ಕನ್ನಡಪ್ರಭ ವಾರ್ತೆ, ಬೆಂಗಳೂರು

ಇಂಡಿಯನ್‌ ಪ್ರೀಮಿಯರ್‌ ಲೀಗ್‌-2026 (ಐಪಿಎಲ್) ಪಂದ್ಯಾವಳಿಗಳು ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ಘಟನೆ 2025ರ ಜೂ.4ರಂದು ನಡೆದಿತ್ತು.

ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಿರ್ಬಂಧಿಸಲಾಗಿತ್ತು. ಇದೀಗ ಮೈಕಲ್‌ ಡಿ ಕುನ್ಹಾ ನೇತೃತ್ವದ ಸಮಿತಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್‌ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಷರತ್ತು ಮೇರೆಗೆ ಮಾ.26ರಿಂದ ಶುರುವಾಗಲಿರುವ ಐಪಿಎಲ್‌-2026 ಪಂದ್ಯಾವಳಿಗಳಿಗೆ ಅನುಮತಿ ನೀಡಲಾಗಿದೆ. ತಜ್ಞರ ಸಮಿತಿಯು ಶಿಫಾರಸು ಮಾಡಿರುವ ಮೊದಲ ಹಂತದ ಮುನ್ನೆಚ್ಚರಿಕಾ ಕ್ರಮಗಳನ್ನು ಮಾ.15ರ ಒಳಗಾಗಿ ಮಾಡಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

ಅಗ್ನಿಸುರಕ್ಷತೆ, ಜನದಟ್ಟಣೆ ನಿಯಂತ್ರಣ, ತುರ್ತು ಪ್ರತಿಕ್ರಿಯಾ ವ್ಯವಸ್ಥೆ, ಆ್ಯಂಬುಲೆನ್ಸ್‌ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ವ್ಯವಸ್ಥೆ ಕುರಿತು ಸಮಿತಿಯು ಹಲವು ಶಿಫಾರಸು ಮಾಡಿತ್ತು.


ಇದರ ಅನ್ವಯ ಗೇಟ್‌ ಸಂಖ್ಯೆ 4, 8, 12 ಹಾಗೂ 21ರ ಬಳಿ ಹೃದಯ ಆರೈಕೆ ವ್ಯವಸ್ಥೆ, ಪ್ರತಿ ಗೇಟ್‌ ಕನಿಷ್ಠ 6 ಮೀಟರ್‌ ವಿಶಾಲವಾಗಿರುವಂತೆ ವಿಸ್ತರಣೆ, ಒಟ್ಟು ಸಾಮರ್ಥ್ಯದ ಶೇ.5ರಿಂದ 10ರಷ್ಟು ಮಂದಿಯನ್ನು ಮಾತ್ರ ಒಂದು ಗೇಟ್‌ನಲ್ಲಿ ಒಳ ಬಿಡಬೇಕು. ಸೇಂಟ್‌ ಜೋಸೆಫ್‌ ಹೈಸ್ಕೂಲ್‌, ಯುಬಿ ಸಿಟಿ, ಕಂಠೀರವ ಕ್ರೀಡಾಂಗಣದ ಬಳಿ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು. ಅಗ್ನಿ ಸುರಕ್ಷತೆ ಕ್ರಮಗಳನ್ನು ಫೆಬ್ರುವರಿ ತಿಂಗಳಲ್ಲೇ ಪೂರ್ಣಗೊಳಿಸಬೇಕು. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸಲು ಐಪಿಎಲ್‌ ಟಿಕೆಟ್‌ ಹೊಂದಿರುವ ವೀಕ್ಷಕರಿಗೆ ಮೆಟ್ರೋ, ಬಿಎಂಟಿಸಿಯಲ್ಲಿ ಉಚಿತ ಟಿಕೆಟ್‌ ನೀಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸು ಮಾಡಲಾಗಿದೆ.

ಕೋಟ್...

ಪ್ರತ್ಯೇಕವಾಗಿ ಷರತ್ತು ಆದೇಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌-2026 ಪಂದ್ಯಾವಳಿಗಳನ್ನು ಆಡಲು ಅನುಮತಿ ನೀಡಲು ಸಂಪುಟ ನಿರ್ಧಾರ ಮಾಡಿದೆ. ಯಾವ ಷರತ್ತುಗಳನ್ನು ಪಾಲಿಸಬೇಕು ಎಂಬ ಕುರಿತು ಗೃಹ ಸಚಿವರು ಇಲಾಖೆಯಿಂದ ಪ್ರತ್ಯೇಕ ಆದೇಶ ಹೊರಡಿಸಲಿದ್ದಾರೆ.

-ಎಚ್.ಕೆ.ಪಾಟೀಲ್‌, ಕಾನೂನು ಸಚಿವ.