ಅಜಿತ್ ಕುಮಾರ್ ಮಣಿಪಾಲ್
ಜಿರಳೆ...!
ವಿಚಾರಣೆಯೊಂದರ ಸಂದರ್ಭ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಬಳಸಿದ ಈ ಒಂದು ಪದ ದೇಶದಲ್ಲಿ ಕೆಲವೇ ತಿಂಗಳುಗಳ ಅವಧಿಯಲ್ಲಿ ಯುವಜನರ ಹೋರಾಟಕ್ಕೆ ಕಾರಣವಾಗಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರ ತಲೆದಂಡಕ್ಕೆ ಕಾರಣವಾಗಿದ್ದು ಇತಿಹಾಸ. ದೆಹಲಿಯಲ್ಲಿ ನಡೆದ ಜಿರಳೆ ಜನತಾ ಪಕ್ಷದ ಹೋರಾಟ ಇಡೀ ವಿಶ್ವದ ಗಮನವನ್ನು ಸೆಳೆಯಿತು. ಭಾರಿ ಚರ್ಚೆಗೂ ಕಾರಣವಾಯಿತು. ಅಂತಹದ್ದೇ ಹೋರಾಟ ಜಾರ್ಖಂಡ್‌ನಲ್ಲೂ ನಡೆಯುತ್ತಿದೆ. ದೆಹಲಿಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಹೋರಾಟದ ಅಜೆಂಡಾ ಆಗಿದ್ದರೆ, ಜಾರ್ಖಂಡ್‌ನ ಚಳವಳಿಗೆ ತರಕಾರಿಗಳ ರೀತಿ ಬಿಕರಿಯಾಗುತ್ತಿರುವ ಸರ್ಕಾರಿ ಉದ್ಯೋಗ ಕಾರಣ!
23 ದಿನಗಳಿಂದ ಜಾರ್ಖಂಡ್ ರಾಜಧಾನಿ ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಸ್ಟೇಡಿಯಂನಲ್ಲಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜೆನ್‌ಝೀ-ಅಭ್ಯರ್ಥಿಗಳು ಪೊಲೀಸರ ಅಶ್ರುವಾಯು ಪ್ರಯೋಗ, ಲಾಠಿ ಪ್ರಯೋಗವನ್ನೂ ಮೆಟ್ಟಿ ನಿಂತು ನೌಕರಿ ನೇಮಕಾತಿ ವ್ಯವಸ್ಥೆಯ ಅಕ್ರಮದ ವಿರುದ್ಧ ನಿರ್ಣಾಯಕ ಯುದ್ಧ ಸಾರಿದ್ದಾರೆ.
ಯಾಕೆ ಈ ಹೋರಾಟ?:
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೆಯಲ್ಲ, ಅದೇ ರೀತಿ ಜಾರ್ಖಂಡ್‌ನಲ್ಲೂ ಉದ್ಯೋಗ ನೇಮಕಾತಿಗೆ ಜೆಪಿಎಸ್‌ಸಿ ಇದೆ. ಥೇಟ್ ಇಲ್ಲಿಯಂತೆ ನೇಮಕಾತಿ ಅಕ್ರಮ, ಭ್ರಷ್ಟಾಚಾರ ಆರೋಪಗಳಲ್ಲಿ ಮುಳುಗೇಳುತ್ತಿದೆ. ಕೆಪಿಎಸ್ಸಿಗಿಂತ ಜೆಪಿಎಸ್ಸಿ ಗಬ್ಬೆದ್ದು ಹೋಗಿದೆ. ವಿದ್ಯಾರ್ಥಿ-ಯುವಜನರ ದಂಗೆಗೆ ಇದೇ ಮೂಲ ಕಾರಣ. ಜೆಪಿಎಸ್‌ಸಿ ಪರೀಕ್ಷೆ, ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆ ಕಳೆದ 2 ದಶಕಗಳಿಂದಲೂ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಲೇ ಬಂದಿದೆ. ಈಚೆಗೆ ನಡೆದ, ಸದ್ಯ ವಿದ್ಯಾರ್ಥಿ ದಂಗೆಗೆ ಮೂಲ ಕಾರಣವಾಗಿರುವ 14ನೇ ಜೆಪಿಎಸ್‌ಸಿ ಪ್ರಿಲಿಮಿನರಿ ಪರೀಕ್ಷೆ ಮತ್ತು ಜಾರ್ಖಂಡ್ ಸ್ಟಾಪ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಪರೀಕ್ಷೆ(ಜೆಎಸ್‌ಎಸ್‌ಸಿ-ಸಿಜಿ) ಇದಕ್ಕೆ ಹೊಸ ಸೇರ್ಪಡೆ ಅಷ್ಟೆ. ಆರೋಪಗಳು ಕೇಳಿಬಂದಾಗ ಸರ್ಕಾರ ತನಿಖೆ ಹೆಸರಿನಲ್ಲಿ ಇಡೀ ಪ್ರಕರಣವನ್ನೇ ಮುಚ್ಚಿಹಾಕುವುದು, ಪದೇ ಪದೇ ನೇಮಕಾತಿ ಪರೀಕ್ಷೆ ವಿಳಂಬ ಮಾಡುವುದು, ದುಡ್ಡಿದ್ದವರಿಗೆ ಸರ್ಕಾರಿ ಉದ್ಯೋಗ ಎನ್ನುವ ಪರಿಸ್ಥಿತಿಯಿಂದಾಗಿ ಬೇಸತ್ತಿದ್ದ ವಿದ್ಯಾರ್ಥಿಗಳು ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆದ ಜೆನ್‌ಝೀ ಹೋರಾಟದಿಂದ ಪ್ರೇರೇಪಿತರಾಗಿ ಮಹತ್ವದ ಹೋರಾಟಕ್ಕೆ ಧುಮುಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು
ಜೆಪಿಎಸ್‌ಸಿ ಕಳೆದ ಏಪ್ರಿಲ್‌ನಲ್ಲಿ 14ನೇ ನಾಗರಿಕ ಸೇವೆಗಳ ಪ್ರಿಲಿಮಿನರಿ ಪರೀಕ್ಷೆ (ಕಂಬೈನ್ಡ್ ಸಿವಿಲ್ ಸರ್ವೀಸಸ್ ಎಕ್ಸಾಂ) ನಡೆಸಿತ್ತು. ಒಟ್ಟು 103 ಹುದ್ದೆಗಳಿಗೆ ನಡೆದಿದ್ದ ಈ ಪರೀಕ್ಷೆಗೆ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 2,204 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದರು. ಜು.2ರಂದು ಪ್ರಾಥಮಿಕ ಪರೀಕ್ಷೆ ಫಲಿತಾಂಶ ಪ್ರಕಟವಾದಾಗಲೇ ಅಕ್ರಮದ ವಾಸನೆ ಬಡಿದಿತ್ತು. ಫಲಿತಾಂಶದಲ್ಲಿ ಕೆಟಗರಿವಾರು ಕಟ್-ಆಫ್ ಅಂಕಗಳನ್ನು ನೀಡದಿರುವುದು, ಅಭ್ಯರ್ಥಿಯ ಮೆರಿಟ್ ಪಟ್ಟಿ ಸಿದ್ಧತೆಯಲ್ಲಿ ಪಾರದರ್ಶಕತೆಯ ಕೊರತೆ ಹಾಗೂ ಜೆಪಿಎಸ್‌ಸಿಯ ಇನ್ನೂ ಹಲವು ಶಂಕಾಸ್ಪದ ನಡೆಗಳಿಂದಾಗಿ ವಿದ್ಯಾರ್ಥಿಗಳು ಇಡೀ ಪರೀಕ್ಷೆಯನ್ನೇ ರದ್ದು ಮಾಡುವಂತೆ ಒತ್ತಾಯಿಸಿದರು. ಈ ಹೊತ್ತಿಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದ ಅಭ್ಯರ್ಥಿಯದ್ದು ಎನ್ನಲಾದ ಒಎಂಆರ್ ಶೀಟ್‌ನ ಕಾರ್ಬನ್ ಪ್ರತಿ ಆರಂಭಿಕ ಹೋರಾಟದ ಕಿಡಿ ಹಚ್ಚಿತು. ಪೇಪರ್-1ರಲ್ಲಿ 100ರ ಪೈಕಿ ಕೇವಲ 48 ಪ್ರಶ್ನೆಗಳಿಗೆ ಉತ್ತರಿಸಿದ್ದರೂ ಆ ಅಭ್ಯರ್ಥಿ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದ! ಇದನ್ನು ತಿಳಿದು ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಕಾರ್ಬನ್ ಪ್ರತಿ ಅಸಲಿಯೋ, ನಕಲಿಯೋ ಎಂಬುದು ಖಚಿತವಾಗದಿದ್ದರೂ ಆ ಹೊತ್ತಿಗಾಗಲೇ ಸರ್ಕಾರಿ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳಿಂದಾಗಿ ಆಕಾಂಕ್ಷಿಗಳಲ್ಲಿ ಮಡುಗಟ್ಟಿದ್ದ ಆಕ್ರೋಶದ ಕಟ್ಟೆಯೊಡೆಯಿತು. ಸಣ್ಣ ಮಟ್ಟದಲ್ಲಿ ಆರಂಭವಾದ ಹೋರಾಟಕ್ಕೆ ಕೇವಲ ಒಂದೇ ವಾರದಲ್ಲಿ ರಾಜ್ಯದ ಮೂಲೆ ಮೂಲೆಗಳ ವಿದ್ಯಾರ್ಥಿಗಳೂ ಜತೆಯಾದರು.
