2026ರ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಭಾನುವಾರ ಪ್ರಕಟಿಸಿತು. ಕ್ರೀಡಾ ಕ್ಷೇತ್ರದಲ್ಲಿ 9 ಮಂದಿಯನ್ನು ಈ ವರ್ಷದ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಮಾಜಿ ಟೆನಿಸಿಗ ವಿಜಯ್ ಅಮೃತ್‌ರಾಜ್ ಪದ್ಮಭೂಷಣಕ್ಕೆ ಭಾಜನ
ನವದೆಹಲಿ: 2026ರ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಭಾನುವಾರ ಪ್ರಕಟಿಸಿತು. ಕ್ರೀಡಾ ಕ್ಷೇತ್ರದಲ್ಲಿ 9 ಮಂದಿಯನ್ನು ಈ ವರ್ಷದ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಮಾಜಿ ಟೆನಿಸಿಗ ವಿಜಯ್ ಅಮೃತ್‌ರಾಜ್ ಪದ್ಮಭೂಷಣಕ್ಕೆ ಭಾಜನರಾಗಲಿದ್ದು, ಕ್ರಿಕೆಟಿಗರಾದ ರೋಹಿತ್ ಶರ್ಮಾ, ಹರ್ಮನ್‌ಪ್ರೀತ್ ಕೌರ್ ಸೇರಿ ಒಟ್ಟು 8 ಕ್ರೀಡಾಪಟುಗಳು ಪದ್ಮಶ್ರೀ ಸ್ವೀಕರಿಸಲಿದ್ದಾರೆ.
ಪದ್ಮಭೂಷಣ
ವಿಜಯ್ ಅಮೃತ್‌ರಾಜ್(ಟೆನಿಸ್): ವಿಂಬಲ್ಡನ್, ಯುಎಸ್ ಓಪನ್‌ಗಳಲ್ಲಿ ಕ್ವಾರ್ಟರ್ ಫೈನಲ್‌ಗೇರಿದ್ದ ಆಟಗಾರ. ಭಾರತೀಯ ಟೆನಿಸ್ ಆಡಳಿತದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದರು. 1974ರಲ್ಲಿ ಅರ್ಜುನ, 1983ರಲ್ಲಿ ಪದ್ಮಶ್ರೀ ಸ್ವೀಕರಿಸಿದ್ದರು.
ಪದ್ಮಶ್ರೀ
ರೋಹಿತ್ ಶರ್ಮಾ (ಕ್ರಿಕೆಟ್): ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆ. ಏಕದಿನ ಮಾದರಿಯಲ್ಲಿ ಇನ್ನೂ ಸಕ್ರಿಯ. ತಮ್ಮ ನಾಯಕತ್ವದಲ್ಲಿ ಭಾರತಕ್ಕೆ 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಮುಂಬೈ ಆಟಗಾರ.
ಹರ್ಮನ್‌ಪ್ರೀತ್ ಕೌರ್ (ಕ್ರಿಕೆಟ್): 2025ರ ಮಹಿಳಾ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿ. ಭಾರತೀಯ ಕ್ರಿಕೆಟ್ ಎತ್ತರಕ್ಕೇರಲು ಅಪಾರ ಕೊಡುಗೆ ನೀಡಿರುವ ಆಟಗಾರ್ತಿ.
ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್): ದೇಶದ ತಾರಾ ಪ್ಯಾರಾ ಹೈಜಂಪ್ ಪಟು. 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ, 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ. 2022ರ ಪ್ಯಾರಾ ಏಷ್ಯಾಡ್‌ನಲ್ಲೂ ಸ್ವರ್ಣ. -
ಸವಿತಾ ಪೂನಿಯಾ (ಹಾಕಿ): ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ. ದೇಶದ ಪರ 300ಕ್ಕೂ ಹೆಚ್ಚು ಪಂದ್ಯ. ವಿಶ್ವ ಹಾಕಿ ಫೆಡರೇಶನ್‌ನ ವರ್ಷದ ಶ್ರೇಷ್ಠ ಗೋಲ್ ಕೀಪರ್ ಪ್ರಶಸ್ತಿಗೆ ಸತತ 3 ವರ್ಷ ಭಾಜನ. 2018ರಲ್ಲಿ ಅರ್ಜುನ ಪ್ರಶಸ್ತಿ .
