ರೋಹಿತ್ ವೇಮುಲ ಕೇಸು ಮರು ತನಿಖೆಗೆ ನಿರ್ಧಾರ

| Published : May 05 2024, 02:10 AM IST / Updated: May 05 2024, 05:03 AM IST

ಸಾರಾಂಶ

ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ಅವರು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಪ್ರಕರಣದ ಮರು ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

ಹೈದರಾಬಾದ್‌: 2016ರಲ್ಲಿ ದೇಶದಲ್ಲೇ ಸಂಚಲನ ಮೂಡಿಸಿದ್ದ ಇಲ್ಲಿನ ವಿದ್ಯಾರ್ಥಿ ರೋಹಿತ್ ವೇಮುಲ ನಿಗೂಢ ಸಾವಿನ ಪ್ರಕರಣದ ಕುರಿತು ತೆಲಂಗಾಣ ಪೊಲೀಸರು ತನಿಖಾ ಮುಕ್ತಾಯ ವರದಿ ನೀಡಿ, ‘ಆತ ದಲಿತನೇ ಅಲ್ಲ. ಆತನದ್ದು ಆತ್ಮಹತ್ಯೆ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

 ಇದರ ಬೆನ್ನಲೇ ಪ್ರಕರಣದ ತನಿಖೆಯಲ್ಲಿ ಲೋಪಗಳು ಆಗಿವೆ ಎಂಬ ಊಹೆಗಳು ಇದ್ದು ಮತ್ತೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರವಿ ಗುಪ್ತಾ ಹೇಳಿದ್ದಾರೆ.

ಶನಿವಾರ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ಅವರು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಪ್ರಕರಣದ ಮರು ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

ಕೋರ್ಟಿಗೆ ಕೋರುತ್ತೇವೆ- ಡಿಜಿಪಿ:

ಈ ನಡುವೆ, ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಗುಪ್ತಾ, ತನಿಖಾ ಮುಕ್ತಾಯ ವರದಿಯಲ್ಲಿ ಕೆಲವು ಅನುಮಾನಗಳಿವೆ. ಪ್ರಕರಣವನ್ನು ಪರಿಶೀಲಿಸಲು ನಾವು ನ್ಯಾಯಾಲಯವನ್ನು ಕೋರುತ್ತೇವೆ. ಮುಂದಿನ ತನಿಖೆಗೆ ಅನುಮತಿ ನೀಡುವಂತೆ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.

‘ಮೃತ ರೋಹಿತ್ ವೇಮುಲನ ತಾಯಿ ಹಾಗೂ ಇತರರಿಗೆ ಕೆಲವು ಅನುಮಾನಗಳು ವ್ಯಕ್ತವಾಗಿರುವುದರಿಂದ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ನಿರ್ಧರಿಸಲಾಗಿದೆ. ತನಿಖಾಧಿಕಾರಿಗಳು ಇತರ ಮಾಹಿತಿಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರದಿದ್ದರೆ ಪತ್ತೆ ಹಚ್ಚುತ್ತೇವೆ’ ಎಂದು ಅವರು ಹೇಳಿದರು.

ಶುಕ್ರವಾರ ತೆಲಂಗಾಣ ಪೊಲೀಸರು, ಪ್ರಕರಣದ ಮುಕ್ತಾಯದ ವರದಿಯಲ್ಲಿ, ‘ವೇಮುಲ ದಲಿತನಲ್ಲ. ಆತ ದಲಿತನೆಂದು ಬಿಂಬಿಸುವ ಸುಳ್ಳು ದಾಖಲೆ ಸೃಷ್ಟಿಸಲಾಗಿತ್ತು. ಹೀಗಾಗಿ ತನ್ನ ನಿಜವಾದ ಜಾತಿ ಪತ್ತೆಯಾಗುತ್ತದೆ ಎಂದು ಹೆದರಿ 2016ರಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು’ ಎಂದು ಹೇಳಿದ್ದರು ಹಾಗೂ ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದರು. ಆದರೆ ವರದಿಯ ಬಗ್ಗೆ ಕಿಡಿಕಾರಿದ್ದ ಆತನ ಕುಟುಂಬ ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿತ್ತು.