ಸಣ್ಣ ಮಳೆಗೂ ಕೃತಕ ಪ್ರವಾಹ: ಉಡುಪಿ ಹೈರಾಣು

| Published : May 06 2024, 12:31 AM IST

ಸಾರಾಂಶ

ವ್ಯವಸ್ಥಿತಿ ಯೋಜನೆ ಇಲ್ಲದೆ ನಿರ್ಮಾಣವಾಗಿರುವ ನಗರ, ನಿಯಮಬಾಹಿರವಾಗಿ ರಾಜರೋಷವಾಗಿ ತಲೆ ಎತ್ತಿರುವ ಕಟ್ಟಡಗಳು, ಅವೈಜ್ಞಾನಿಕ ರಸ್ತೆಗಳ ರಚನೆ ಈ ಕೃತಕ ನೆರೆಗೆ ಕಾರಣವಾಗುತ್ತಿದೆ.

ಸುಭಾಶ್ಚಂದ್ರ ವಾಗ್ಳೆ

ಕನ್ನಡಪ್ರಭ ವಾರ್ತೆ ಉಡುಪಿ

ಮಳೆಗಾಲ ಆರಂಭವಾದರೆ ಉಡುಪಿ ನಗರದ ಜನತೆ ಕಡಿಯುವ ನೀರಿನ ಸಮಸ್ಯೆಯಿಂದ ಮುಕ್ತರಾಗುತ್ತಾರೆ, ಆದರೆ ಮಳೆಗಾಲದಲ್ಲಿ ಸಣ್ಣ ಮಳೆಗೂ ಉಂಟಾಗುವ ಕೃತಕ ಪ್ರವಾಹದ ಬಗ್ಗೆ ಆತಂಕಿತರಾಗುತ್ತಾರೆ.

ಕಳೆದ ಅನೇಕ ವರ್ಷಗಳಿಂದ ಉಡುಪಿ ನಗರದ ಸುತ್ತಮತ್ತಲಿನ ತಗ್ಗು ಪ್ರದೇಶಗಳು ಮಳೆಗಾಲದಲ್ಲಿ ಒಂದೆರಡು ಬಾರಿಯಾದರೂ ಕೃತಕ ನೆರೆಯ ಸಂಕಷ್ಟಕ್ಕೊಳಗಾಗುತ್ತವೆ. ಕೆಲವೊಮ್ಮೆ ನಗರದ ಮುಖ್ಯ ರಸ್ತೆಗಳೂ ಕೊಳಚೆ ನೀರಿನ ಕಾಲುವೆಗಳಂತಾಗುತ್ತವೆ.

ಉಡುಪಿ ಜಿಲ್ಲೆ ಪ್ರತ್ಯೇಕವಾಗಿ 25 ವರ್ಷ ಕಳೆದರೂ, ವಿಶ್ವಪ್ರಸಿದ್ಧ ಶ್ರೀ ಕೃಷ್ಣಮಠ ಇರುವ, ಜಿಲ್ಲೆಯ ಹೃದಯ ಭಾಗ ಉಡುಪಿ ನಗರದಲ್ಲಿಯೇ ಒಳಚರಂಡಿ ವ್ಯವಸ್ಥೆ ಇನ್ನೂ ನಿರ್ಮಾಣವಾಗಿಲ್ಲ.

ವ್ಯವಸ್ಥಿತಿ ಯೋಜನೆ ಇಲ್ಲದೆ ನಿರ್ಮಾಣವಾಗಿರುವ ನಗರ, ನಿಯಮಬಾಹಿರವಾಗಿ ರಾಜರೋಷವಾಗಿ ತಲೆ ಎತ್ತಿರುವ ಕಟ್ಟಡಗಳು, ಅವೈಜ್ಞಾನಿಕ ರಸ್ತೆಗಳ ರಚನೆ ಈ ಕೃತಕ ನೆರೆಗೆ ಕಾರಣವಾಗುತ್ತಿದೆ.

ನಗರದ ಮಧ್ಯೆ ಒಂದು ಕಾಲದಲ್ಲಿ ಹರಿಯುತ್ತಿದ್ದ ಇಂದ್ರಾಣಿ ಹೊಳೆ ಅತಿಕ್ರಮಣಕ್ಕೊಳಗಾಗಿ ಇಂದು ನಾಲ್ಕೈದು ಮೀಟರ್ ಅಗಲದ ಕಲ್ಸಂಕ ತೋಡಾಗಿದೆ. ಮಣಿಪಾಲ ಗುಡ್ಡೆಯಿಂದ ಹರಿದು ಬರುವ ಅಷ್ಟೂ ನೀರು ಈ ತೋಡಿನಲ್ಲಿ ಹರಿಯಲಾಗದೇ ಉಕ್ಕಿ ನಗರದೊಳಗೆ ನುಗ್ಗತ್ತದೆ.