ಬಲ್ದೇವ್ ಸಿಂಗ್ (ಹಾಕಿ ಕೋಚ್): ದೇಶದ ಪ್ರಖ್ಯಾತ ಹಾಕಿ ಕೋಚ್. 100ಕ್ಕೂ ಹೆಚ್ಚು ಅಂ.ರಾ. ಹಾಕಿ ಆಟಗಾರರನ್ನು ತಯಾರು ಮಾಡಿರುವ ಹೆಗ್ಗಳಿಕೆ. 2009ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನ.
-ಕೆ.ಪಜನಿವೇಲ್ (ಸಿಲಂಬಮ್): ಪುದುಚೇರಿ ಮೂಲದ 53 ವರ್ಷದ ಕ್ರೀಡಾಪಟು. ಬಿದಿರನ ದಂಡವನ್ನು ಬಳಸಿ ಆಡುವ ಸಮರ ಕಲೆಯಲ್ಲಿ 4 ದಶಕಗಳಿಂದ ತಮ್ಮನ್ನು ತೊಡಿಗಿಸಿಕೊಂಡಿರುವ ಪಜನಿವೇಲ್. ಸಾವಿರಾರು ಜನಕ್ಕೆ ಈ ಕಲೆ ಹೇಳಿಕೊಟ್ಟ ಖ್ಯಾತಿ.
ಭಗವಾನ್ ದಾಸ್ (ಬುಂದೇಲಿ ಯುದ್ಧ ಕಲೆ): ಮಧ್ಯಪ್ರದೇಶದ ಬುಂದೇಲ್‌ಖಂಡ್‌ನ ಪ್ರಾಚೀನ ಬುಂದೇಲಿ ಯುದ್ಧ ಕಲೆಯನ್ನು ವಿಶ್ವ ವಿಖ್ಯಾತಗೊಳಿಸಿದವರು ಭಗವಾನ್ ದಾಸ್ ರಾಯ್ಕ್ವರ್. ತಮ್ಮಲ್ಲಿದ್ದ ಸೀಮಿತ ಸಂಪನ್ಮೂಲ ಬಳಸಿ 1964ರಲ್ಲಿ ಛತ್ರಾಸಲ್ ಬುಂದೇಲ್‌ಖಂಡ್ ಅಖಾಡ ಸ್ಥಾಪಿಸಿ ಸಾವಿರಾರು ಜನಕ್ಕೆ ಈ ಯುದ್ಧ ಕಲೆ ಕಲಿಸಿದ್ದಾರೆ.
ವ್ಲಾಡಿಮರ್ ಮೆಸ್ಟ್ವಿರಿಶ್ವಿಲಿ (ಕುಸ್ತಿ ಕೋಚ್): ಜಾರ್ಜಿಯಾದ ಲ್ಯಾಡಿಮರ್ ಮೆಸ್ಟ್ವಿರಿಶ್ವಿಲಿ ಅವರಿಗೆ ಮರಣೋತ್ತರ ಗೌರವ ಸಿಗುತ್ತಿದೆ. ವ್ಲಾಡಿಮರ್, ಭಾರತಕ್ಕೆ ಒಲಿಂಪಿಕ್ಸ್ ಪದಕ ಗೆದ್ದು ತಂದ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಬಜರಂಗ್ ಪೂನಿಯಾಗೆ ಕೋಚ್ ಆಗಿದ್ದವರು. 2003ರಿಂದ 2017ರ ವರೆಗೂ ಭಾರತೀಯ ಕುಸ್ತಿಪಟುಗಳಿಗೆ ಮಾರ್ಗದರ್ಶನ ನೀಡಿದ್ದರು. ಅವರು 2025ರ ಜೂನ್‌ನಲ್ಲಿ ನಿಧನರಾದರು.

