ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ 18,06,277 ಮತದಾರರು

| Published : May 07 2024, 01:05 AM IST

ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ 18,06,277 ಮತದಾರರು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ 895432 ಪುರುಷರು, 9,10,751 ಮಹಿಳೆಯರು ಹಾಗೂ ಇತರೆ 94 ಸೇರಿ ಒಟ್ಟು 18,06,277 ಮತದಾರರಿದ್ದು, 1946 ಮತಗಟ್ಟೆ ಸ್ಥಾಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ 895432 ಪುರುಷರು, 9,10,751 ಮಹಿಳೆಯರು ಹಾಗೂ ಇತರೆ 94 ಸೇರಿ ಒಟ್ಟು 18,06,277 ಮತದಾರರಿದ್ದು, 1946 ಮತಗಟ್ಟೆ ಸ್ಥಾಪಿಸಲಾಗಿದೆ. ಸುಗಮ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.ಜಿಲ್ಲಾಧಿಕಾರಿ, ಜಿಪಂ ಸಿಇಒ ವಿಜಿಟ್‌:

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೋಮವಾರ ಜಿಲ್ಲೆಯ ಬಾದಾಮಿಯ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ ಮತ್ತು ಹುನಗುಂದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಸ್ಥೆಯಲ್ಲಿ ಸ್ಥಾಪಿಸಲಾದ ಮಸ್ಟರಿಂಗ್‌ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಸ್ಟರಿಂಗ್ ಕಾರ್ಯದ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು ಸಿದ್ಧತೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ಚುನಾವಣೆ ಸಾಮಗ್ರಿ, ಸಿದ್ಧತಾ ಕೊಠಡಿಗಳಿಗೆ ತೆರಳಿ ಚುನಾವಣೆ ಆಯೋಗದ ಮಾರ್ಗಸೂಚಿ ಪಾಲಿಸಿ ಕರ್ತವ್ಯ ನಿರ್ವಹಿಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನರಗುಂದ 220 ಮತಗಟ್ಟೆ ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆ ಸ್ಥಾಪಿಸಲಾಗಿದೆ. ಮುಧೋಳ ಮೀಸಲು ಕ್ಷೇತ್ರದಲ್ಲಿ 212, ತೇರದಾಳದಲ್ಲಿ 236, ಜಮಖಂಡಿ 232, ಬೀಳಗಿ 260, ಬಾದಾಮಿ 260, ಬಾಗಲಕೋಟೆ 267 ಹಾಗೂ ಹುನಗುಂದ ಕ್ಷೇತ್ರದಲ್ಲಿ 255 ಮತಗಟ್ಟೆ ಸ್ಥಾಪಿಸಲಾಗಿದೆ. ಕಾಯ್ದಿರಿಸಿದ ಸಿಬ್ಬಂದಿಯೂ ಒಳಗೊಂಡಂತೆ ಒಟ್ಟು 9274 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆ ಸಿಬ್ಬಂದಿಗಳು ಆಯಾ ಮತಗಟ್ಟೆಗಳಿಗೆ ತೆರಳಲು 219 ಬಸ್, 60 ಮಿನಿ ಬಸ್‌, 92 ಕ್ರೂಸರ್, 12 ಟೆಂಪೋ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಹೊತ್ತಿಗೆ ಮತಗಟ್ಟೆಗಳಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.

