ಮಾಲೀಕರ ಮನೆಗೆ ಕನ್ನ ಹಾಕಿದಾಕೆ ಬಂಧನ

| Published : May 04 2024, 01:31 AM IST / Updated: May 04 2024, 04:49 AM IST

arrest 3

ಸಾರಾಂಶ

ಕೆಲಸಕ್ಕಿದ್ದ ಮನೆಯಲ್ಲೇ ಮಾಲೀಕರ ಕಣ್ಣು ತಪ್ಪಿಸಿ ನಗದು, ಆಭರಣಕ್ಕೆ ಕನ್ನಹಾಕಿದ ಮಹಿಳೆಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿ, ತನಿಖೆ ಕೈಗೆತ್ತುಕೊಂಡಿದ್ದಾರೆ.

 ಬೆಂಗಳೂರು :  ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮಾಲೀಕರ ಕಣ್ಣು ತಪ್ಪಿಸಿ ನಗದು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಆಭರಣಗಳನ್ನು ಕಳ್ಳವು ಮಾಡಿದ್ದ ಮನೆಗೆಲಸದ ಮಹಿಳೆಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಮೂಲದ ಮಂಜುಳಾ (38) ಬಂಧಿತ ಆರೋಪಿ. ಈಕೆಯಿಂದ 363 ಗ್ರಾಂ ಚಿನ್ನ-ವಜ್ರದ ಆಭರಣಗಳು, 176 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ ಒಂದು ಲಕ್ಷ ರು. ನಗದು ಸೇರಿದಂತೆ ಒಟ್ಟು 35 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜೆ.ಪಿ.ನಗರ 1ನೇ ಹಂತದ ಅಪಾರ್ಟ್‌ಮೆಂಟ್‌ ನಿವಾಸಿ ರೇಖಾ ಕಿರಣ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?: ದೂರುದಾರೆ ರೇಖಾ ಕಿರಣ್‌ ದಂಪತಿ ಹಿರಿಯ ನಾಗರಿಕರಾಗಿದ್ದು, ಜೆ.ಪಿ.ನಗರ 1ನೇ ಹಂತದ ಅಪಾರ್ಟ್‌ಮೆಂಟ್‌ ಪ್ಲ್ಯಾಟ್‌ನಲ್ಲಿ ನೆಲೆಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದು, ವಿದೇಶದಲ್ಲಿ ನೆಲೆಸಿದ್ದಾರೆ. ಹೀಗಾಗಿ ಮನೆಯಲ್ಲಿ ರೇಖಾ ಕಿರಣ್‌ ದಂಪತಿ ಮಾತ್ರ ನೆಲೆಸಿದ್ದಾರೆ. ಇವರ ಮನೆಯಲ್ಲಿ ಆರೋಪಿ ಮಂಜುಳಾ ಕಳೆದ 8 ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದಳು.

ಕಳೆದ ಮಾ.27ರಂದು ರೇಖಾ ಕಿರಣ್‌ ಮೊಮ್ಮಗನ ನಾಮಕರಣವಿತ್ತು. ನಾಮಕರಣ ಕಾರ್ಯಕ್ರಮ ಮುಗಿದ ಬಳಿಕ ರೇಖಾ ಕಿರಣ್‌ ತಮ್ಮ ಚಿನ್ನ, ವಜ್ರದ ಆಭರಣ ಹಾಗೂ ನಗದು ಹಣವನ್ನು ಲೆಕ್ಕ ಮಾಡಿ ಗಾಡ್ರೇಜ್‌ ಬೀರುವಿನಲ್ಲಿ ಇರಿಸಿದ್ದರು. ಏ.4ರಂದು ಬೀರು ತೆರೆದು ಆಭರಣಗಳನ್ನು ಪರಿಶೀಲಿಸಿದಾಗ 4 ಚಿನ್ನದ ಬಳೆಗಳು ಸೇರಿದಂತೆ ಇತರೆ ಆಭರಣಗಳು ಹಾಗೂ 50 ಸಾವಿರ ರು. ನಗದು ಇಲ್ಲದಿರುವುದು ಕಂಡು ಬಂದಿದೆ.

