊಂಡಿರುವ ಅವರು ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಶುಕ್ರವಾರ ಅಥವಾ ಮುಂದಿನ ಸೋಮವಾರ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ’ ಎಂದಿದ್ದಾರೆ.
ಬಾಂಗ್ಲಾ ವೇಗಿ ಮುಸ್ತಾಫಿಜುರ್ ರಹ್ಮಾನ್‌ರನ್ನು ಐಪಿಎಲ್‌ನಿಂದ ಹೊರಗಿಟ್ಟಿದ್ದಕ್ಕೆ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ ಬಹಿಷ್ಕರಿಸಿದೆ. ಭಾರತದಲ್ಲಿ ಪಂದ್ಯ ಆಡಲ್ಲ ಎಂದು ಪಟ್ಟುಹಿಡಿದಿದ್ದರಿಂದ ಬಾಂಗ್ಲಾವನ್ನು ವಿಶ್ವಕಪ್‌ನಿಂದಲೇ ಹೊರಗಿಟ್ಟಿರುವ ಐಸಿಸಿ, ಸ್ಕಾಟ್ಲೆಂಡ್‌ಗೆ ಅವಕಾಶ ನೀಡಿದೆ. ಟೂರ್ನಿ ಫೆ.7ರಿಂದ ಮಾ.8ರ ವರೆಗೆ ನಡೆಯಲಿದೆ. ಒಟ್ಟು 20 ತಂಡ ಪಾಲ್ಗೊಳ್ಳಲಿವೆ.
ಐಸಿಸಿಗೆ ನಷ್ಟವಾದ್ರೆ ಪಾಕ್‌ಗೂ ಸಂಕಷ್ಟ
ಭಾರತ-ಪಾಕ್ ಪಂದ್ಯ ಆರ್ಥಿಕವಾಗಿ ಐಸಿಸಿಗೆ ಬಹಳ ಪ್ರಾಮುಖ್ಯವಾದದ್ದು. ಈ ಪಂದ್ಯದ ಪ್ರಸಾರದಿಂದಲೇ ಬಹುಕೋಟಿ ಲಾಭ ಸಿಗಲಿದೆ. ಪ್ರಾಯೋಜಕರು, ಪ್ರಸಾರಕರು, ಜಾಹೀರಾತುದಾರರಿಗೂ ವಿಶ್ವಕಪ್‌ನಲ್ಲೇ ಈ ಪಂದ್ಯ ಹೆಚ್ಚು ಮಹತ್ವದ್ದು. ಒಂದು ವೇಳೆ ಪಾಕ್ ತಂಡ ಭಾರತ ವಿರುದ್ಧ ಆಡದಿದ್ದರೆ ಐಸಿಸಿಗೆ ಆರ್ಥಿಕ ನಷ್ಟವಾಗುವುದು ಖಚಿತ. ಪ್ರಸಾರಕರಿಗೂ ಇದರಿಂದ ನಷ್ಟ ಉಂಟಾಗಲಿದೆ. ಹಾಗಾಗಿ ಐಸಿಸಿ ಕೂಡ ಪಿಸಿಬಿ ಮೇಲೆ ಹಲವು ನಿರ್ಬಂಧ ಹೇರಬಹುದು. ವಾರ್ಷಿಕವಾಗಿ ನೀಡುವ ಲಾಭಾಂಶದಲ್ಲೂ ಪಾಕಿಸ್ತಾನಕ್ಕೆ ಹಣ ಕಡಿತಗೊಳಿಸುವ ಸಾಧ್ಯತೆ ಇದೆ.
ಪಾಕ್ ಆಡದಿದ್ದರೆ ಏನಾಗುತ್ತೆ?
1. ಪಾಕ್ ತಂಡ ಭಾರತ ವಿರುದ್ಧ ಆಡದಿದ್ದರೆ ಅದನ್ನು ವಾಕ್‌ಓವರ್ ಎಂದು ಪರಿಗಣಿಸಿ, ಭಾರತಕ್ಕೆ 2 ಅಂಕ ನೀಡಲಾಗುತ್ತದೆ.
2. ಹೀಗಾದರೆ ಪಾಕ್‌ಗೆ ಗುಂಪು ಹಂತದಲ್ಲಿ ಇನ್ನುಳಿದ ಎಲ್ಲಾ 3 ಪಂದ್ಯಗಳಲ್ಲೂ ಗೆಲ್ಲಲೇಬೇಕಾಗುತ್ತದೆ. ಹೀಗಾದರೆ ಮಾತ್ರ ಕ್ವಾರ್ಟರ್ ಫೈನಲ್‌ಗೇರಬಹುದು.
3. ಇನ್ನು, ಆರ್ಥಿಕವಾಗಿ ಐಸಿಸಿಗೆ ಭಾರತ-ಪಾಕ್ ಪಂದ್ಯ ಅನಿವಾರ್ಯ. ಪಾಕ್ ಆಡದಿದ್ದರೆ ಐಸಿಸಿ, ಬ್ರಾಡ್‌ಕಾಸ್ಟರ್‌ಗಳಿಗೆ ಭಾರೀ ನಷ್ಟವಾಗಲಿದೆ.