ಲೋಕಸಭೆ ಮತಕ್ಷೇತ್ರದಲ್ಲಿ ಉಳಿದ ಮಸ್ಟರಿಂಗ್‌ ಕೇಂದ್ರಗಳಾದ ಮುಧೋಳ ಆರ್.ಎಂ.ಜಿ ಪಿಯು ಕಾಲೇಜು, ಬನಹಟ್ಟಿ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ ಹಾಗೂ ವಾಣಿಜ್ಯ ಕಾಲೇಜು, ಜಮಖಂಡಿ ಸರ್ಕಾರಿ ಪಿ.ಬಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಬೀಳಗಿ ಸಿದ್ದೇಶ್ವರ ಕಾಂಪೋಜಿಟ್ ಪಿಯು ಕಾಲೇಜು, ನವನಗರದ ಸರ್ಕಾರಿ ಪ್ರಥಮ ದರ್ಜೆಕಾಲೇಜು, ಹಾಗೂ ಗದಗ ಜಿಲ್ಲೆಯ ನರಗುಂದದ ಸರ್ಕಾರಿ ಎಂಜಿನೀಯರಿಂಗ್ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಸಲಾಯಿತು. ಇದೇ ವೇಳೆ ಮತಗಟ್ಟೆ ಸಿಬ್ಬಂದಿಗೆ ನೀಡುತ್ತಿರುವ ಊಟದ ವಿಭಾಗಕ್ಕೆ ತೆರಳಿ ಪರಿಶೀಲಿಸಿದರು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪಿ.ಬಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಜಿಪಂ ಸಿಇಒ ಶಶೀಧರ ಕುರೇರ್‌ ಮತದಾನಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳ ವಿತರಣೆ ಕಾರ್ಯ ವೀಕ್ಷಣೆ ಮಾಡಿದರು. ವೈದ್ಯಕೀಯ ತಮಗೆ ನೀಡಲಾದ ಸಾಮಗ್ರಿಗಳನ್ನು ಚೆಕ್ಲಿಸ್ಟ್ ಪ್ರಕಾರ ಪರೀಕ್ಷಿಸಿಕೊಂಡು ಮತಗಟ್ಟೆಗೆ ತೆರಳಲು ತಿಳಿಸಿದರು. ವೈದ್ಯಕೀಯ ಸೌಲಭ್ಯ ಒದಗಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಇದೇ ಮಸ್ಟರಿಂಗ್‌ ಕೇಂದ್ರಕ್ಕೆ ಪೊಲೀಸ್ ವೀಕ್ಷಕರಾದ ಎಂ.ಆರ್ಶಿ ಅವರ ಜೊತೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಸ್ಟರಿಂಗ್ ಕಾರ್ಯ ಪರಿಶೀಲಿಸಿದರು.

ಪ್ರಮುಖ ಅಂಶಗಳು:

3500 ಪೊಲೀಸ್ ಸಿಬ್ಬಂದಿಗಳ ನಿಯೋಜನೆ : ಮತದಾನ ಸುಸೂತ್ರವಾಗಿ ನಡೆಯಲು ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. 21 ಜನ ಪೊಲೀಸ್ ಇನ್ಸಪೆಕ್ಟರ್, 1519 ಪೊಲೀಸ್, 418 ಹೋಮಗಾರ್ಡ್‌, 5 ಕೆ.ಎಸ್.ಆರ್.ಪಿ, 3 ಸಶಸ್ತ್ರ ಮೀಸಲು ಪಡೆಯ 85 ಸಿಬ್ಬಂದಿ ಸೇರಿ ಒಟ್ಟು 3500 ಸಿಬ್ಬಂದಿ ನೇಮಕ ಮಾಡಲಾಗಿದೆ.

---ಕೋಟ್‌------

ಮತಕ್ಷೇತ್ರದಲ್ಲಿ 40 ಮಹಿಳಾ ಸಖಿ ಮತಗಟ್ಟೆ, ತಲಾ 5ರಂತೆ ವಿಶೇಷ ಚೇತನರ, ಯುವಜನ ನಿರ್ವಹಣೆಯ, ಥೀಮ್ ಆಧಾರಿತ ಹಾಗೂ ಸಾಂಪ್ರದಾಯಿಕ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ. ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಮತಗಟ್ಟೆಗೆ ತೆರಳಲು ಗ್ರಾಪಂನಲ್ಲಿ ವಾಹನ ವ್ಯವಸ್ಥೆ ಮಾಡಲಾಗಿದೆ. ಮತದಾರರಿಗೆ ಮತಗಟ್ಟೆಯಲ್ಲಿ ಮಾಹಿತಿ ನೀಡಲು 1726 ಎನ್.ಎಸ್.ಎಸ್ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ.

- ಶಶಿಧರ ಕುರೇರ ಜಿಪಂ ಸಿಇಒಪೋಟೊ 6 ಬಿಕೆಟಿ 3, ಬಾಗಲಕೋಟೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಮತ್ತು ಸರ್ಕಾರಿ ಪಿ.ಬಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಜಿಪಂ ಸಿಇಒ ಶಶೀಧರ ಕುರೇರ ಮತದಾನಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳ ವಿತರಣೆ ಕಾರ್ಯ ವೀಕ್ಷಿಸಿದರು.