ಸಸಿಹಿತ್ಲು ಬೀಚ್‌ ಅಂತಾರಾಷ್ಟ್ರೀಯ ಸರ್ಫಿಂಗ್‌ ಹಬ್‌: ಡಿಸಿ ಮುಲ್ಲೈ ಮುಗಿಲನ್‌

| Published : Jun 01 2024, 12:47 AM IST / Updated: Jun 01 2024, 04:20 AM IST

ಸಸಿಹಿತ್ಲು ಬೀಚ್‌ ಅಂತಾರಾಷ್ಟ್ರೀಯ ಸರ್ಫಿಂಗ್‌ ಹಬ್‌: ಡಿಸಿ ಮುಲ್ಲೈ ಮುಗಿಲನ್‌
Share this Article
  • FB
  • TW
  • Linkdin
  • Email

ಸಾರಾಂಶ

5ನೇ ರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೊದಲ ದಿನ ತಮಿಳುನಾಡಿನ ಸ್ಪರ್ಧಾಳುಗಳು ಮೇಲುಗೈ ಸಾಧಿಸಿದ್ದಾರೆ.

 ಮೂಲ್ಕಿ :  ಸಸಿಹಿತ್ಲು ಪ್ರದೇಶ ಸರ್ಫಿಂಗ್‌ ಕ್ರೀಡೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು ಮುಂದಿನ ದಿನಗಳಲ್ಲಿ ಸಸಿಹಿತ್ಲು ಬೀಚ್‌ ಪ್ರದೇಶವನ್ನು ಅಂತಾರಾಷ್ಟ್ರೀಯ ಸರ್ಫಿಂಗ್‌ ಹಬ್‌ ಆಗಿ ಮಾಡುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ.ಸರ್ಫಿಂಗ್‌ನ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಇಲ್ಲಿ ಸರ್ಫಿಂಗ್‌ ತರಬೇತಿಗೆ ಉತ್ತಮ ಪ್ರದೇಶವೆಂದು ತಿಳಿಸಿದ್ದು ಸ್ಥಳೀಯ ಪ್ರತಿಭೆಗಳಿಗೆ ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು.

 ಅಂತಾರಾಷ್ಟ್ರೀಯ ಸರ್ಫಿಂಗ್‌ ಅಸೋಸಿಯೇಶನ್‌ನಿಂದ ಮಾನ್ಯತೆ ಪಡೆದ ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾದ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ, ಮಂತ್ರ ಸರ್ಫಿಂಗ್‌ ಕ್ಲಬ್‌ ಸಹಯೋಗದೊಂದಿಗೆ ಸಸಿಹಿತ್ಲುವಿನ ಮುಂಡಾ ಬೀಚ್‌ನಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ 2024ನೇ ಸಾಲಿನ ಎರಡನೇ ಹಾಗೂ 5ನೇ ಇಂಡಿಯನ್‌ ಓಪನ್‌ ಸರ್ಫಿಂಗ್‌ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. 

ನವ ಮಂಗಳೂರು ಬಂದರು ಪ್ರಾಧಿಕಾರದ ಡೆಪ್ಯುಟಿ ಚೇರ್‌ಮನ್‌ ಕೆ.ಜಿ. ನಾಥ್‌ ಮಾತನಾಡಿ ಸರ್ಫಿಂಗ್‌ಗೆ ಒಲಿಂಪಿಕ್‌ ಸ್ಪರ್ಧೆಯಲ್ಲಿ ಅವಕಾಶ ಸಿಕ್ಕಿದ್ದು ಸ್ಥಳೀಯ ಪ್ರತಿಭೆಗಳಿಗೆ ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ಮಾಡಬೇಕು. ನವಮಂಗಳೂರು ಬಂದರು ಪ್ರಾದಿಕಾರ ಸಂಪೂರ್ಣ ಸಹಕಾರ ನೀಡಲಿದೆಯೆಂದು ಹೇಳಿದರು. ಈ ಸಂದರ್ಭ ನವಮಂಗಳೂರು ಬಂದರು ಪ್ರಾದಿಕಾರದ ಕಾರ್ಯದರ್ಶಿ ಜಿಜೋ ಥೋಮಸ್‌, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಿಲ್ಲೆಯ ಉಪ ನಿರ್ದೇಶಕ ಮಾಣಿಕ್ಯ, ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾದ ಉಪಾಧ್ಯಕ್ಷ ರಾಮ್‌ ಮೋಹನ್‌ ಪರಾಂಜಪೆ, ಸರ್ಫಿಂಗ್‌ ಸ್ವಾಮಿ ಫೌಂಡೇಶನ್‌ನ ನಿರ್ದೇಶಕ ಗೌರವ್‌ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. 

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಮೇಲುಗೈ

ಮೂಲ್ಕಿ(ಮಂಗಳೂರು): ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 5ನೇ ರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೊದಲ ದಿನ ತಮಿಳುನಾಡಿನ ಸ್ಪರ್ಧಾಳುಗಳು ಮೇಲುಗೈ ಸಾಧಿಸಿದ್ದಾರೆ.ಪುರುಷರ ವಿಭಾಗದಲ್ಲಿ ಒಟ್ಟು 14 ಮಂದಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ತಮಿಳುನಾಡಿನ ಶಿವರಾಜ್‌ ಬಾಬು(15.55), ಅಜೀಶ್‌ ಆಳಿ(15.33), ಶ್ರೀಕಾಂತ್‌ ಡಿ.(13.50) ಹಾಗೂ ಹರೀಶ್‌ ಎ., ತಾಯಿನ್‌ ಅರುಣ್‌, ಮಣಿವಣ್ಣನ್‌ ಟಿ., ಸಂಜಯ್‌ ಸೆಲ್ವಮಣಿ, ಸೂರ್ಯ ಪಿ., ಸಂಜಯ್‌ ಕುಮಾರ್‌ ಎಸ್‌., ಮಣಿಕಂದನ್‌ ಎಂ., ರುಬಿನ್‌ ವಿ, ಸುಬ್ರಮಣ್ಯ ಎ., ಅಖಿಲನ್‌ ಎಸ್‌. ಮತ್ತು ಮಣಿಕಂದನ್‌ ಎಲ್‌. ಸೇರಿದಂತೆ 14 ಮಂದಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇನ್ನೂ 2 ದಿನ ಕೂಟದ ಸ್ಪರ್ಧೆಗಳು ನಡೆಯಲಿವೆ.