ಸಾರಾಂಶ
ಚೆನ್ನೈ: ದಕ್ಷಿಣ ಆಫ್ರಿಕಾ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಅಧಿಪತ್ಯ ಸಾಧಿಸಿದ್ದು, ಮಹಿಳಾ ಟೆಸ್ಟ್‌ನಲ್ಲೇ ಇನ್ನಿಂಗ್ಸ್‌ನ ಗರಿಷ್ಠ ರನ್ ವಿಶ್ವ ದಾಖಲೆ ಬರೆದಿದೆ. ಶನಿವಾರ ಭಾರತ 6 ವಿಕೆಟ್ ಕಳೆದುಕೊಂಡು 603 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಇದು ಹೊಸ ದಾಖಲೆ. ಈ ಮೊದಲು ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ 575 ರನ್ ಗಳಿಸಿದ್ದು ಮಹಿಳಾ ಟೆಸ್ಟ್‌ನಲ್ಲಿ ಗರಿಷ್ಠ ಮೊತ್ತ ಎನಿಸಿಕೊಂಡಿತ್ತು. ಇದೇ ವೇಳೆ ಇನ್ನಿಂಗ್ಸ್‌ನಲ್ಲಿ 600+ ರನ್ ಕಲೆಹಾಕಿದ ಮೊದಲ ಮಹಿಳಾ ತಂಡ ಎಂಬ ಖ್ಯಾತಿಗೂ ಭಾರತ ಪಾತ್ರವಾಯಿತು.ಮೊದಲ ದಿನವೇ 4 ವಿಕೆಟ್‌ಗೆ ಬರೋಬ್ಬರಿ 525 ರನ್ ಗಳಿಸಿದ್ದ ದಾಖಲೆ ಬರೆದಿದ್ದ ಭಾರತ, ಹಿಂದಿನ ದಿನದ ಮೊತ್ತಕ್ಕೆ ಶನಿವಾರ 78 ರನ್ ಸೇರಿಸಿತು. 42 ರನ್ ಗಳಿಸಿದ್ದ ನಾಯಕಿ ಹರ್ಮನ್‌ಪ್ರೀತ್ ಕವರ್ 69ಕ್ಕೆ ಔಟಾದರೆ, ಶತಕದ ನಿರೀಕ್ಷೆಯಲ್ಲಿದ್ದ ರಿಚಾ ಘೋಷ್ 86 ರನ್‌ಗೆ ವಿಕೆಟ್ ಒಪ್ಪಿಸಿದರು. ಶಫಾಲಿ ಔಟಾದ ಕೂಡಲೇ ಭಾರತ ಡಿಕ್ಲೇರ್ ಘೋಷಿಸಿತು.
ಬಳಿಕ ಇನ್ನಿಂಗ್ಸ್ ಆರಂಭಿಸಿದ ದ.ಆಫ್ರಿಕಾ 2ನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 236 ರನ್ ಕಲೆಹಾಕಿದ್ದು, ಇನ್ನೂ 367 ರನ್ ಹಿನ್ನಡೆಯಲ್ಲಿದೆ. ಸುನೆ ಲ್ಯೂಸ್ 65 ರನ್ ಗಳಿಸಿದರೆ, ಮರಿಯಾನೆ ಕಾಪ್(ಔಟಾಗದೆ 69) 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸ್ನೇಹ ರಾಣಾ 3 ವಿಕೆಟ್ ಕಿತ್ತರು.ಸ್ಕೋರ್: ಭಾರತ 603/6 ಡಿ.(ರಿಚಾ 86, ಹರ್ಮನ್‌ಪ್ರೀತ್ 69, ಟಕ್ಕರ್ 2-141), ದ.ಆಫ್ರಿಕಾ 236/4 (2ನೇ ದಿನದಂತ್ಯಕ್ಕೆ) (ಮಾರಿಯಾನೆ 69*, ಲ್ಯೂಸ್ 65, ಸ್ನೇಹ 3-61)