ಸಾರಾಂಶ
ಭಾರತ ಟಿ20 ವಿಶ್ವಕಪ್ ಗೆದ್ದು ಹೊಸ ಚರಿತ್ರೆ ಬರೆದಿದೆ. ಕ್ರಿಕೆಟ್ ಜಗತ್ತೇ ಆಟಗಾರರನ್ನು ಕೊಂಡಾಡುತ್ತಿದೆ. ಆದರೆ ಆಟಗಾರರ ಗೆಲುವಿನ ಮೆಟ್ಟಿಲು ಸುಲಭದ್ದಾಗಿರಲಿಲ್ಲ. ಬೆಟ್ಟದಷ್ಟು ಟೀಕೆಗಳನ್ನು ಎದುರಿಸಿದವರಿದ್ದಾರೆ. ಕ್ರಿಕೆಟ್ ಬದುಕೇ ಮುಗಿಯಿತು ಎಂಬ ಸ್ಥಿತಿ ತಲುಪಿದವರಿದ್ದಾರೆ.
ಯಾವುದಕ್ಕೂ ಉಪಯೋಗವಿಲ್ಲ ಎಂಬ ಚುಚ್ಚು ಮಾತುಗಳನ್ನು ಕೇಳಿಸಿಕೊಂಡವರಿದ್ದಾರೆ. ಅವರೆಲ್ಲರ ಹಿಂದೆಯೂ ಒಂದೊಂದು ಕತೆಯಿದೆ. ತಮ್ಮ ಪ್ರತಿಭೆ, ಸಾಮರ್ಥ್ಯವನ್ನು ಅನುಮಾನಿಸಿದವರಿಗೆ ಆಟದಿಂದಲೇ ಉತ್ತರಿಸಿದ ರೋಹಿತ್ ಪಡೆಯ ಒಬ್ಬೊಬ್ಬ ಆಟಗಾರನಿಗೂ ವಿಶ್ವಕಪ್ ಗೆಲುವನ್ನು ಸಂಭ್ರಮಿಸಲು ವಿಶೇಷ ಕಾರಣವಿದೆ. ಏನದು ಎಂಬ ಮಾಹಿತಿ ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ
ಸ್ಟ್ರೈಕ್‌ರೇಟ್ ಕಮ್ಮಿ ಎಂದವರಿಗೆ ಗುಮ್ಮಿದ ಕೊಹ್ಲಿ
ಕೊಹ್ಲಿ ಟಿ20ಯಲ್ಲಿ ನಿಧಾನವಾಗಿ ಆಡುತ್ತಾರೆ, ಸ್ಟ್ರೈಕ್‌ರೇಟ್ ಉತ್ತಮವಾಗಿಲ್ಲ ಎಂಬ ಟೀಕೆ ಸಾಮಾನ್ಯ. ಈ ಬಾರಿ ವಿಶ್ವಕಪ್‌ನಲ್ಲಿ ಅವರ ವೈಫಲ್ಯವೂ ಟೀಕಾಕಾರರಿಗೆ ಆಹಾರವಾಗಿತ್ತು. ಆದರೆ ಅವರೆಲ್ಲರ ಬಾಯಿ ಮುಚ್ಚಿಸಲು ಕೊಹ್ಲಿ ಮಹತ್ವದ ಫೈನಲ್ ಪಂದ್ಯವನ್ನೇ ಬಳಸಿಕೊಂಡರು. ಈ ಮೂಲಕ ಅಭಿಮಾನಿಗಳ ಕಣ್ಣಲ್ಲಿ ತಾವು ಎಂದೆಂದಿಗೂ ಹೀರೋ ಆಗಿಯೇ ಉಳಿಯಲಿದ್ದಾರೆ.
