ಸಾರಾಂಶ
ಬ್ಯಾಂಕಾಕ್: ವಿಶ್ವ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತದ ನಿಶಾಂತ್ ದೇವ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಭಾರತದಿಂದ ಈ ಬಾರಿ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಂಡ ಮೊದಲ ಪುರುಷ ಬಾಕ್ಸರ್ ಮತ್ತು ಒಟ್ಟಾರೆ 4ನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ನಿಶಾಂತ್ ಶುಕ್ರವಾರ ಪುರುಷರ ವಿಭಾಗದ 71 ಕೆ.ಜಿ. ಸ್ಪರ್ಧೆಯಲ್ಲಿ ಮೊಲ್ಡೋವಾ ದೇಶದ ವ್ಯಾಸಿಲ್ ಕೆಬೊಟರಿ ವಿರುದ್ಧ 5-0 ಅಂತರದಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು.
ಭಾರತದಿಂದ ಈಗಾಗಲೇ ನಿಖಾತ್ ಜರೀನ್(50 ಕೆ.ಜಿ.), ಪ್ರೀತಿ ಪವಾರ್(54 ಕೆ.ಜಿ.) ಹಾಗೂ ಲೊವ್ಲಿನಾ ಬೊರ್ಗೋಹೈನ್(75 ಕೆ.ಜಿ.) ಒಲಿಂಪಿಕ್ಸ್ ಪ್ರವೇಶಿಸಿದ್ದಾರೆ. ಈ ಮೂವರೂ ಮಹಿಳಾ ವಿಭಾಗದಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಸಚಿನ್ ಸೆಮಿಗೆ: ಇದೇ ವೇಳೆ ಪುರುಷರ 57 ಕೆ.ಜಿ. ವಿಭಾಗದ ಸಚಿನ್ ಸಿವಾಚ್ ಸೆಮಿಫೈನಲ್ ಪ್ರವೇಶಿಸಿದರೆ, ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಅಮಿತ್ ಪಂಘಲ್ 51 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೇರಿದರು. ಮಹಿಳೆಯರ 60 ಕೆ.ಜಿ. ಸ್ಪರ್ಧೆಯಲ್ಲಿ ಅಂಕುಶಿತಾ ಹಾಗೂ 66 ಕೆ.ಜಿ. ವಿಭಾಗದಲ್ಲಿ ಅರುಂಧತಿ ಸೋತು ಹೊರಬಿದ್ದರು.