ಸಾರಾಂಶ
ನ್ಯೂಯಾರ್ಕ್: ಭೀಕರ ಕಾರು ಅಪಘಾತಕ್ಕೆ ತುತ್ತಾಗಿ ಕಳೆದ 17 ತಿಂಗಳುಗಳಿಂದ ಭಾರತ ಕ್ರಿಕೆಟ್ ತಂಡದಿಂದ ದೂರವುಳಿದಿದ್ದ ರಿಷಭ್ ಪಂತ್, ರಾಷ್ಟ್ರೀಯ ತಂಡದ ಪರ ಕಮ್‌ಬ್ಯಾಕ್ ಪಂದ್ಯದಲ್ಲಿ ಅಬ್ಬರಿಸಿದ್ದಾರೆ.
ಈ ಮೂಲಕ ಟಿ20 ವಿಶ್ವಕಪ್‌ಗ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಬಹುತೇಕ ಖಚಿತಗೊಳಿಸಿದ್ದಾರೆ.ಶನಿವಾರ ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ರಿಷಭ್ ಸ್ಫೋಟಕ ಆಟವಾಡಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು 32 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 54 ರನ್ ಸಿಡಿಸಿ ನಿವೃತ್ತಿ ಪಡೆದರು.
ತಮ್ಮ ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದ ರಿಷಭ್, ಟೂರ್ನಿಯಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗುವ ನಿರೀಕ್ಷೆಯಿದೆ.
ಮತ್ತೆ ಕೈಕೊಟ್ಟ ಸಂಜು: ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 1 ರನ್ ಗಳಿಸಲು 6 ಎಸೆತಗಳನ್ನು ತೆಗೆದುಕೊಂಡರು. ಮತ್ತೊಂದೆಡೆ ರಿಷಭ್ ಪಂತ್ ಅಬ್ಬರಿಸಿದ್ದರಿಂದ ವಿಶ್ವಕಪ್‌ನ ಮುಖ್ಯ ಸುತ್ತಿನ ಪಂದ್ಯಗಳಲ್ಲಿ ಸಂಜು ಬದಲು ರಿಷಭ್‌ಗೆ ಮಣೆ ಹಾಕುವ ಸಾಧ್ಯತೆಯಿದೆ.
ವಿರಾಟ್ ಕೊಹ್ಲಿ ಗೈರು
ಶುಕ್ರವಾರ ಅಮೆರಿಕಕ್ಕೆ ತೆರಳಿ ತಂಡ ಕೂಡಿಕೊಂಡಿದ್ದ ವಿರಾಟ್ ಕೊಹ್ಲಿ ಶನಿವಾರ ನಡೆದ ಅಭ್ಯಾಸ ಪಂದ್ಯದಿಂದ ಹೊರಗುಳಿದರು. ಇತರ 14 ಮಂದಿ ಭಾರತದ ಪರ ಕಣಕ್ಕಿಳಿದರು.