ಸಾರಾಂಶ
ಕ್ರಿಕೆಟ್ ಅಭಿಮಾನಿಗಳನ್ನು ಭರಪೂರ ರಂಜಿಸಿದ್ದ ಐಪಿಎಲ್ ಟಿ20 ಲೀಗ್ ಮುಕ್ತಾಯಗೊಂಡ ಕೆಲ ದಿನಗಳ ಅಂತರದಲ್ಲೇ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ಗೆ ಕ್ಷಣಗಣನೆ ಆರಂಭಗೊಂಡಿದೆ. 9ನೇ ಆವೃತ್ತಿಯ ಟಿ20 ಕ್ರಿಕೆಟ್‌ನ ವಿಶ್ವ ಹಬ್ಬಕ್ಕೆ ಜೂ.1ರಂದು (ಭಾರತೀಯ ಕಾಲಮಾನದ ಪ್ರಕಾರ ಜೂ.2) ಚಾಲನೆ ಸಿಗಲಿದ್ದು, ಸುಮಾರು ಒಂದು ತಿಂಗಳ ಕಾಲ (28 ದಿನ) ಕ್ರೀಡಾಭಿಮಾನಿಗಳನ್ನು ರಂಜಿಸಲಿದೆ. ವೆಸ್ಟ್‌ಇಂಡೀಸ್ ಹಾಗೂ ಅಮೆರಿಕದಲ್ಲಿ ಟೂರ್ನಿ ಆಯೋಜನೆಗೊಳ್ಳಲಿದ್ದು, ಟ್ರೋಫಿಗಾಗಿ 20 ತಂಡಗಳ ನಡುವೆ ಕಾದಾಟ ಏರ್ಪಡಲಿದೆ. ಈ ವಿಶ್ವಕಪ್‌ನ ವಿಶೇಷತೆಗಳೇನು? ಕಳೆದ ಬಾರಿಗಿಂತ ಏನೆಲ್ಲಾ ಬದಲಾವಣೆಗಳಿವೆ? ಟೂರ್ನಿಯ ಮಾದರಿ ಹೇಗೆ? ಯಾವೆಲ್ಲಾ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿವೆ.
ಇದೇ ಮೊದಲ ಬಾರಿ ಅಮೆರಿಕದಲ್ಲಿ ವಿಶ್ವಕಪ್!
ಅಮೆರಿಕ ಎಂದ ತಕ್ಷಣ ನೆನಪಿಗೆ ಬರುವ ಕ್ರೀಡೆಗಳು ಬೇಸ್‌ಬಾಲ್, ಬಾಸ್ಕೆಟ್‌ಬಾಲ್. ಆದರೆ ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕದ ಮಣ್ಣಲ್ಲಿ ಈಗ ಟಿ20 ವಿಶ್ವಕಪ್ ಹಬ್ಬ ಕಳೆಗಟ್ಟಿದೆ. ಕ್ರಿಕೆಟ್ ಅಷ್ಟೇನೂ ಜನಪ್ರಿಯವಲ್ಲದ ಅಮೆರಿಕದಲ್ಲಿ ಈ ಬಾರಿ ಟಿ20 ವಿಶ್ವಕಪ್ ನಡೆಯಲಿದೆ ಎಂದು ಹೇಳಿದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಹತ್ತು ಹಲವು ಸವಾಲುಗಳನ್ನು ಎದುರಿಸಿ ಐಸಿಸಿ ಈ ಬಾರಿ ಅಮೆರಿಕನ್ನರನ್ನು ಕ್ರಿಕೆಟ್‌ನತ್ತ ಆಕರ್ಷಿಸುವ ಸಾಹಸಕ್ಕೆ ಕೈ ಹಾಕಿದೆ. ವೆಸ್ಟ್ ಇಂಡೀಸ್‌ನ 6 ನಗರಗಳ ಜೊತೆಗೆ ಅಮೆರಿಕದ 3 ಮಹಾನಗರಗಳಲ್ಲೂ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
ಆತಿಥ್ಯ ಸಿಕ್ಕಿದ್ದು ಹೇಗೆ?
