ಶ್ರೀಭೂವರಾಹಸ್ವಾಮಿಗೆ ಅಭಿಷೇಕ, ಅಡ್ಡಪಲ್ಲಕ್ಕಿ ಉತ್ಸವ, ಶ್ರೀನಿವಾಸ ಕಲ್ಯಾಣ ಮಹೋತ್ಸವ

| Published : May 07 2024, 01:07 AM IST

ಶ್ರೀಭೂವರಾಹಸ್ವಾಮಿಗೆ ಅಭಿಷೇಕ, ಅಡ್ಡಪಲ್ಲಕ್ಕಿ ಉತ್ಸವ, ಶ್ರೀನಿವಾಸ ಕಲ್ಯಾಣ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಭೂ ವರಾಹನಾಥನ ಕೃಷ್ಣ ಶಿಲಾ ವಿಗ್ರಹಕ್ಕೆ ಒಂದು ಸಾವಿರ ಲೀಟರ್ ಹಾಲು, 500 ಲೀಟರ್ ಎಳನೀರು, 500 ಲೀಟರ್ ಕಬ್ಬಿನಹಾಲು, ಪವಿತ್ರ ಗಂಗಾಜಲ, ಹಸುವಿನತುಪ್ಪ, ಜೇನುತುಪ್ಪ, ಅರಿಶಿನ, ಶ್ರೀಗಂಧ, ಸುಗಂಧ ದ್ರವ್ಯಗಳಿಂದ ಅಭಿಷೇಕ ನಡೆಸಲಾಯಿತು. ನಂತರ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ತುಳಸಿ, ಪವಿತ್ರ ಪತ್ರೆಗಳು ಸೇರಿದಂತೆ ಧವನ, ಕಮಲ ಸೇರಿದಂತೆ 58 ಬಗೆಯ ವಿಶೇಷ ಹೂವುಗಳಿಂದ ಪುಷ್ಪಾಭಿಷೇಕ ಮಾಡಿ ಲೋಕ ಕಲ್ಯಾಣರ್ಥವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವರಾಹ ಜಯಂತಿ ಅಂಗವಾಗಿ ತಾಲೂಕಿನ ಕಲ್ಲಹಳ್ಳಿಯ ಶ್ರೀಭೂವರಾಹಸ್ವಾಮಿ ಶಿಲಾ ಮೂರ್ತಿಗೆ ವಿಶೇಷ ಅಭಿಷೇಕ, ಅಡ್ಡಪಲ್ಲಕಿ ಉತ್ಸವ, ಶ್ರೀನಿವಾಸ ಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಸಾವಿರಾರು ಭಕ್ತಾದಿಗಳು ಭಾಗಿಯಾಗಿದ್ದ ವಿಶೇಷ ಪೂಜಾ ಕಾರ್ಯಗಳಲ್ಲಿ ಭೂ ವರಾಹನಾಥನ ಕೃಷ್ಣ ಶಿಲಾ ವಿಗ್ರಹಕ್ಕೆ ಒಂದು ಸಾವಿರ ಲೀಟರ್ ಹಾಲು, 500 ಲೀಟರ್ ಎಳನೀರು, 500 ಲೀಟರ್ ಕಬ್ಬಿನಹಾಲು, ಪವಿತ್ರ ಗಂಗಾಜಲ, ಹಸುವಿನತುಪ್ಪ, ಜೇನುತುಪ್ಪ, ಅರಿಶಿನ, ಶ್ರೀಗಂಧ, ಸುಗಂಧ ದ್ರವ್ಯಗಳಿಂದ ಅಭಿಷೇಕ ನಡೆಸಲಾಯಿತು.

ನಂತರ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ತುಳಸಿ, ಪವಿತ್ರ ಪತ್ರೆಗಳು ಸೇರಿದಂತೆ ಧವನ, ಕಮಲ ಸೇರಿದಂತೆ 58 ಬಗೆಯ ವಿಶೇಷ ಹೂವುಗಳಿಂದ ಪುಷ್ಪಾಭಿಷೇಕ ಮಾಡಿ ಲೋಕ ಕಲ್ಯಾಣರ್ಥವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ದುಷ್ಟನಾದ ರಾಕ್ಷಸ ಹಿರಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ಸಂರಕ್ಷಣೆ ಮಾಡಲು ಭಗವಂತನಾದ ಶ್ರೀಹರಿಯು ವರಾಹ ರೂಪವನ್ನು ತಾಳಿದ ನಕ್ಷತ್ರವೇ ರೇವತಿ ನಕ್ಷತ್ರವಾಗಿದೆ. ಇಂದು ವರಹಸ್ವಾಮಿ ಅವತಾರ ಧರಿಸಿದ ದಿನವಾದ್ದರಿಂದ ಭೂವರಹನಾಥ ಸ್ವಾಮಿಯ 17ಅಡಿ ಎತ್ತರದ ಶಿಲಾ ಮೂರ್ತಿಗೆ ಅಭಿಷೇಕ ಮಾಡಲಾಯಿತು.

ಭೂ ವರಾಹನಾಥನ ಉತ್ಸವ ಮೂರ್ತಿಯನ್ನು ಭಕ್ತರು ಹೊತ್ತು ದೇವಾಲಯದ ಸುತ್ತ ಮೆರವಣಿಗೆ ಮಾಡಿ ಸಂಭ್ರಮಿಸಿದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹೆಚ್ಚಿನ ಭಕ್ತಾದಿಗಳು ಭೂವರಹನಾಥ ಕ್ಷೇತ್ರದಲ್ಲಿ ದೇಶದಲ್ಲಿಯೇ ಅಪರೂಪದ್ದಾಗಿರುವ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ 17 ಅಡಿ ಎತ್ತರದ ಸ್ವಾಮಿ ಸುಂದರವಾದ ಶಿಲಾಮೂರ್ತಿಯನ್ನು ಸರತಿ ಸಾಲಿನಲ್ಲಿ ದರ್ಶನ ಮಾಡಿ ವಿಶೇಷ ಪುಜೆಗಳನ್ನು ಸಲ್ಲಿಸಿದರು.

ನಂತರ ವರಾಹ ಜಯಂತಿ ಅಂಗವಾಗಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಭಕ್ತಾದಿಗಳಿಗೆ ವಿಶೇಷ ಪ್ರವಚನ ನೀಡಿದ ದೇವಾಲಯ ವ್ಯವಸ್ಥಾಪನಾ ಸಮಿತಿ ಮ್ಯಾನೇಜಯಿಂಗ್ ಟ್ರಸ್ಟಿ ಡಾ.ಶ್ರೀನಿವಾಸ ರಾಘವನ್ ಭೂವರಹನಾಥ ದೇವಾಲಯವನ್ನು ತಿರುಮಲ ತಿರುಪತಿಯ ಮಾದರಿಯಲ್ಲಿ ಸಂಪೂರ್ಣವಾಗಿ ಕಲ್ಲಿನಿಂದಲೇ ಹೊಯ್ಸಳ ವಾಸ್ತು ಶಿಲ್ಪದ ಮಾದರಿಯಲ್ಲಿ ವಿಶೇಷವಾಗಿ ಸಿಎನ್ ಸಿ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸುವ ಕಾರ್ಯ ನಡೆಯುತ್ತಿದೆ.

ಮುಂದಿನ ಮೂರು ವರ್ಷಗಳಲ್ಲಿ ದೇವಾಲಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. 150 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯದ ಕಾಮಗಾರಿಗೆ ಭಕ್ತಾದಿಗಳು ತನು ಮನ ಧನ ಸಹಾಯ ಮಾಡುವ ಮೂಲಕ ಕೈಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.