ಉಡುಪಿ ನಗರ ಮಧ್ಯಭಾಗದಿಂದ ಕರಾವಳಿ ವೃತ್ತದಿಂದ ಮಣಿಪಾಲದ ವರೆಗೆ ರಾಷ್ಟ್ರೀಯ ಹೆದ್ದಾರಿ 169ಎ ಹಾದು ಹೋಗುತ್ತದೆ. ಈ ರಸ್ತೆಯು ಸುತ್ತಲಿನ ರಸ್ತೆಗಳಿಗಿಂತ ಎತ್ತರವಾಗಿ ನಿರ್ಮಿಸಲಾಗಿದೆ. ಇದರ ಮೇಲೆ ಬೀಳುವ ಮಳೆಯ ನೀರು ಸುತ್ತಲಿನ ತಗ್ಗು ರಸ್ತೆಗಳಲ್ಲಿ ತುಂಬಿಕೊಳ್ಳುತ್ತದೆ. ಮೊದಲೇ ಅಗಲಕಿರಿದಾದ ಚರಂಡಿಯೇ ಇಲ್ಲದ ನಗರದ ಕಿಷ್ಕಿಂದೆಯಂತಹ ರಸ್ತೆಗಳು ಸಣ್ಣ ಮಳ‍ೆಗೂ ಕಾಲುವೆಯಂತೆ ತುಂಬಿಕೊಳ್ಳುತ್ತವೆ. ಸ್ವಲ್ಪ ಜೋರಾದ ಮಳೆಯಾದರಂತೂ ಅಕ್ಕಪಕ್ಕದ ಮನೆ, ಅಂಗಡಿಗಳ ಒಳಗೂ ನೀರು ನುಗ್ಗುತ್ತದೆ.

ಕಳೆದ ವರ್ಷ ಕಲ್ಸಂಕದಿಂದ ಕೃಷ್ಣಮಠಕ್ಕೆ ತೆರಳುವ ಬಡಗುಪೇಟೆ ರಸ್ತೆ, ವಿದ್ಯಾಸಮುದ್ರ ಮಾರ್ಗಗಳಲ್ಲಿ ಪ್ರವಾಹ ತುಂಬಿ ಅಲ್ಲಿನ ಹತ್ತಾರು ಕಿರಾಣಿ ಅಂಗಡಿಗಳೊಳ‍ಗೆ ನೀರು ನುಗ್ಗಿ ಲಕ್ಷಾಂತರ ರು.ಗಳ ಅಕ್ಕಿಬೇಳೆ, ಧವಸದಾನ್ಯ, ಪೀಠೋಪಕರಣ, ಟಿವಿ ಕಂಪ್ಯೂಟರ್ ಇತ್ಯಾದಿ ನಿತ್ಯಬಳಕೆಯ ವಸ್ತುಗಳು ಹಾಳಾಗಿದ್ದವು.

ಪ್ರತಿವರ್ಷ ವಾರ್ಷಿಕೋತ್ಸವದಂತೆ ಈ ವಿಕೋಪ ಸಂಭವಿಸುತ್ತಲೇ ಇರುತ್ತದೆ. ಇದು ಉಡುಪಿಯ ಜನಪ್ರತಿನಿಧಿಗಳಿಗೂ, ಅಧಿಕಾರಿಗಳೂ ಚೆನ್ನಾಗಿ ಅರಿವಿದೆ. ಪ್ರತಿ ರಸ್ತೆಗಳ ಪಕ್ಕದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಪ್ರತಿವರ್ಷ ಯೋಜನೆ ರೂಪುಗೊಳ್ಳುತ್ತದೆ. ಆದರೆ ಅದು ಪೂರ್ಣವಾಗುತ್ತಲೇ ಇಲ್ಲ, ಉಡುಪಿಗೆ ಕೃತಕ ನೆರೆಯ ಕಾಟ ತಪ್ಪತ್ತಲೂ ಇಲ್ಲ.----ಉಡುಪಿ ನಗರದ ರಚನೆಯೇ ಎಂತಹ ಅವೈಜ್ಞಾನಿಕ ಎಂದರೆ ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿಗಿಂತಲೂ ಉಳಿದ ರಸ್ತೆಗಳು ತಗ್ಗಿನಲ್ಲಿವೆ. ಈ ರಸ್ತೆಗಳಲ್ಲಿ ಹರಿಯುವ ನೀರು ಎಲ್ಲಿಗೆ ಹೋಗಬೇಕು. ರಾಷ್ಟ್ರೀಯ ಹೆದ್ದಾರಿಯೇ ಮಳೆ ನೀರಿಗೆ ತಡೆಗೋಡೆಯಾಗಿಬಿಟ್ಟಿದೆ. ಆದ್ದರಿಂದ ಇಲ್ಲಿ ಕೃತಕ ನೆರೆ ಮಾಮೂಲಿ ಎಂಬಂತಾಗಿದೆ.

। ಎ.ಸುಂದರ್, ಸೈಬರ್ ಶಾಪ್ ಮಾಲಕರು

------

ನಗರಸಭೆಯ ಪೌರಕಾರ್ಮಿಕ ಮೂಲಕ ಮಳೆಗಾಲಕ್ಕೆ ಮೊದಲೇ ನಗರದ ಚರಂಡಿಗಳ ಹೂಳು ತೆಗೆಯುವ ಕಾರ್ಯ ಆರಂಭವಾಗಿದೆ. ಇಂದ್ರಾಳಿ ಹೊಳೆಯನ್ನೂ ಸ್ವಚ್ಛಗೊಳಿಸಿ, ಅಕ್ಕಪಕ್ಕದ ಬೆಳೆದ ಗಿಡಮರಗಳನ್ನು ತೆಗೆಯಲಾಗುವುದು. ಈ ಕಾಮಗಾರಿಗೆ ಈಗಾಗಲೇ ಗುತ್ತಿಗೆದಾರರನ್ನು ನೇಮಿಸಲಾಗಿದೆ. ಕೃತಕ ನೆರೆ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

। ರಾಯಪ್ಪ, ನಗರಸಭಾ ಪೌರಾಯುಕ್ತರು