2024ರ ಟಿ20 ವಿಶ್ವಕಪ್‌ಗೆ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಗಳು ಜಂಟಿ ಆತಿಥ್ಯ ಹಕ್ಕಿಗೆ ಬಿಡ್ ಸಲ್ಲಿಸಿದ್ದವು 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟಿ20 ವಿಶ್ವಕಪ್ ಆತಿಥ್ಯಕ್ಕೆ ಅಮೆರಿಕ ಮತ್ತು ವೆಸ್ಟ್‌ಇಂಡೀಸನ್ನು ಅಂತಿಮಗೊಳಿಸಿತು. ಅಮೆರಿಕದಲ್ಲಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಸೇರಿ ಕ್ರಿಕೆಟ್ ಆಟವನ್ನು ಇಷ್ಟಪಡುವ ಇನ್ನೂ ಅನೇಕ ರಾಷ್ಟ್ರಗಳ ಜನ ಇದ್ದಾರೆ. ಇವರನ್ನೆಲ್ಲಾ ಆಕರ್ಷಿಸುವುದರ ಜೊತೆಗೆ ಕ್ರಿಕೆಟ್‌ನತ್ತ ಮೂಲ ಅಮೆರಿಕನ್ನರು, ಅಮೆರಿಕದಲ್ಲಿರುವ ಇನ್ನಿತರ ದೇಶಗಳ ಜನರನ್ನೂ ಸೆಳೆಯಲು ಐಸಿಸಿ ಮುಂದಾಗಿದೆ. ಆತಿಥೇಯ ರಾಷ್ಟ್ರವಾಗಿರುವ ಕಾರಣ, ಅಮೆರಿಕ ತಂಡಕ್ಕೂ ಟೂರ್ನಿಯಲ್ಲಿ ಪಾಲ್ಗೊಳ್ಳಲು ನೇರ ಅರ್ಹತೆ ಸಿಕ್ಕಿದೆ. ಅಮೆರಿಕದಲ್ಲಿ ಕ್ರಿಕೆಟ್‌ಗೆ ಇರುವ ಮಾರುಕಟ್ಟೆಯನ್ನು ಐಸಿಸಿ ಸಮರ್ಥವಾಗಿ ಬಳಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಇದೇ ಮೊದಲ ಬಾರಿ 20 ತಂಡಗಳು ಭಾಗಿ!
ಮೊದಲ 4 ಆವೃತ್ತಿಗಳಲ್ಲಿ ತಲಾ 12, ಆ ಬಳಿಕ 4 ಆವೃತ್ತಿಗಳಲ್ಲಿ ತಲಾ 16 ತಂಡಗಳಿದ್ದ ವಿಶ್ವಕಪ್‌ನಲ್ಲಿ ಈ ಬಾರಿ ತಂಡಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಕೆಲ ವರ್ಷಗಳ ಹಿಂದೆ ಐಸಿಸಿ ತನ್ನೆಲ್ಲಾ ನೋಂದಾಯಿತ ರಾಷ್ಟ್ರಗಳಿಗೂ ಅಂ.ರಾ. ಟಿ20 ಮಾನ್ಯತೆ ನೀಡಿತ್ತು. ಇದರಿಂದಾಗಿ ಕ್ರಿಕೆಟ್ ಆಡುವ ಸಣ್ಣ ಪುಟ್ಟ ರಾಷ್ಟ್ರಗಳಿಗೂ ವಿಶ್ವಕಪ್ ಮಹಾಸಮರದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ ಎನ್ನುವ ಸಂದೇಶ ನೀಡಿತ್ತು. 2 ವರ್ಷಕ್ಕೊಮ್ಮೆ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಆಡಲು ಐಸಿಸಿ ಸಹ ಸದಸ್ಯ ರಾಷ್ಟ್ರಗಳು ಅರ್ಹತಾ ಟೂರ್ನಿಗಳನ್ನು ಆಡಲಿವೆ. ಕೆನಡಾ, ಉಗಾಂಡ ಹಾಗೂ ಅಮೆರಿಕ ತಂಡಗಳು ಇದೇ ಮೊದಲ ಬಾರಿ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿದೆ.
ತಂಡಗಳಿಗೆ ಅರ್ಹತೆ ಸಿಕ್ಕಿದ್ದು ಹೇಗೆ?
