ಸಣ್ಣ ಬೆರಗನ್ನು ಉಳಿಸಿ ಹೋಗುವ ಥ್ರಿಲ್ಲರ್‌ ಕಾಂಗರೂ

| Published : May 04 2024, 12:33 AM IST / Updated: May 04 2024, 05:25 AM IST

ಸಣ್ಣ ಬೆರಗನ್ನು ಉಳಿಸಿ ಹೋಗುವ ಥ್ರಿಲ್ಲರ್‌ ಕಾಂಗರೂ
Share this Article
  • FB
  • TW
  • Linkdin
  • Email

ಸಾರಾಂಶ

ಆದಿತ್ಯ ಮತ್ತು ರಂಜನಿ ರಾಘವನ್ ನಟನೆಯ ಥ್ರಿಲ್ಲರ್ ಕಾಂಗರೂ ಸಿನಿಮಾ ವಿಮರ್ಶೆ.

ಚಿತ್ರ: ಕಾಂಗರೂ

ನಿರ್ದೇಶನ: ಕಿಶೋರ್ ಮೇಗಲಮನೆ

ತಾರಾಗಣ: ಆದಿತ್ಯ, ರಂಜನಿ ರಾಘವನ್, ಅಶ್ವಿನ್ ಹಾಸನ್, ಕರಿಸುಬ್ಬು, ಶಿವಮಣಿ

ರೇಟಿಂಗ್: 3

ರಾಜೇಶ್ ಶೆಟ್ಟಿ

ಚಿತ್ರಕತೆಯಲ್ಲಿ ಸರ್ಪ್ರೈಸ್‌ ಇರುವ ಬಹುತೇಕ ಸಿನಿಮಾಗಳು ಪ್ರೇಕ್ಷಕರ ಗಮನವನ್ನು ಸೆಳೆಯಲು ಯಶಸ್ವಿಯಾಗುತ್ತವೆ. ಇದು ಅಂಥದ್ದೊಂದು ಸರ್ಪ್ರೈಸ್‌ ಹೊಂದಿರುವ, ಉತ್ತಮ ಉದ್ದೇಶದ, ಕುತೂಹಲಕರ ಥ್ರಿಲ್ಲರ್.

ಚಿಕ್ಕಮಗಳೂರು ಸ್ಟೇಷನ್‌ಗೆ ಪೊಲೀಸ್‌ ಅಧಿಕಾರಿಯಾಗಿ ಆದಿತ್ಯ ಬರುವಲ್ಲಿಗೆ ಸಿನಿಮಾ ಶುರುವಾಗುತ್ತದೆ. ಆ ಊರಿನ ಅತಿಥಿ ಗೃಹಕ್ಕೆ ಬಂದಿದ್ದ ಜೋಡಿಯೊಂದು ರಾತ್ರೋರಾತ್ರಿ ದೆವ್ವ ಇದೆ ಅಂತ ಹೆದರಿ ಓಡಿ ಹೋಗುವಲ್ಲಿಗೆ ಕತೆ ತಿರುವು ಪಡೆದುಕೊಳ್ಳುತ್ತದೆ. ಅಲ್ಲಿಂದ ಒಂದೊಂದೇ ರಹಸ್ಯಗಳು ತೆರೆದುಕೊಳ್ಳುತ್ತಾ ಕತೆ ವಿಸ್ತಾರವಾಗುತ್ತಾ ಸಾಗುತ್ತದೆ. ಕತೆ ಎತ್ತ ಸಾಗುತ್ತಿದೆ ಎಂಬ ಸುಳಿವು ಸಿಗದಷ್ಟು ಮೊದಲಾರ್ಧವನ್ನು ಚೆಂದ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ದ್ವಿತೀಯಾರ್ಧದಲ್ಲೂ ಅದೇ ವೇಗ, ಓಘವನ್ನು ಉಳಿಸಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಇದನ್ನೊಂದು ಉತ್ತಮ ಥ್ರಿಲ್ಲರ್ ಆಗಿ ಮಾಡಿದ್ದಾರೆ.

ಜೊತೆಗೆ ಪ್ರೇಕ್ಷಕನಲ್ಲಿ ಒಂದು ಪ್ರಶ್ನೆಯನ್ನೂ ಉ‍ಳಿಸಿ ಹೋಗುವುದು ಈ ಸಿನಿಮಾದ ಹೆಗ್ಗಳಿಕೆ. ಕೆಲವು ಮಿತಿಗಳಿದ್ದರೂ ಈ ಸಿನಿಮಾವನ್ನು ವಿಶಿಷ್ಟವನ್ನಾಗಿ ಮಾಡುವುದು ನಟನೆ, ಬರವಣಿಗೆ ಮತ್ತು ಸಂಗೀತ ನಿರ್ದೇಶನ.

ಕಿಶೋರ್ ಮೇಗಲಮನೆ ಅಚ್ಚುಕಟ್ಟಾಗಿ ಕತೆ ನಿರೂಪಿಸಿದ್ದಾರೆ. ರಂಜನಿ ರಾಘವನ್ ಮತ್ತು ಆದಿತ್ಯ ಪಾತ್ರಗಳಿಗೆ ಜೀವ ತುಂಬಿ ಚಿತ್ರವನ್ನು ಗಾಢವಾಗಿಸಿದ್ದಾರೆ. ಅದರಲ್ಲೂ ನೆನಪಿನ ಹಂಗಿನ ಪಾತ್ರವನ್ನು ರಂಜನಿ ರಾಘವನ್ ನಿಭಾಯಿಸಿದ ರೀತಿ ಶ್ಲಾಘನೀಯ. ಈ ಸಿನಿಮಾದಲ್ಲಿ ಮತ್ತೊಮ್ಮೆ ಸಂಗೀತ ನಿರ್ದೇಶಕರ ಜವಾಬ್ದಾರಿ ಹೊತ್ತಿರುವ ಸಾಧು ಕೋಕಿಲ ಹಿನ್ನೆಲೆ ಸಂಗೀತ ಮತ್ತು ಅಂತ್ಯದಲ್ಲಿ ಬರುವ ಒಂದು ಹಾಡಿನ ಮೂಲಕ ಚಿತ್ರದ ಸೊಗಸನ್ನು ಹೆಚ್ಚಿಸಿದ್ದಾರೆ.

ಇದು ಸಣ್ಣದೊಂದು ಬೆರಗನ್ನು ಉಳಿಸಿ ಹೋಗುವ ವಿಭಿನ್ನ ಸಿನಿಮಾ.