ಕುಸ್ತಿ ಫೆಡರೇಷನ್‌ ಹೈಡ್ರಾಮಾ: ಬ್ರಿಜ್‌ಆಪ್ತರಿಗೆ ಜಯ, ಆಟಗಾರರ ಕಣ್ಣೀರು!

| Published : Dec 22 2023, 01:30 AM IST

ಕುಸ್ತಿ ಫೆಡರೇಷನ್‌ ಹೈಡ್ರಾಮಾ: ಬ್ರಿಜ್‌ಆಪ್ತರಿಗೆ ಜಯ, ಆಟಗಾರರ ಕಣ್ಣೀರು!
Share this Article
  • FB
  • TW
  • Linkdin
  • Email

ಸಾರಾಂಶ

ಲೈಂಗಿಕ ದೌರ್ಜನ್ಯ, ಕಿರುಕುಳ ಸೇರಿದಂತೆ ಕುಸ್ತಿಪಟುಗಳಿಂದ ಗಂಭೀರ ಆರೋಪಗಳನ್ನು ಹೊತ್ತುಕೊಂಡು ಡಬ್ಲ್ಯುಎಫ್‌ಐನಿಂದ ಬ್ರಿಜ್‌ ಕೆಳಗಿಳಿದರೂ, ಫೆಡರೇಷನ್‌ನಲ್ಲಿ ತಮ್ಮ ಪಾರುಪತ್ಯ ಸಾಧಿಸಲು ಪ್ರಭಾವಿ ಬ್ರಿಜ್‌ ಯಶಸ್ವಿಯಾಗಿದ್ದಾರೆ. ಒಂದರ್ಥದಲ್ಲಿ ದೇಶದ ಕುಸ್ತಿ ಆಡಳಿತವನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ಪಡೆದಿದ್ದಾರೆ.

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷರಾಗಿದ್ದ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ದೇಶದ ಅಗ್ರ ಕುಸ್ತಿಪಟುಗಳು ಬೀದಿಗಿಳಿದು, ಲಾಠಿ ಏಟು ತಿಂದು ನಡೆಸಿದ್ದ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ. ಕುಸ್ತಿ ಫೆಡರೇಷನ್‌ಗೆ ನಡೆದ ಚುನಾವಣೆಯಲ್ಲಿ ಬ್ರಿಜ್‌ಭೂಷಣ್‌ ಅತ್ಯಾಪ್ತರು ಜಯಭೇರಿ ಬಾರಿಸಿದ್ದಾರೆ. ಕುಸ್ತಿಪಟುಗಳ ಪರವಾಗಿ ಕಣಕ್ಕೆ ಇಳಿದಿದ್ದ ಅಭ್ಯರ್ಥಿಗೆ ಹೀನಾಯ ಸೋಲಾಗಿದೆ. ವಿಶೇಷ ಎಂದರೆ, ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರಿಗೆ ಸೋಲಾಗಿದೆ.

ಇದರ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಕುಸ್ತಿಪಟುಗಳು ಕಣ್ಣೀರಿಟ್ಟಿದ್ದಾರೆ. ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ, ವಿನೇಶ್‌ ಫೋಗಟ್‌ ಜೊತೆ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ಪ್ರಕಟಿಸಿದ ಸಾಕ್ಷಿ, ಟೇಬಲ್‌ ಮೇಲೆ ತಮ್ಮ ಶೂ ಇಟ್ಟು ವಿಶಿಷ್ಟ ರೀತಿಯಲ್ಲಿ ಕುಸ್ತಿಗೆ ಗುಡ್‌ಬೈ ಹೇಳಿದ್ದಾರೆ.

ಬ್ರಿಜ್‌ ಪಾರುಪತ್ಯ:

ಲೈಂಗಿಕ ದೌರ್ಜನ್ಯ, ಕಿರುಕುಳ ಸೇರಿದಂತೆ ಕುಸ್ತಿಪಟುಗಳಿಂದ ಗಂಭೀರ ಆರೋಪಗಳನ್ನು ಹೊತ್ತುಕೊಂಡು ಡಬ್ಲ್ಯುಎಫ್‌ಐನಿಂದ ಬ್ರಿಜ್‌ ಕೆಳಗಿಳಿದರೂ, ಫೆಡರೇಷನ್‌ನಲ್ಲಿ ತಮ್ಮ ಪಾರುಪತ್ಯ ಸಾಧಿಸಲು ಪ್ರಭಾವಿ ಬ್ರಿಜ್‌ ಯಶಸ್ವಿಯಾಗಿದ್ದಾರೆ. ಒಂದರ್ಥದಲ್ಲಿ ದೇಶದ ಕುಸ್ತಿ ಆಡಳಿತವನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ಪಡೆದಿದ್ದಾರೆ.ಹಲವು ಬಾರಿ ಮುಂದೂಡಿಕೆಯಾಗಿ, ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಡಬ್ಲ್ಯುಎಫ್‌ಐ ಚುನಾವಣೆ ಕೊನೆಗೂ ಗುರುವಾರ ನಡೆಯಿತು. ಆದರೆ ಯಾವ ಬ್ರಿಜ್‌ರನ್ನು ಡಬ್ಲ್ಯುಎಫ್‌ಐನಿಂದ ದೂರವಿಡಲು ಕುಸ್ತಿಪಟುಗಳು ಹೋರಾಟ ನಡೆಸಿದ್ದರೋ, ಅದೇ ಬ್ರಿಜ್‌ರ ಆಪ್ತರು ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿ ಅಧಿಕಾರಕ್ಕೇರಿದ್ದಾರೆ. ಈ ಮೂಲಕ ಭಜರಂಗ್‌ ಪೂನಿಯಾ, ಸಾಕ್ಷಿ ಮಲಿಕ್‌ ಸೇರಿದಂತೆ ಅಗ್ರ ಕುಸ್ತಿಪಟುಗಳಿಗೆ ತೀವ್ರ ಹಿನ್ನಡೆಯಾಗಿದೆ.ಸಂಜಯ್‌ ಅಧ್ಯಕ್ಷ:

ಒಲಿಂಪಿಕ್‌ ಭವನದಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶ ಕುಸ್ತಿ ಸಂಸ್ಥೆ ಉಪಾಧ್ಯಕ್ಷ, ಬ್ರಿಜ್ ಆಪ್ತ ಸಂಜಯ್‌ ಸಿಂಗ್‌ ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವರು ಕುಸ್ತಿಪಟುಗಳಿಂದ ಬೆಂಬಲಿತೆ ಅನಿತಾ ಶೊರೇನ್‌ ವಿರುದ್ಧ ಭರ್ಜರಿ ಗೆಲುವು ಪಡೆದರು. ಚಲಾವಣೆಗೊಂಡ 47 ಮತಗಳ ಪೈಕಿ 40 ಸಂಜಯ್‌ಗೆ ಬಿದ್ದರೆ, ಅನಿತಾ ಕೇವಲ 7 ಮತ ಪಡೆದರು.ಬ್ರಿಜ್ ಬಳಗಕ್ಕೆ ಸಿಂಹಪಾಲು:ಸಮಿತಿಯ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬ್ರಿಜ್‌ ಆಪ್ತರು 13ರಲ್ಲಿ ಗೆಲುವು ಸಾಧಿಸಿದ್ದಾರೆ. ಬ್ರಿಜ್‌ ಆಪ್ತ ಸತ್ಯಪಾಲ್‌ ಸಿಂಗ್‌ ಖಜಾಂಚಿಯಾಗಿ ಆಯ್ಕೆಯಾಗಿದ್ದು, 4 ಉಪಾಧ್ಯಕ್ಷ, 2 ಜಂಟಿ ಕಾರ್ಯದರ್ಶಿ, 5 ಸದಸ್ಯ ಹುದ್ದೆ ಕೂಡಾ ಬ್ರಿಜ್‌ ಆಪ್ತರ ಪಾಲಾಗಿದೆ. ಆದರೆ ಅನಿತಾ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರೇಮ್‌ ಚಂದ್‌ ಪ್ರಧಾನ ಕಾರ್ಯದರ್ಶಿಯಾಗಿ, ದೇವೇಂದ್ರ ಸಿಂಗ್‌ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕುಸ್ತಿಪಟುಗಳು ಬೆಂಬಲಿಸಿದ್ದ ಅನಿತಾ ಪಡೆ ಸಮಿತಿಯಲ್ಲಿ ಕೇವಲ 2 ಸ್ಥಾನಕ್ಕೆ ತೃಪ್ತಿಪಟ್ಟಿದೆ.