ರಾಂಚಿಯ ಜಂತರ್ ಮಂತರ್
ಆರಂಭದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಹೋರಾಟದಿಂದ ಪ್ರೇರಣೆಗೊಂಡು ರಾಂಚಿಯಲ್ಲಿ ವಿದ್ಯಾರ್ಥಿಗಳ ಸಣ್ಣದೊಂದು ಗುಂಪು ಪ್ರತಿಭಟನೆ ಆರಂಭಿಸಿತು. ಬಳಿಕ ಜು.25ರಂದು ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ರೀಫಾರ್ಮ್ಸ್ ಮಂಚ್ ಅಥವಾ ಅಭ್ಯರ್ಥಿ ನ್ಯಾಯ್ ಮಂಚ್ ನೇತೃತ್ವದಲ್ಲಿ ದೊಡ್ಡಮಟ್ಟದ ಹೋರಾಟ ಆರಂಭವಾಯಿತು. ಜು.28ರಂದು ಪ್ರತಿಭಟನಾ ಸ್ಥಳವನ್ನು ಮೊರಬಾಡಿಯ ಬಾಪು ವಾಟಿಕಾದಿಂದ ಜೈಪಾಲ್ ಸಿಂಗ್ ಮುಂಡಾ ಸ್ಟೇಡಿಯಂಗೆ ಬದಲಾಯಿಸಲಾಯಿತು. ಜು.29ರಂದು ಈ ಹೋರಾಟ ಮಹಾ ಆಂದೋಲನವಾಗಿ ರೂಪುಗೊಂಡಿತು. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಗೆ ಧುಮುಕಿದರು. ಸಾಮಾಜಿಕ ಜಾಲತಾಣದ ಮೂಲಕ ವಿದ್ಯಾರ್ಥಿಗಳನ್ನು ಪ್ರತಿಭಟನೆಯಲ್ಲಿ ಕೈಜೋಡಿಸುವಂತೆ ಆಹ್ಪಾನಿಸಲಾಯಿತು. ಈ ಮೂಲಕ ಇದು ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ವಿದ್ಯಾರ್ಥಿ ಚಳವಳಿಯಾಗಿ ಮಾರ್ಪಟ್ಟಿತು. ಸದ್ಯ ಈ ವಿದ್ಯಾರ್ಥಿ ಕೇಂದ್ರಿತ ಚಳವಳಿ, ಎರಡು ಗುಂಪಾಗಿ ವಿಂಗಡಣೆಯಾಗಿದ್ದು ಒಂದು ಗುಂಪು ಜೆಎಲ್‌ಕೆಎಂ ನಾಯಕ ದೇವೇಂದ್ರ ನಾಥ್ ಜತೆ ನಿಂತರೆ, ಮತ್ತೊಂದು ಗುಂಪು ರೀಫಾರ್ಮ್ ಮಂಚ್ ಬೆಂಬಲಿಸುತ್ತಿದೆ. ಈ ಎರಡೂ ಗುಂಪು ಈಗ ಸ್ಟೇಡಿಯಂನಲ್ಲೇ ಪ್ರತ್ಯೇಕವಾಗಿ ಪ್ರತಿಭಟನೆ ಮುಂದುವರಿಸಿದರೂ ಹೋರಾಟದ ವೇಳೆ ಮಾತ್ರ ಜತೆಯಾಗಿ ನಿಲ್ಲುತ್ತಿರುವುದು ವಿಶೇಷ.
ಸದ್ಯ ಪ್ರತಿಭಟನಾಕಾರರ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಸಿಬಿಐ ತನಿಖೆಯ ಆಗ್ರಹ ಹೊರತುಪಡಿಸಿ ಪ್ರತಿಭಟನಾಕಾರರ ಬಹುತೇಕ ಬೇಡಿಕೆಯನ್ನು ಈಡೇರಿಸಿದೆ. ಆದರೆ, ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಪಟ್ಟು ಹಿಡಿದು ವಿದ್ಯಾರ್ಥಿಗಳು ಹೋರಾಟ ಮುಂದುವರಿಸಿದ್ದಾರೆ.
ಜೆನ್‌ಝೀಗಳ ಪಾಲಿನ ದೇವರು ದೇವೇಂದ್ರ
ರಾಂಚಿಯಲ್ಲಿ ನಡೆಯುತ್ತಿರುವ ಜೆನ್‌ಝೀ ಹೋರಾಟಗಾರರಿಗೆ ಜಾರ್ಖಂಡ್ ಲೋಕತಾಂತ್ರಿಕ್ ಕ್ರಾಂತಿಕಾರಿ ಮೋರ್ಚಾ (ಜೆಎಲ್‌ಕೆಎಂ)ದ ನಾಯಕ ದೇವೇಂದ್ರನಾಥ್ ಅವರೇ ಹೀರೋ. ಜೆಪಿಎಸ್ಸಿ ಅಕ್ರಮದ ವಿರುದ್ಧ ಉಪವಾಸ ಆರಂಭಿಸಿರುವ ಅವರು, 15 ದಿನಗಳಿಂದ ಅನ್ನಾಹಾರವಿಲ್ಲದೆ ಹೋರಾಟ ಮುಂದುವರಿಸಿದ್ದಾರೆ. ಹದಗೆಟ್ಟ ಆರೋಗ್ಯ ಸ್ಥಿತಿಯ ನಡುವೆಯೂ ಆ.10ರಂದು ವಿದ್ಯಾರ್ಥಿಗಳ ಜತೆ ವಿಧಾನಸಭಾ ಚಲೋ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರನ್ನು ಅಲ್ಲಿಂದಲೇ ಆ್ಯಂಬುಲೆನ್ಸ್ ಮೂಲಕ ರಾಂಚಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೀಗ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿನ್ನೂ ನಿರಶನ ಕೈಬಿಟ್ಟಿಲ್ಲ.
ಸ್ನಾತಕೋತ್ತರ ಪದವೀಧರರಾಗಿರುವ, 2 ವರ್ಷಗಳ ಹಿಂದೆ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿ ಸೋತಿದ್ದ ದೇವೇಂದ್ರನಾಥ್ ವಿದ್ಯಾರ್ಥಿ ರಾಜಕೀಯ, ಹೋರಾಟದಲ್ಲಿ ಗುರುತಿಸಿಕೊಂಡವರು. ನೀಟ್ ಚಳವಳಿ ವೇಳೆ ದೆಹಲಿಯ ಜಂತರ್‌ಮಂತರ್‌ನಲ್ಲಿ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು 27 ದಿನಗಳ ನಿರಶನ ನಡೆಸಿದ ಮಾದರಿಯಲ್ಲೇ ದೇವೇಂದ್ರನಾಥ್ ಹೋರಾಟ ನಡೆಸುತ್ತಿದ್ದಾರೆ. ಈ ನಿರಶನಕ್ಕೆ ಇತರೆ ಐದು ವಿದ್ಯಾರ್ಥಿಗಳೂ ಸಾಥ್ ನೀಡಿದ್ದಾರೆ. ದೇವೇಂದ್ರನಾಥ್ ಅವರ ಹೋರಾಟಕ್ಕೆ ಬೆಂಬಲ ನೀಡಿರುವ ವಾಂಗ್ಚುಕ್ ಅವರು ಆ.6ರಂದು ವಿಡಿಯೋ ಕರೆ ಮಾಡಿ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ. ಕನಿಷ್ಠ ನೀರನ್ನಾದರೂ ಸೇವಿಸುವಂತೆ ಮನವಿ ಮಾಡಿದ್ದಾರೆ.
ರಾಜಕೀಯ ವ್ಯಕ್ತಿಗಳಿಗಿಲ್ಲ ಇಲ್ಲಿ ಪ್ರವೇಶ!
ನೀಟ್ ಪರೀಕ್ಷಾ ಅಕ್ರಮ ವಿರುದ್ಧ ದೆಹಲಿಯ ಜಂತರ್ ಮಂತರ್ ರೀತಿಯಲ್ಲೇ ರಾಂಚಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಈ ಪ್ರತಿಭಟನೆ ಹಲವು ಕಾರಣಗಳಿಗಾಗಿ ಗಮನ ಸೆಳೆಯುತ್ತಿದೆ. ಜಂತರ್ ಮಂತರ್ ರೀತಿ ಇಲ್ಲಿ ಸರ್ಕಾರ, ರಾಜಕಾರಣಿಗಳ ವಿರುದ್ಧ ಯಾವ ನಿಂದನಾತ್ಮಕ, ಮಾನಹಾನಿಕರ ಹಾಗೂ ಕೀಳು ಹೇಳಿಕೆಗಳಿಗೆ ಆಸ್ಪದವಿಲ್ಲ. ಇದು ಕೇವಲ ವಿದ್ಯಾರ್ಥಿ ಕೇಂದ್ರಿತ ಹೋರಾಟ. ರಾಜಕೀಯದಿಂದ ದೂರವುಳಿದಿರುವ ಇದು ಪಕ್ಕಾ ವಿದ್ಯಾರ್ಥಿ ಚಳವಳಿ. ಆ.10ರ ವಿಧಾನಸಭೆ ಚಲೋ ವೇಳೆ ಸರ್ಕಾರ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಿಸಿ ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದ ಹೊರತಾಗಿಯೂ ಯಾರೂ ಪೊಲೀಸರ ಮೇಲೆ ಕಲ್ಲೆಸೆದಿಲ್ಲ, ಹಲ್ಲೆ ಮಾಡಿಲ್ಲ. ಭದ್ರತಾ ಸಿಬ್ಬಂದಿಯನ್ನು ಕೀಳುಮಟ್ಟದ ಪದ ಬಳಸಿ ಹಂಗಿಸದೆ ಮಾದರಿಯಾಗಿದ್ದಾರೆ.
ವಿದ್ಯಾರ್ಥಿಗಳ ಬೇಡಿಕೆ ಏನು?
- ಅಕ್ರಮ, ಪೇಪರ್ ಸೋರಿಕೆ ಆರೋಪ ಎದುರಿಸುತ್ತಿರುವ ಎಲ್ಲಾ ಸರ್ಕಾರಿ ನೇಮಕಾತಿ ಪರೀಕ್ಷೆ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು.
- ಅಕ್ರಮಗಳ ಆರೋಪ ಕೇಳಿಬಂದಿರುವ 2019ರಿಂದೀಚೆಗೆ ನಡೆದಿರುವ ಎಲ್ಲಾ ಸರ್ಕಾರಿ ನೇಮಕಾತಿ ಪರೀಕ್ಷೆಗಳನ್ನು ರದ್ದು ಮಾಡಬೇಕು
- ಜಾರ್ಖಂಡ್ ಲೋಕಸೇವಾ ಆಯೋಗ(ಜೆಪಿಎಸ್ಸಿ) ಮತ್ತು ಜಾರ್ಖಂಡ್ ಸ್ಟಾಪ್ ಸೆಲೆಕ್ಷನ್ ಕಮಿಷನ್(ಜೆಎಸ್‌ಎಸ್‌ಸಿ) ಸಂಸ್ಥೆಗಳ ಕಾರ್ಯವಿಧಾನದಲ್ಲಿ ಸುಧಾರಣೆ ತರಬೇಕು, ಅಕ್ರಮಗಳು ನಡೆದಾಗ ಉತ್ತರದಾಯಿತ್ವ ನಿಗದಿಪಡಿಸಬೇಕು, ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು.
- ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾ ಸೇರಿ ಭ್ರಷ್ಟ ಅಧಿಕಾರಿಗಳು, ಭ್ರಷ್ಟ ವ್ಯವಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ವಿದ್ಯಾರ್ಥಿಗಳ ಬೇಡಿಕೆಗೆ ಸರ್ಕಾರ ಏನು ಮಾಡಿದೆ?
- 2023, 2025ರ ಬ್ಯಾಕ್‌ಲಾಗ್ ಹುದ್ದೆ ಪರೀಕ್ಷೆ, 14ನೇ ಜೆಪಿಎಸ್ಸಿ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆ ರದ್ದು ಮಾಡಲು ಒಪ್ಪಿಕೊಂಡಿದೆ.
- ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಸಿಐಡಿಯು ಈಗಾಗಲೇ ಜೆಪಿಎಸ್ಸಿ ಮಾಜಿ ಅಧ್ಯಕ್ಷ ಸೇರಿ 19 ಮಂದಿಯನ್ನು ಬಂಧಿಸಿದೆ.
- ವಿದ್ಯಾರ್ಥಿಗಳ ಜತೆಗೆ ಸಂಧಾನ ಮಾತುಕತೆಗೆ ನಾಲ್ಕು ಸಚಿವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದೆ. ಈಗಾಗಲೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಜತೆಗೆ 6 ಸುತ್ತಿನ ಮಾತುಕತೆ ನಡೆಸಿದೆ.
