ಸೋಲುವ ಭಯದಲ್ಲಿ ಜಿಗಜಿಣಗಿ ಸುಳ್ಳು ಆರೋಪ

| Published : May 05 2024, 02:06 AM IST

ಸೋಲುವ ಭಯದಲ್ಲಿ ಜಿಗಜಿಣಗಿ ಸುಳ್ಳು ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಕಳೆದ 30 ವರ್ಷದ ರಾಜಕೀಯ ಜೀವನದಲ್ಲಿ ನಾನು ಎಂದೂ ಬಿಜೆಪಿ ಸದಸ್ಯರನ್ನು ವ್ಯಕ್ತಿಗತವಾಗಿ ಟೀಕೆ ಮಾಡಿಲ್ಲ. ಆದರೆ ಇಂದು ಸೋಲಿನ ಭೀತಿಯಿಂದ ಕನಿಷ್ಠಮಟ್ಟಕ್ಕೆ ಇಳಿದಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನನ್ನ ಬಗ್ಗೆ ವೈಯಕ್ತಿಕವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹತಾಶರಾಗಿ ಮಾತನಾಡುತ್ತಿದ್ದು, ಅವರಿಗೆ ತಾನು ಸೋಲುತ್ತೇನೆ ಎಂಬ ಭಯ ಕಾಡುತ್ತಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರಕಳೆದ 30 ವರ್ಷದ ರಾಜಕೀಯ ಜೀವನದಲ್ಲಿ ನಾನು ಎಂದೂ ಬಿಜೆಪಿ ಸದಸ್ಯರನ್ನು ವ್ಯಕ್ತಿಗತವಾಗಿ ಟೀಕೆ ಮಾಡಿಲ್ಲ. ಆದರೆ ಇಂದು ಸೋಲಿನ ಭೀತಿಯಿಂದ ಕನಿಷ್ಠಮಟ್ಟಕ್ಕೆ ಇಳಿದಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನನ್ನ ಬಗ್ಗೆ ವೈಯಕ್ತಿಕವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹತಾಶರಾಗಿ ಮಾತನಾಡುತ್ತಿದ್ದು, ಅವರಿಗೆ ತಾನು ಸೋಲುತ್ತೇನೆ ಎಂಬ ಭಯ ಕಾಡುತ್ತಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಗಜಿಣಗಿಯವರಿಗೆ ಶಾಸಕರಾಗಿ, ಸಂಸದರಾಗಿ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಮಂತ್ರಿಯಾಗಿರುವ ಅನುಭವ ಇದೆ. ಅಂತಹವರು ಇದೀಗ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಯಾರಿಗಾದರೂ ಏಕವಚನದಲ್ಲಿ ಮಾತನಾಡಿದ್ದರೆ ಅಥವಾ ಜಾತಿಯ ಹೆಸರಿಟ್ಟುಕೊಂಡು ಮೇಲಿನ ಜಾತಿಯವರಿಗೆ ತೊಂದರೆ ಕೊಟ್ಟಿದ್ದನ್ನು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಸಾಬೀತು ಮಾಡಿದರೆ ಈ ಕ್ಷಣದಿಂದಲೇ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ. ಇಲ್ಲವಾದರೆ ಜಿಗಜಿಣಗಿ ಅವರು ತಕ್ಷಣ ಈ ಜಿಲ್ಲೆಯ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ನನ್ನ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ಮಾಡಲು ಅಸ್ತ್ರವಿಲ್ಲ. ಹಾಗಾಗಿ ಇದೀಗ ರಾಜೂ ಆಲಗೂರ ಲೋಕಸಭಾ ಸದಸ್ಯನಾದರೆ ಡಿಎಸ್‌ಎಸ್‌ನಿಂದ ಲಿಂಗಾಯತರಿಗೆ ಸಮಸ್ಯೆ ಆಗುತ್ತದೆ ಎಂದು ಜಿಗಜಿಣಗಿ ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ನಾನು ಬಲ ಸಮುದಾಯದವನೇ ಆಗಿದ್ದರೂ ಇಲ್ಲಿಯವರೆಗೆ ನಮ್ಮ ಚಲವಾದಿ ಜಾತಿಯ ಸಮಾವೇಶಕ್ಕೆ ಹೋಗಿಲ್ಲ. ನಾನು ಬಿಂ.ಎಂ.ಪಾಟೀಲರ ಮಾರ್ಗದರ್ಶನದಲ್ಲಿ ಬೆಳೆದು ಬಂದವನು ಎಂದರು.

ಮುಖಂಡ ಡಾ.ಬಾಬುರಾಜೇಂದ್ರ ನಾಯಕ ಮಾತನಾಡಿ, ಬಿಜೆಪಿ ಅಭ್ಯರ್ಥಿ ಶೂನ್ಯ ಸಾಧಕರು, ಸೋಲುವ ಭೀತಿಯಲ್ಲಿದ್ದಾರೆ. ಇವರು ರಾಜಕಾರಣ ಶುರು ಮಾಡಿದ್ದೇ ಎಲ್ಲರ ಮಧ್ಯೆ ಜಗಳ ಹಚ್ಚುತ್ತ. ಗಾಣಿಗರು ಪ್ರಬಲವಾಗಿರುವ ಕಡೆ ಪಂಚಮಸಾಲಿ, ಪಂಚಮಸಾಲಿ ಇದ್ದಲ್ಲಿ ಗಾಣಿಗ ಸಮಾಜಕ್ಕೆ ಟಿಕೆಟ್ ಕೊಟ್ಟು ಜಾತಿಗಳ ಮಧ್ಯೆ ಜಗಳ ಹಚ್ಚುವುದು ಇವರ ಕೆಲಸ. ಸಮಾಜದ ಸಾಮರಸ್ಯವನ್ನು ಕೆಡಿಸುವ ಕೆಲಸ ಅವರು ಮಾಡದಂತೆ ಭಗವಂತ ಅವರಿಗೆ ಬುದ್ಧಿ ಕೊಡಲಿ ಎಂದರು.