ಅಮೆರಿಕ ಆತಿಥ್ಯ ರಾಷ್ಟ್ರವಾಗಿರುವ ಕಾರಣ ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಅಮೆರಿಕ ಖಂಡದ ಅರ್ಹತಾ ಟೂರ್ನಿ ಮೂಲಕ ಕೆನಡಾ ಟೂರ್ನಿಗೆ ಪ್ರವೇಶಿಸಿದ್ದು, ಆಫ್ರಿಕಾ ಅರ್ಹತಾ ಟೂರ್ನಿಯಲ್ಲಿ ಗೆಲ್ಲುವ ಮೂಲಕ ಉಗಾಂಡ ಚೊಚ್ಚಲ ಬಾರಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಉಳಿದಂತೆ ಕಳೆದ ಟಿ20 ವಿಶ್ವಕಪ್‌ನ ಅಗ್ರ-8 ತಂಡಗಳು, ರ್‍ಯಾಂಕಿಂಗ್ ಆಧಾರದಲ್ಲಿ 2 ತಂಡಗಳು, ಯುರೋಪ್, ಏಷ್ಯಾ, ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಟೂರ್ನಿಗಳ ಮೂಲಕ ಇತರ ತಂಡಗಳು ಟಿ20 ವಿಶ್ವಕಪ್ ಪ್ರವೇಶಿಸಿವೆ.
ಟೂರ್ನಿಯ ಮಾದರಿ ಹೇಗೆ?
ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 5 ತಂಡಗಳ 4 ಗುಂಪುಗಳನ್ನು ರಚಿಸಲಾಗಿದೆ. ಗುಂಪು ಹಂತದಲ್ಲಿ ಪ್ರತಿ ತಂಡ ತನ್ನ ಗುಂಪಿನಲ್ಲಿರುವ ಉಳಿದ 4 ತಂಡಗಳ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೂಪರ್-8 ಹಂತ ಪ್ರವೇಶಿಸಲಿವೆ. ಅಂದರೆ 4 ಗುಂಪಿನಿಂದ ಒಟ್ಟು 8 ತಂಡಗಳು ಮುಂದಿನ ಹಂತಕ್ಕೆ ಬರಲಿವೆ. ಸೂಪರ್-8 ಹಂತವನ್ನು ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನ ಪ್ರತಿ ತಂಡ ಉಳಿದ 3 ತಂಡಗಳ ವಿರುದ್ಧ ಒಮ್ಮೆ ಆಡಲಿದೆ. ಎರಡು ಗುಂಪುಗಳಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಸೆಮಿಫೈನಲ್‌ನಲ್ಲಿ ಗೆಲ್ಲುವ ತಂಡಗಳು ಫೈನಲ್‌ನಲ್ಲಿ ಟ್ರೋಫಿಗಾಗಿ ಹಣಾಹಣಿ ನಡೆಸಲಿವೆ.
ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಕ್ರೀಡಾಂಗಣಗಳ ಇವು
ಗಯಾನಾ ನ್ಯಾಷನಲ್ ಸ್ಟೇಡಿಯಂ, ಗಯಾನಾಒಟ್ಟು ಪಂದ್ಯ: 06 (ಸೆಮಿಫೈನಲ್)
ಆಸನ ಸಾಮರ್ಥ್ಯ: 20000
ಕೆನ್ಸಿಂಗ್ಟನ್ ಓವಲ್; ಬ್ರಿಡ್ಜ್‌ಟೌನ್, ಬಾರ್ಬಡೊಸ್
ಒಟ್ಟು ಪಂದ್ಯ: 09 (ಫೈನಲ್)
ಆಸನ ಸಾಮರ್ಥ್ಯ: 28000
ಸರ್ ವಿವ್ ರಿಚರ್ಡ್ಸ್ ಕ್ರೀಡಾಂಗಣ, ಆ್ಯಂಟಿಗಾ
ಒಟ್ಟು ಪಂದ್ಯ: 08
ಆಸನ ಸಾಮರ್ಥ್ಯ: 10000ಬ್ರಿಯಾನ್ ಲಾರಾ ಅಕಾಡೆಮಿ, ಟೆನಿಡಾಡ್ ಆ್ಯಂಡ್ ಟೊಬಾಗೊಒಟ್ಟು ಪಂದ್ಯ: 05 (ಸೆಮಿಫೈನಲ್)
ಆಸನ ಸಾಮರ್ಥ್ಯ: 15000ಆ್ಯರ್ನೊಸ್ ವೇಲ್ ಕ್ರೀಡಾಂಗಂಣ, ಸೇಂಟ್ ವಿನ್ಸೆಂಟ್‌ಒಟ್ಟು ಪಂದ್ಯ: 05
