ವಾಯುಪಡೆ ಯೋಧರ ಮೇಲೆ ದಾಳಿ ನಡೆಸಿದ್ದು ಲಷ್ಕರ್‌ ಉಗ್ರ ಜುಟ್‌ ತಂಡ

| Published : May 06 2024, 12:31 AM IST / Updated: May 06 2024, 05:59 AM IST

ವಾಯುಪಡೆ ಯೋಧರ ಮೇಲೆ ದಾಳಿ ನಡೆಸಿದ್ದು ಲಷ್ಕರ್‌ ಉಗ್ರ ಜುಟ್‌ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಉಗ್ರರ ಪತ್ತೆಗೆ ಕಾಶ್ಮೀರದಲ್ಲಿ ಹುಡುಕಾಟ ಮುಂದುವರೆದಿದ್ದು, ಸೇನೆ, ವಾಯುಪಡೆ, ಪೊಲೀಸರ ಜಂಟಿ ಕಾರ್ಯಾಚರಣೆ ಕಾರ್ಯಪ್ರವೃತ್ತವಾಗಿದೆ.

ಜಮ್ಮು: ಶನಿವಾರ ವಾಯುಪಡೆಯ ವಾಹನ ಮೇಲೆ ದಾಳಿ ನಡೆಸಿ ಓರ್ವ ಯೋಧನ ಬಳಿ ಪಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಮೂಲದ ಲಷ್ಕರ್‌ ಎ ತೊಯ್ಬಾ ಉಗ್ರ ಸಾಜಿದ್‌ ಜುಟ್‌ನ ತಂಡದ ನಾಲ್ವರ ಕೈವಾಡದ ಶಂಕೆ ವ್ಯಕ್ತವಾಗಿದೆ. 

ಹೀಗಾಗಿ ಇವರಿಗೆ ವ್ಯಾಪಕ ಶೋಧ ಆರಂಭವಾಗಿದೆ,ಈ ಹಿಂದೆಯೂ ಕಾಶ್ಮೀರದ ಪೂಂಛ್‌ ಸೇರಿದಂತೆ ಕಣಿವೆ ರಾಜ್ಯದಲ್ಲಿ ನಡೆದ ಹಲವು ಉಗ್ರ ದಾಳಿಗೆ ಕಾರಣನಾಗಿದ್ದ ಜುಟ್‌ ತರಬೇತಿ ನೀಡಿರುವ ಉಗ್ರರೇ ಶನಿವಾರದ ದಾಳಿಯನ್ನೂ ಸಂಘಟಿಸಿದ್ದಾರೆ ಎನ್ನಲಾಗಿದೆ. 

ದಾಳಿ ನಡೆದ ಪ್ರದೇಶದ ಸುತ್ತಮುತ್ತಲೂ ಜುಟ್‌ನಿಂದ ತರಬೇತಿ ಪಡೆದ ಕನಿಷ್ಠ 17 ಲಷ್ಕರ್‌ ಉಗ್ರರ ಇರುವ ಶಂಕೆಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.ಈ ನಡುವೆ ದಾಳಿಯ ಬಳಿಕ ಅರಣ್ಯ ಪ್ರದೇಶದೊಳಗೆ ಪರಾರಿಯಾಗಿರುವ ಉಗ್ರರ ಪತ್ತೆಗಾಗಿ ಸೇನಾಪಡೆ, ವಾಯುಪಡೆ ಮತ್ತು ಸ್ಥಳೀಯ ಪೊಲೀಸರು ಶಾಹ್‌ಸಿತರ್‌, ಗುರ್ಸಾಯ್‌, ಸನಾಯ್‌, ಶೀನ್‌ದರ ಬೆಟ್ಟ ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಜೊತೆಗೆ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ದಾಳಿಗೆ ಉಗ್ರರು ಎಕೆ ಅಸಾಲ್ಟ್‌ ರೈಫಲ್‌, ದಾಳಿಯ ತೀವ್ರತೆ ಹೆಚ್ಚಿಸಲು ಅಮೆರಿಕ ನಿರ್ಮಿತ ಎಂ4 ಕಾರ್ಬೈನ್‌ ಮತ್ತು ಸ್ಟೀಲ್‌ ಗುಂಡು ಬಳಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ಶನಿವಾರ ಸಂಜೆ ಪೂಂಛ್‌ ಜಿಲ್ಲೆಯ ಶಾಹ್‌ಸಿತರ್‌ ಬಳಿಯ ಸುರಾನ್‌ಕೋಟ್‌ ಎಂಬಲ್ಲಿ ಭಾರತೀಯ ವಾಯುಪಡೆಗೆ ಸೇರಿದ ವಾಹನಗಳ ಮೇಲೆ ನಡೆದ ದಾಳಿಯಲ್ಲಿ 5 ಯೋಧರು ಗಾಯಗೊಂಡಿದ್ದರು. 

ಈ ಪೈಕಿ ವಿಕ್ಕಿ ಪಹಾಡೆ ಎಂಬ ಯೋಧ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮನಾಗಿದ್ದು, ಇನ್ನು ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಇನ್ನು ಗಂಭೀರವಾಗಿದೆ ಎನ್ನಲಾಗಿದೆ.ದಾಳಿಗೊಳಗಾದ ಪೂಂಛ್‌ ಜಿಲ್ಲೆಯು ಮೇ 25ರಂದು ಲೋಕಸಭಾ ಚುನಾವಣೆ ಎದುರಿಸಲಿರುವ ಅನಂತ್‌ನಾತ್‌- ರಜೌರಿ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅದಕ್ಕೂ ಮುನ್ನ ನಡೆದ ಈ ದಾಳಿ ಚುನಾವಣೆ ವೇಳೆ ಮತ್ತಷ್ಟು ದಾಳಿಯ ಆತಂಕ ಸೃಷ್ಟಿಸಿದೆ.