ಮಾಲಿಕರ ಕಣ್ಣು ತಪ್ಪಿಸಿ ಕಳವು: ಮನೆಯಲ್ಲಿ ಮೊಮ್ಮಗನ ನಾಮಕರಣವಾದ ಮಾ.27ರಿಂದ ಏ.18ರ ನಡುವೆ ಮನೆಗೆಲಸದ ಮಂಜುಳಾ ಹೊರತುಪಡಿಸಿ ಬೇರೆ ಯಾರು ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಅನುಮಾನಗೊಂಡು ರೇಖಾ ಕಿರಣ್‌, ಮಂಜುಳಾಳನ್ನು ಪ್ರಶ್ನೆ ಮಾಡಿದಾಗ ನನಗೆ ಗೊತ್ತಿಲ್ಲ ಎಂದು ಆಕೆ ಹೇಳಿದ್ದಾಳೆ. ಆದರೂ ಮನೆಗೆ ಮಂಜುಳಾ ಹೊರತಾಗಿ ಬೇರೆ ಯಾರೂ ಬಾರದಿರುವ ಹಿನ್ನೆಲೆಯಲ್ಲಿ ಆಕೆಯೇ ಕಳವು ಮಾಡಿರುವ ಬಗ್ಗೆ ರೇಖಾ ಕಿರಣ್‌ಗೆ ಅನುಮಾನ ಬಲವಾಗಿದ್ದರಿಂದ ಜೆ.ಪಿ.ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಂಜುಳಾನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದು ತಾನೇ ಎದ್ದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದೊಂದೇ ಆಭರಣ ಕಳವು!: ಆರೋಪಿ ಮಂಜುಳಾ, ರೇಖಾ ಕಿರಣ್‌ ಮನೆಯಲ್ಲಿ ಬೀರುವಿನ ಕೀ ಇರಿಸುವ ಜಾಗ ನೋಡಿಕೊಂಡಿ ದ್ದಳು. ಕೆಲಸಕ್ಕೆ ಬಂದಾಗ ಬೀರು ತೆರೆದು ಒಂದೊಂದೇ ಆಭರಣಗಳನ್ನು ಕಳವು ಮಾಡಿದ್ದಳು. ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 2 ಬಳೆಗಳನ್ನು ಗಂಡತನ ಮುಖಾಂತರ ಪರಿಚಿತರಿಗೆ ಮಾರಾಟ ಮಾಡಿದ್ದಳು. ಉಳಿದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥ ಗಳನ್ನು ಚಾಮರಾಜನಗರದ ತವರು ಮನೆಯಲ್ಲಿ ಇರಿಸಿದ್ದಳು. ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಎಲ್ಲಾ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಗಳ್ಳನ ಬಂಧನ 

ಬೆಂಗಳೂರು: ಹಾಡಹಗಲೇ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹನುಮಂತನಗರದ ರಮೇಶ್‌(40) ಬಂಧಿತ. ಆರೋಪಿಯಿಂದ 2 ಲಕ್ಷ ರು. ಮೌಲ್ಯದ 35 ಗ್ರಾಂ ತೂಕದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಏ.19ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.

 ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದ ಅಪರಿಚಿತ ಏಕಾಏಕಿ ಆ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಂಡ್ಯ ಮೂಲದ ಆರೋಪಿ ರಮೇಶ್‌ ವೃತ್ತಿಯಲ್ಲಿ ಚಾಲಕನಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ. ಕುಡಿತದ ದಾಸನಾಗಿದ್ದ ಈತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಹೀಗಾಗಿ ಕಳೆದ ಮೂರ್ನಾಲ್ಕು ತಿಂಗಳಿಂದ ಕೆಲಸ ಇಲ್ಲದೆ ಮದ್ಯ ಸೇವನೆ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದ. ತನ್ನ ಚಟಕ್ಕೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದ.

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಘಟನಾ ಸ್ಥಳ ಹಾಗೂ ಸುತ್ತಮುತ್ತಲ ರಸ್ತೆಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.