ಮುಖಂಡ ಎಂ.ಆರ್‌.ಪಾಟೀಲ್ ಮಾತನಾಡಿ, ರಮೇಶ ಜಿಗಜಿಣಗಿ ಅವರು, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಬಗ್ಗೆ ಅಸಡ್ಡೆ ಮಾತನಾಡಿದ್ದಾರೆ. ಈ ರೀತಿ ಮಾತನಾಡುವುದು ಅವರ ರಾಜಕೀಯ ಜೀವನಕ್ಕೆ ಚ್ಯುತಿ ತರಲಿದೆ. ಕ್ಷುಲ್ಲಕ ಹೇಳಿಕೆ ನೀಡಿ ಲಿಂಗಾಯತರ ಮತ ಪಡೆಯಬಹುದು ಎಂದು ಯೋಚಿಸಿದ್ದರೆ ಅದು ಆಗೋದಿಲ್ಲ. ನಾವೆಲ್ಲರೂ ಲಿಂಗಾಯತ ಸಮುದಾಯದವರು ಆಲಗೂರಗೆ ಬೆಂಬಲ‌ ಕೊಡುತ್ತಿದ್ದೇವೆ. ಪಂಚಮಸಾಲಿ ಸಮಾಜ ನನ್ನ ಜೊತೆ ಇದೆ ಎಂದು ಜಿಗಜಿಣಗಿ ಹೇಳಿದ್ದಕ್ಕೆ ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿಗರ ಸಭೆಯನ್ನು ನಾವು ನಡೆಸುತ್ತಿರುವುದಾಗಿ ತಿಳಿಸಿದರು.

ಮುಖಂಡ ಅರವಿಂದ ಮಸಳಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುಣ ಲೋಣಿ ಮಾತನಾಡಿ, ರಾಜು ಆಲಗೂರ ಬಗ್ಗೆ ಜಿಗಜಿಣಗಿ ಹೇಳಿದ ಹೇಳಿಕೆ ಖಂಡನೀಯವಾಗಿದ್ದು, ಸತ್ಯಕ್ಕೆ ದೂರವಾಗಿದೆ. ನಿವೃತ್ತಿ ಅಂಚಿನಲ್ಲಿರುವ ಅವರು ವಿಶ್ರಾಂತಿಗೆ ಹೋಗಲಿದ್ದಾರೆ. ನಿವೃತ್ತಿ ಅಂಚಿನಲ್ಲಿ ಈ ರೀತಿ ಅಪಪ್ರಚಾರ ಮಾಡುವುದು ಖಂಡನೀಯ. ಈಗಲಾದರೂ ಸತ್ಯವನ್ನು ಹೇಳಿ, ಸಮಾಜಗಳನ್ನು ಕೂಡಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಗಂಗಾಧರ ಸಂಬಣ್ಣಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರುಕ್ಸಾನಾ ಉಸ್ತಾದ್, ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಹೊನ್ನಮಲ ಸಾರವಾಡ, ಕಲ್ಲನಗೌಡ ಪಾಟೀಲ, ಚಾಂದಸಾಬ ಗಡಗಲಾವ, ವಸಂತ ಹೊನಮೊಡೆ, ಬಸವರಾಜ ಕಳಸಗೊಂಡ ಉಪಸ್ಥಿತರಿದ್ದರು.

--------

ಕೋಟ್‌

ನನ್ನಿಂದ ಲಿಂಗಾಯತರಿಗೆ ಸಮಸ್ಯೆ ಆಗುತ್ತದೆ ಎಂದು ಬಿಂಬಿಸುತ್ತಿರುವ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಸಿಎಂ ಆಗುವ ಅವಕಾಶ ತಪ್ಪಿಸಿದವರೇ ಜಿಗಜಿಣಗಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಸವನಬಾಗೇವಾಡಿಯಲ್ಲಿ ಅಪ್ಪುಗೌಡಗೆ, ಇಂಡಿಯಲ್ಲಿ ದಯಾಸಾಗರ ಪಾಟೀಲ್‌ಗೆ ಟಿಕೆಟ್ ತಪ್ಪಿಸಿದರು, ಮಾಜಿ ಶಾಸಕ ರವಿಕಾಂತ ಪಾಟೀಲ ಜಿಲ್ಲೆಗೆ ಬರದಂತೆ ನೋಡಿದರು. ಸತತವಾಗಿ ಅಧಿಕಾರದಲ್ಲೇ ಇದ್ದರೂ ಜಿಗಜಿಣಗಿ ಅವರು ದಲಿತ ಸಮುದಾಯಕ್ಕೂ ಏನು ಮಾಡಲಿಲ್ಲ. ಕ್ಷೇತ್ರ ಹಾಗೂ ಸಮುದಾಯಕ್ಕೆ ಕೊಡುಗೆ ಶೂನ್ಯ.

- ರಾಜು ಆಲಗೂರ, ಕಾಂಗ್ರೆಸ್‌ ಅಭ್ಯರ್ಥಿ