ಬಿಜೆಪಿ ನಾಚಿಕೆಗೆಟ್ಟ ಪಕ್ಷ, ಸಂವಿಧಾನದ ಮೇಲೆ ನಂಬಿಕೆ‌ ಇಲ್ಲ : ಯತೀಂದ್ರ ಸಿದ್ದರಾಮಯ್ಯ

| Published : May 06 2024, 12:38 AM IST / Updated: May 06 2024, 02:11 PM IST

Yatindra
ಬಿಜೆಪಿ ನಾಚಿಕೆಗೆಟ್ಟ ಪಕ್ಷ, ಸಂವಿಧಾನದ ಮೇಲೆ ನಂಬಿಕೆ‌ ಇಲ್ಲ : ಯತೀಂದ್ರ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

 ಬಿಜೆಪಿ ನಾಚಿಕೆಗೆಟ್ಟ ಪಕ್ಷ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ‌ ಇಲ್ಲ. ಆಪರೇಷನ್ ಕಮಲ‌ ಮಾಡಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.

  ಬೆಳಗಾವಿ :  ಬಿಜೆಪಿ ನಾಚಿಕೆಗೆಟ್ಟ ಪಕ್ಷ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ‌ ಇಲ್ಲ. ಆಪರೇಷನ್ ಕಮಲ‌ ಮಾಡಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.

ಚುನಾವಣೆ ‌ನಂತರ ಡಬಲ್ ಇಂಜಿನ್ ಸರ್ಕಾರ ಬರುತ್ತದೆಂಬ ಬಿಜೆಪಿಗರ‌‌ ಹೇಳಿಕೆ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅದನ್ನೇ ಹೇಳುತ್ತಾರೆ. ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ. ಅವರು ಮಾಡುವ ಆರೋಪಗಳಲ್ಲಿ ಹುರುಳಿಲ್ಲ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಇಲ್ಲ, ಸಂಪೂರ್ಣ ಬಹುಮತದೊಂದಿಗೆ ಆಯ್ಕೆಯಾಗಿದ್ದೇವೆ. ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖುದ್ದು ಪ್ರಧಾನಿಗಳೇ ತಮ್ಮ ಭಾಷಣಗಳಲ್ಲಿ ಸುಳ್ಳು ಹೇಳುತ್ತಾರೆ. ಧರ್ಮದ ಆಧಾರದ ಮೇಲೆ ಭಾಷಣ ಕೋಮು ದ್ವೇಷ ಹಚ್ಚುವ ಭಾಷಣ ಮಾಡುತ್ತಿರುವುದರಿಂದ ಚುನಾವಣೆ ಆಯೋಗಕ್ಕೆ ದೂರು ಕೊಟ್ಟರೂ ಕ್ರಮ ಆಗುತ್ತಿಲ್ಲ. ಅಲ್ಲದೇ ಪ್ರಧಾನಿಗೆ ನೋಟಿಸ್ ಕೊಡುವುದಕ್ಕೂ ಚುನಾವಣೆ ಆಯೋಗಕ್ಕೂ ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2ನೇ ಹಂತದ ಚುನಾವಣೆಯಲ್ಲಿ ಅಗತ್ಯ ‌ಇದ್ದಕಡೆ ಪ್ರಚಾರ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದ ‌ಜನ ಕಾಂಗ್ರೆಸ್ ಪರವಾಗಿದ್ದಾರೆ. ಇಷ್ಟೆ ಗೆಲ್ಲುತ್ತೇವೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಆದರೆ 15 ರಿಂದ 20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೇವಣ್ಣ ಬಂಧನದಲ್ಲಿ ನಾವ್ಯಾರೂ ಹಸ್ತಕ್ಷೇಪ ಮಾಡಲ್ಲ

ಮಾಜಿ ಸಚಿವ ರೇವಣ್ಣ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ನಿರೀಕ್ಷಣಾ ಜಾಮೀನು ಸಿಗದ ಹಿನ್ನೆಲೆಯಲ್ಲಿ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನ ವಿಚಾರ ಕುರಿತು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರಿಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಕರೆದರೂ ಹಾಜರಾಗಿರಲಿಲ್ಲ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನಿರೀಕ್ಷಣಾ ಜಾಮೀನು ಸಿಗದ ಕಾರಣ ಅವರನ್ನು ಬಂಧಿಸಲಾಗಿದೆ. ಇದರಲ್ಲಿ ನಾವ್ಯಾರೂ ಹಸ್ತಕ್ಷೇಪ ಮಾಡಲ್ಲ. ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಎಸ್‌ಐಟಿ ತನಿಖೆ ಪ್ರಾರಂಭ ಮಾಡಿದ್ದು, ಶೀಘ್ರದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸುತ್ತಾರೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಕೈ ಅಭ್ಯರ್ಥಿ ಹಣ ಹಂಚಿಕೆ ಕೇವಲ ಆರೋಪ ಅಷ್ಟೆ, ಪ್ರತಿಪಕ್ಷದವರು ಪ್ರತಿಬಾರಿಯೂ ಹೇಳುತ್ತಾರೆ. ಅದು ಸತ್ಯ ಇದ್ದರೇ ಅವರ ಮೇಲೆ ಚುನಾವಾಣಾ ಆಯೋಗ ಕ್ರಮಕೈಗೊಳ್ಳುತ್ತದೆ. ಬಿಜೆಪಿಯವರು ಈ ಮಾತು ‌ಹೇಳುತ್ತಿರುವುದು ಹಾಸ್ಯಾಸ್ಪದ.

- ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ.