ಕಲ್ಲಿನಿಂದ ಜಜ್ಜಿ ಯುವಕನ ಹತ್ಯೆ

| Published : May 20 2024, 01:37 AM IST

ಸಾರಾಂಶ

ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಶನಿವಾರ ತಡರಾತ್ರಿ ನಡೆದಿದೆ.

ವಿಜಯಪುರ: ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಎಪಿಎಂಸಿ‌ ಮಾರುಕಟ್ಟೆ ಬಳಿ ಶನಿವಾರ ತಡರಾತ್ರಿ ನಡೆದಿದೆ. ನಗರದ ಕಂಬಾರ ಓಣಿ ನಿವಾಸಿ ರೋಹಿತ್ ಪವಾರ(22) ಕೊಲೆಯಾದ ಯುವಕ. ರೋಹಿತ್‌ನನ್ನು ಕೊಲೆಗೈದು ಎಪಿಎಂಸಿ ಬಳಿಕ ಮುಳ್ಳುಕಂಟಿಯಲ್ಲಿ ಶವ ಬಿಸಾಕಲಾಗಿದೆ. ಕುಡಿದ ಮತ್ತಿನಲ್ಲಿ ಆತನ‌ ಪರಿಚಯಸ್ಥರೇ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ರೋಹಿತ್‌ನ ಸ್ನೇಹಿತ ಖಾಲಿದ್ ಇನಾಮದಾರ್ ಎಂಬಾತ ರೋಹಿತ್ ಪೋಷಕರಿಗೆ ಶನಿವಾರ ತಡರಾತ್ರಿ 2.21 ಕ್ಕೆ ಕರೆ ಮಾಡಿ ರೋಹಿತ್ ಕೊಲೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಕರೆ ಅನ್ವಯ ರೋಹಿತ್ ಮನೆಯವರು ಖಾಲೀದ್ ಮನೆಗೆ ಹೋಗಿ ಹುಡುಕಾಡಿದರು ಮಾಹಿತಿ ಸಿಕ್ಕಿಲ್ಲ. ನಂತರ ರೋಹಿತ್‌ಗಾಗಿ ಹುಡುಕಾಡಿದಾಗ ಆತನ ಶವ ಎಪಿಎಂಸಿ ಆವರಣದಲ್ಲಿ ಕಂಡು ಬಂದಿದೆ. ಮಗ ಕೊಲೆಯಾದ ಬಗ್ಗೆ ಕುಟುಂಬಸ್ಥರಿಂದ ಎಪಿಎಂಸಿ ಪೊಲೀಸರಿಗೆ ಮಾಹಿತಿ ಗೊತ್ತಾದ ತಕ್ಷಣ ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಪ್ರಾಥಮಿಕ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಆರೋಪಿಗಳ ಬಲೆಗೆ ಜಾಲ ಬೀಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.