ರೋಹಿತ್ ಐಪಿಎಲ್‌ಗಷ್ಟೇ ಓಕೆ ಎಂದವರೀಗ ಸೈಲೆಂಟ್
ಸ್ಟಾರ್ ಆಟಗಾರರು ತಂಡದಲ್ಲಿರುವುದಕ್ಕೆ ಐಪಿಎಲ್‌ನಲ್ಲಿ ರೋಹಿತ್ ಶರ್ಮಾಗೆ ಅಮೋಘ ಯಶಸ್ಸು ಸಿಗುತ್ತಿದೆ. ಅವರನ್ನು ಜನ ಹೊಗಳಿ ಅಟ್ಟಕ್ಕೇರಿಸುವಷ್ಟು ಉತ್ತಮ ನಾಯಕ ಅವರಲ್ಲ. ತಂಡ ನಿರ್ವಹಣೆಯಲ್ಲಿ ಅವರ ಕೌಶಲ್ಯ ಸಾಧಾರಣ. ಈ ರೀತಿಯ ಅವೆಷ್ಟು ಟೀಕೆಗಳನ್ನು ರೋಹಿತ್ ಕೇಳಿದ್ದಾರೋ? ಬಿಸಿಸಿಐ ರೋಹಿತ್‌ರನ್ನು ನಾಯಕನನ್ನಾಗಿ ನೇಮಿಸಿದಾಗ ವಿಶ್ವಕಪ್ ಗೆಲ್ಲಬೇಕು ಎನ್ನುವ ಟಾಸ್ಕ್ ನೀಡಿತ್ತು. ಏಕದಿನ, ಟೆಸ್ಟ್ ವಿಶ್ವಕಪ್ ಸೋತಿದ್ದ ರೋಹಿತ್ ಟಿ20 ವಿಶ್ವಕಪ್ ಅಗ್ನಿಪರೀಕ್ಷೆಯಾಗಿತ್ತು. ಆ ಪರೀಕ್ಷೆಯಲ್ಲಿ ಗೆದ್ದ ರೋಹಿತ್ ಟೀಕಿಸಿದವರೆಲ್ಲರ ಬಾಯಿ ಮುಚ್ಚಿಸಿದ್ದಾರೆ.
ಸಾವು ಗೆದ್ದು ಪಂತ್ ಈಗ ವಿಶ್ವ ಚಾಂಪಿಯನ್!
2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ರಿಷಭ್ ಪಂತ್ ಕ್ರಿಕೆಟ್‌ಗೆ ಮರಳಿದ್ದೇ ಒಂದು ಅಚ್ಚರಿ. ಪಂತ್‌ಗೆ ಮತ್ತೆ ಹಳೆ ರೀತಿ ಆಡಲು ಆಗುತ್ತಾ? ಅವರು ಫಿಟ್ ಇದ್ದಾರೋ ಇಲ್ಲವೋ. ಹೀಗೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಸಾವು ಗೆದ್ದು ಬಂದವನಿಗೆ ಕ್ರಿಕೆಟ್ ಮೈದಾನದಲ್ಲಿ ಗೆಲ್ಲುವುದ್ಯಾವ ಲೆಕ್ಕ? ಎನ್ನುವುದನ್ನು ತೋರಿಸಿಕೊಟ್ಟ ಪಂತ್, ತಮ್ಮನ್ನು ಅನುಮಾನಿಸಿದವರೆಗೆ ತಕ್ಕ ರೀತಿಯಲ್ಲೇ ಉತ್ತರ ನೀಡಿದರು.
ಹಾರ್ದಿಕ್‌ರ ಮಾನಸಿಕ ಗಟ್ಟಿತನಕ್ಕೆ ಸಲಾಂ!
ಹಾರ್ದಿಕ್ ಕಳೆದ 6 ತಿಂಗಳಲ್ಲಿ ಎದುರಿಸಿದ ಟೀಕೆ, ಅನುಭವಿಸಿದ ನೋವು, ಅವಮಾನ ಅಷ್ಟಿಷ್ಟಲ್ಲ. ಐಪಿಎಲ್ ವೇಳೆ ಮೈದಾನಕ್ಕೆ ನಾಯಿ ನುಗ್ಗಿದಾಗಲೂ ‘ಹಾರ್ದಿಕ್ ಹಾರ್ದಿಕ್’ ಎಂದು ಕೆಲ ಅಭಿಮಾನಿಗಳು ಕೂಗಿದ್ದರು. ಕಳಪೆ ಆಟ, ಐಪಿಎಲ್ ನಾಯಕತ್ವ, ದಾಂಪತ್ಯದಲ್ಲಿ ಬಿರುಕು ಹೀಗೆ ಹಲವು ಸವಾಲು ಎದುರಿಸಿದ್ದ ಹಾರ್ದಿಕ್, ವಿಶ್ವಕಪ್ ಗೆಲ್ಲುವುದರೊಂದಿಗೆ ಕಣ್ಣೀರಾದರು. ಅವರ ಮಾನಸಿಕ ಗಟ್ಟಿನಕ್ಕೆ ಸಲಾಂ ಹೇಳಬೇಕಿರುವುದ ಕ್ರಿಕೆಟ್ ಅಭಿಮಾನಿಗಳ ಕರ್ತವ್ಯ.