ಆಸನ ಸಾಮರ್ಥ್ಯ: 18000ಡ್ಯಾರೆನ್ ಸ್ಯಾಮಿ ಕ್ರೀಡಾಂಗಣ, ಸೇಂಟ್ ಲೂಸಿಯಾಒಟ್ಟು ಪಂದ್ಯ: 06
ಆಸನ ಸಾಮರ್ಥ್ಯ: 15000ಸೆಂಟ್ರಲ್ ಬ್ರೊವರ್ಡ್ ಪಾರ್ಕ್, ಫ್ಲೋರಿಡಾಒಟ್ಟು ಪಂದ್ಯ: 04
ಆಸನ ಸಾಮರ್ಥ್ಯ: 25000ನಾಸೌ ಕೌಂಟಿ ಕ್ರೀಡಾಂಗಣ, ನ್ಯೂಯಾರ್ಕ್‌ಒಟ್ಟು ಪಂದ್ಯ: 08
ಆಸನ ಸಾಮರ್ಥ್ಯ: 34000ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣ, ಟೆಕ್ಸಾಸ್‌ಒಟ್ಟು ಪಂದ್ಯ: 04
ಆಸನ ಸಾಮರ್ಥ್ಯ: 15000
ಟಿ20 ವಿಶ್ವಕಪ್ ವಿಜೇತರ ಪಟ್ಟಿ
ವರ್ಷಚಾಂಪಿಯನ್
2007ಭಾರತ
2009ಪಾಕಿಸ್ತಾನ
2010ಇಂಗ್ಲೆಂಡ್
2012ವೆಸ್ಟ್‌ಇಂಡೀಸ್
2014ಶ್ರೀಲಂಕಾ
2016ವೆಸ್ಟ್‌ಇಂಡೀಸ್
2021ಆಸ್ಟ್ರೇಲಿಯಾ
2022ಇಂಗ್ಲೆಂಡ್
ಪ್ರಶಸ್ತಿ ಮೊತ್ತದ ವಿವರ
₹13.3 ಕೋಟಿ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತ₹6.6 ಕೋಟಿರನ್ನರ್-ಅಪ್ ತಂಡಕ್ಕೆ ಸಿಗುವ ಬಹುಮಾನ ಮೊತ್ತ
ಭಾರತೀಯ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಪಂದ್ಯಗಳ ಸಮಯ ನಿಗದಿ!
ಭಾರತಕ್ಕೆ ಹೋಲಿಸಿದರೆ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್ ಸಮಯದಲ್ಲಿ ಸಾಕಷ್ಟು ಬದಲಾವಣೆಗಳಿವೆ. ಅಮೆರಿಕದಲ್ಲಿ ರಾತ್ರಿಯಾದರೆ ಭಾರತದಲ್ಲಿ ಹಗಲಿರುತ್ತದೆ. ಆದರೆ ಭಾರತೀಯ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಭಾರತದ ಪಂದ್ಯಗಳು ಆರಂಭಗೊಳ್ಳುವ ಸಮಯ ನಿಗದಿಪಡಿಸಲಾಗಿದೆ. ಭಾರತ ಗುಂಪು ಹಂತದಲ್ಲಿ ಆಡುವ ಎಲ್ಲಾ 4 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭಗೊಳ್ಳಲಿದೆ. ಅಂದರೆ ಭಾರತದ ಪಂದ್ಯಗಳು ಅಮೆರಿಕದ ಕಾಲಮಾನ ಪ್ರಕಾರ ಬೆಳಗ್ಗೆ 10.30ಕ್ಕೆ ಶುರುವಾಗಲಿವೆ.
ಟಿ20 ವಿಶ್ವಕಪ್ ಗುಂಪುಗಳು
ಗುಂಪು ‘ಎ’
ಭಾರತ, ಪಾಕಿಸ್ತಾನ, ಕೆನಡಾ, ಐರ್ಲೆಂಡ್, ಅಮೆರಿಕ-
ಗುಂಪು ‘ಬಿ’
ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಒಮಾನ್-
ಗುಂಪು ‘ಸಿ’
ನ್ಯೂಜಿಲೆಂಡ್, ವೆಸ್ಟ್‌ಇಂಡೀಸ್, ಅಫ್ಘಾನಿಸ್ತಾನ, ಪಪುವಾ ನ್ಯೂಗಿನಿ, ಉಗಾಂಡ
-
ಗುಂಪು ‘ಡಿ’
ದ.ಆಫ್ರಿಕಾ, ನೆದರ್‌ಲೆಂಡ್ಸ್, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