ಸಾರಾಂಶ
ನ್ಯೂಯಾರ್ಕ್: ಕಳೆದ ಡಿಸೆಂಬರ್ ಅರ್ನಿಯಾ ಶಸ್ತ್ರಚಿಕಿತ್ಸೆಯಿಂದಾಗಿ ಬಳಿಕ 4 ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್, ಟಿ20 ವಿಶ್ವಕಪ್‌ಗೂ ಮುನ್ನ 15 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಸೂರ್ಯಕುಮಾರ್ ತೂಕದಲ್ಲಿ ಹೆಚ್ಚಳವಾಗಿತ್ತು. ಆದರೆ ಬೆಂಗಳೂರಿನಲ್ಲಿ ಎನ್‌ಸಿಎಯಲ್ಲಿ ಡಯಟ್ ಮೂಲಕ ಭಾರಿ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿದ್ದಾರೆ.
ಕ್ರಿಕೆಟ್‌ಗೆ ಕಾರ್ತಿಕ್ ಗುಡ್‌ಬೈ
ಚೆನ್ನೈ: ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಶನಿವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2 ದಶಕಗಳ ಕ್ರಿಕೆಟ್ ವೃತ್ತಿಬದುಕಿನಲ್ಲಿ ದಿನೇಶ್ ಭಾರತದ ಪರ 180 ಪಂದ್ಯಗಳನ್ನಾಡಿದ್ದು, 3463 ರನ್ ಕಲೆಹಾಕಿದ್ದಾರೆ. 1 ಶತಕ, 17 ಅರ್ಧಶತಕ ಸಿಡಿಸಿರುವ ಅವರು, ವಿಕೆಟ್ ಕೀಪಿಂಗ್‌ನಲ್ಲಿ 172 ಬಲಿ ಪಡೆದಿದ್ದಾರೆ. ಅವರು ಇತ್ತೀಚೆಗಷ್ಟೇ ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಆಡಿದ್ದರು. 2007 ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ದಿನೇಶ್ ಈ ಬಾರಿ ವಿಶ್ವಕಪ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಗಂಭೀರ್ ಉತ್ತಮ ಕೋಚ್ ಆಗಬಲ್ಲರು: ಗಂಗೂಲಿ
ಮುಂಬೈ: ಭಾರತದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭಿರ್ ಅರ್ಜಿ ಸಲ್ಲಿಸಿದರೆ ಒಳ್ಳೆಯರು. ಅವರು ಭಾರತಕ್ಕೆ ಉತ್ತಮ ಕೋಚ್ ಆಗಬಲ್ಲರು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಬಗ್ಗೆ ಮುಂಬೈನಲ್ಲಿ ಮಾತನಾಡಿದ ಅವರು, ‘ಗಂಭೀರ್ ಕೆಕೆಆರ್ ಕೋಚ್ ಆಗಿದ್ದವರು. ಅವರಲ್ಲಿ ಗೆಲುವಿನ ಹಸಿವು, ತುಡಿತವಿದೆ. ಅವರಿಗೆ ಕೋಚ್ ಹುದ್ದೆ ನೀಡಿದರೆ ಅದು ಉತ್ತಮ ಆಯ್ಕೆಯಾಗಿರಲಿದೆ’ ಎಂದಿದ್ದಾರೆ.