ಆಯ್ಕೆ ಪ್ರಶ್ನಿಸಿದವರಿಗೆ ದುಬೆ ತಕ್ಕ ಉತ್ತರ
ರಿಂಕು ಸಿಂಗ್, ಜೈಸ್ವಾಲ್‌ರನ್ನು ಹೊರಗಿಟ್ಟು ಶಿವಂ ದುಬೆಯನ್ನು ಆಡಿಸಿದಾಗ ಹಲವರು ಪ್ರಶ್ನಿಸಿದ್ದರು, ಟೀಕಿಸಿದ್ದರು. ಐಪಿಎಲ್ ಆಟಕ್ಕೆ ಬಿಸಿಸಿಐ ಮಣೆ ಹಾಕಿದೆ, ಯಾರದೋ ಲಾಬಿಯಿಂದ ಸ್ಥಾನ ಸಿಕ್ಕಿದೆ ಎಂದಿದ್ದರು. ಆದರೆ ಫೈನಲ್‌ನಲ್ಲಿ ದುಬೆ ಆಡಿದ ಆಟ ತಂಡದ ಟ್ರೋಫಿ ಗೆಲುವಿಗೆ ಕಾರಣವಾಯಿತು ಎನ್ನುವುದನ್ನು ಮರೆಯುವ ಹಾಗಿಲ್ಲ.
ಶಸ್ತ್ರಚಿಕಿತ್ಸೆ ಬಳಿಕವೂ ಬೂಮ್ರಾ ‘ಬೆಂಕಿ’!
ಬೂಮ್ರಾ ತಮ್ಮ ಕ್ರಿಕೆಟ್ ಬದುಕಿನಲ್ಲಿ ಹೆಚ್ಚಿನ ಕಷ್ಟ ಅನುಭವಿಸಿದ್ದೇ ಗಾಯದ ಕಾರಣಕ್ಕೆ. ಗಾಯದಿಂದಾಗಿ 2022ರ ಟಿ20 ವಿಶ್ವಕಪ್ ತಪ್ಪಿಸಿಕೊಂಡಿದ್ದ ಬೂಮ್ರಾ, ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ತಂಡಕ್ಕೆ ಮರಳಿದ ಬಳಿಕ ಅವರ ಬೌಲಿಂಗ್‌ನಲ್ಲಿ ಹಳೆಯ ಮೊನಚು ಇರಲಿದೆಯೇ?, ಅದೇ ತೀವ್ರತೆಯಿಂದ ಬೌಲ್ ಮಾಡಲು ಸಾಧ್ಯವೇ ಎಂದು ಹಲವರು ಅನುಮಾನಿಸಿದ್ದರು. ಯಾವ ಗಾಯವೂ ತಮ್ಮ ಅಲುಗಾಡಿಸಲು ಸಾಧ್ಯವಿಲ್ಲ ಎಂಬಂತೆ ಬೂಮ್ರಾ ಬೆಂಕಿಯುಂಡೆಗಳನ್ನು ಎಸೆದು ಕಪ್ ಗೆಲ್ಲಿಸಿದ್ದಾರೆ.
‘ವೇಸ್ಟ್’ ಎಂದವರಿಗೆ ಸೂರ್ಯ ‘ಶಾಕ್ ಟ್ರೀಟ್ಮೆಂಟ್’!
ಸೂರ್ಯ ಟಿ20ಯ ಶ್ರೇಷ್ಠ ಬ್ಯಾಟರ್. ಆದರೆ ನಿರ್ಣಾಯಕ ಪಂದ್ಯಗಳಲ್ಲಿ ಕೈಕೊಡುವ ಬಗ್ಗೆ ಅಭಿಮಾನಿಗಳು, ಕ್ರಿಕೆಟ್ ತಜ್ಞರಲ್ಲಿ ಅಸಮಾಧಾನವಿದೆ. ಏಕದಿನ ವಿಶ್ವಕಪ್‌ನಲ್ಲಿ ವಿಫಲರಾಗಿದ್ದ ಅವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಿದಾಗ ಅನೇಕರು ಮೂಗು ಮುರಿದಿದ್ದರು. ಆದರೆ ಫೈನಲ್‌ನಲ್ಲಿ ಸೂರ್ಯ, ಮಿಲ್ಲರ್‌ರ ಕ್ಯಾಚ್ ಹಿಡಿಯದೆ ಹೋಗಿದ್ದರೆ ಭಾರತ ಚಾಂಪಿಯನ್ ಆಗುತ್ತಿರಲಿಲ್ಲವೇನೋ.
‘ಕೋಟಾ’ ಪ್ಲೇಯರ್ ಎಂದವರಿಗೆ ಅಕ್ಷರ್ ಚಾಟಿ!
ಟಿ20 ವಿಶ್ವಕಪ್‌ಗೆ ಅಕ್ಷರ್ ಆಯ್ಕೆಯಾದಾಗ ಬಹುತೇಕರು ಬಿಸಿಸಿಐ ನಿರ್ಧಾರ ಪ್ರಶ್ನಿಸಿದ್ದರು. ಗುಜರಾತ್ ಕೋಟಾದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಟೀಕಿಸಿದ್ದರು. ಆದರೆ ಅಕ್ಷರ್ ವಿಶ್ವಕಪ್ ಗೆಲುವಿನ ಹೀರೋ. ಟ್ರೋಫಿ ಗೆಲುವಿನಲ್ಲಿ ಅಕ್ಷರ್ ಕೊಡುಗೆಯೇನು ಎಂದು ಯಾರಾದರು ಪ್ರಶ್ನಿಸಿದರೆ, ಅವರು ವಿಶ್ವಕಪ್ ನೋಡೇ ಇಲ್ಲ ಎಂದರ್ಥ.
ಆಯ್ಕೆ ಸಮರ್ಥಿಸಿಕೊಂಡ ಅರ್ಶ್‌ದೀಪ್, ಕುಲ್ದೀಪ್!
ಟಿ20ಗೆ ಅರ್ಶ್‌ದೀಪ್, ಕುಲ್ದೀಪ್ ಯಾಕೆ ಬೇಕು ಎಂದವರೇ ಹೆಚ್ಚು. ಅರ್ಶ್‌ದೀಪ್ ಹೆಚ್ಚು ವೈಡ್ ಹಾಕುತ್ತಾರೆ. ಲೆಂಥ್ ಮೇಲೆ ನಿಯಂತ್ರಣವಿಲ್ಲ. ಲೈನ್ ಕಾಪಾಡಿಕೊಳ್ಳುವುದಿಲ್ಲ ಹೀಗೆ ಹಲವು ಟೀಕೆಗಳು ಕೇಳಿಬಂದವು. ಈತನಿಗೆ ಅವಕಾಶ ನೀಡಿ ಬಿಸಿಸಿಐ ಸಮಯ ವ್ಯರ್ಥ ಮಾಡುತ್ತಿದೆ ಎಂದವರೂ ಇದ್ದಾರೆ. ಇನ್ನು ಕುಲ್ದೀಪ್‌ರನ್ನು ಟಿ20 ತಂಡದಿಂದಲೇ ಹೊರಹಾಕಲಾಗಿತ್ತು. ಆದರೆ ವಿಶ್ವಕಪ್ ಜಯಕ್ಕೆ ಇವರಿಬ್ಬರ ಕೊಡುಗೆ ಅನರ್ಘ್ಯ.
ದ್ರಾವಿಡ್ ಡಿಫೆನ್ಸ್ ಟು ಅಟ್ಯಾಕ್!
ರಕ್ಷಣಾತ್ಮಕ ಆಟಕ್ಕೆ ಹೆಸರುವಾಗಿದ್ದ ರಾಹುಲ್ ದ್ರಾವಿಡ್ ಭಾರತದ ಕೋಚ್ ಆದಾಗ ಹಲವರಿಂದ ಟೀಕೆ ಎದುರಾಗಿತ್ತು. ಅದರಲ್ಲೂ ಕಳೆದ ಏಕದಿನ ವಿಶ್ವಕಪ್ ವೇಳೆ ಅವರ ಕೋಚಿಂಗ್ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದವು. ಆಕ್ರಮಣಕಾರಿ ಆಟ ಗೊತ್ತಿಲ್ಲದ ಕೋಚ್ ಸೀಮಿತ ಓವರ್‌ಗಳಲ್ಲಿ ಹೇಗೆ ಟ್ರೋಫಿ ಗೆಲ್ಲಿಸಿಕೊಡುತ್ತಾರೆ ಎಂದು ಕುಟುಕಿದ್ದರು. ಏಕದಿನ ವಿಶ್ವಕಪ್ ಫೈನಲ್ ಸೋತಾಗಲಂತೂ ಅವರ ತಲೆದಂಡ ಆಗಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಹೊರಗಿನ ಟೀಕೆಗಳಿಗೆ ಬೆಲೆ ಕೊಡದ ದ್ರಾವಿಡ್ ಟಿ20 ವಿಶ್ವಕಪ್‌ಗೆ ಸಮರ್ಥ ತಂಡ ಸಜ್ಜುಗೊಳಿಸಿದರು. ಅಮೆರಿಕ, ವಿಂಡೀಸ್‌ನ ಪಿಚ್‌ಗಳಿಗೆ ಬೇಕಿದ್ದ ರೀತಿಯಲ್ಲಿ ತಂಡಕ್ಕೆ ಮಾರ್ಗದರ್ಶನ ಮಾಡಿ ಬಹುನಿರೀಕ್ಷಿತ ಕಪ್ ಗೆಲ್ಲಿಸಿಕೊಟ್ಟರು.