ಇಂದಿನ ಮತ ಹಬ್ಬಕ್ಕೆ ರಾಜಧಾನಿ ಪೂರ್ಣ ಸಜ್ಜು

| Published : Apr 26 2024, 01:32 AM IST / Updated: Apr 26 2024, 07:07 AM IST

ಸಾರಾಂಶ

ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬವಾದ ಮತದಾನಕ್ಕೆ ಬೆಂಗಳೂರು ಸಕಲ ರೀತಿಯಲ್ಲಿ ಸಜ್ಜಾಗಿದೆ. ಮತದಾರರಿಗೆ ಹಲವು ಅನುಕೂಲ ಕಲ್ಪಿಸಲಾಗಿದೆ.

  ಬೆಂಗಳೂರು :  ರಾಜಧಾನಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಲಿದೆ. ಒಟ್ಟು 7,156 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದ್ದು, ಬೆಳಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.

ರಾಜ್ಯದ ಮೊದಲ ಹಂತದ ಮತ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲಾ ಚುನಾವಣಾ ಆಯೋಗವು ಸಜ್ಜಾಗಿದೆ. ನಗರದ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ಚುನಾವಣಾ ಹಾಗೂ ಭದ್ರತಾ ಸಿಬ್ಬಂದಿ ಗುರುವಾರ ತೆರಳಿ, ಮತದಾನಕ್ಕೆ ಅಗತ್ಯ ಸಕಲ ಸಿದ್ಧತೆ ಕೈಗೊಂಡಿದ್ದಾರೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಲೋಕಸಭಾ ಮೂರು ಕ್ಷೇತ್ರದಲ್ಲಿ 67 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದ್ದು, 55 ಪುರುಷರು, 12 ಮಹಿಳೆಯರು ಅಖಾಡದಲ್ಲಿದ್ದಾರೆ. ಇವರ ರಾಜಕೀಯ ಭವಿಷ್ಯ ಶುಕ್ರವಾರ ಮತ ಯಂತ್ರಗಳಲ್ಲಿ ಬಂಧಿಯಾಗಲಿದೆ. ಮೂರು ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ.

ಮೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 79,90,006 ಮತದಾರರಿದ್ದು, 41,10,911 ಪುರುಷ, 38,77,624 ಮಹಿಳಾ ಹಾಗೂ 1,471 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಇನ್ನು ಮತದಾನಕ್ಕೆ 7,156 ಮತಗಟ್ಟೆಗಳನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ. ಈ ಪೈಕಿ 1,368 ಸೂಕ್ಷ್ಮ ಹಾಗೂ 196 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಚುನಾವಣಾ ಆಯೋಗ ಗುರುತಿಸಿದ್ದು, ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಮತಗಟ್ಟೆಗಳ ಪೈಕಿ ಶೇ.50ರಷ್ಟು ಮತಗಟ್ಟೆಗಳು ಅಂದರೆ, 3,578 ಮತಗಟ್ಟೆಗಳಲ್ಲಿ ಮತದಾನದಂದು ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 11,793 ಸಿಎಪಿಎಫ್‌ ಸಿಬ್ಬಂದಿ ಹಾಗೂ ನಾನ್ ಸಿಎಪಿಎಫ್‌ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ಚುನಾವಣಾ ಕಾರ್ಯದಲ್ಲಿ 34 ಸಾವಿರ ಸಿಬ್ಬಂದಿ ತೊಡಗಿದ್ದು, ಇದರ ಜತೆಗೆ ಬೆಂಗಳೂರು ನಗರ ಪೊಲೀಸ್ ಘಟಕದಿಂದ 9,397 ಪೊಲೀಸ್ ಅಕಾರಿ ಮತ್ತು ಸಿಬ್ಬಂದಿ, 3,919 ಗೃಹ ರಕ್ಷಕ ಸಿಬ್ಬಂದಿ, 54 ಶಸ್ತ್ರಾಸ್ತ್ರ ತುಕಡಿ ಹಾಗೂ 11 ಕೇಂದ್ರಿಯ ಪೊಲೀಸ್ ತುಕಡಿ ನಿಯೋಜಿಸಲಾಗಿದೆ. ಗುರುವಾರವೇ ಇವಿಎಂ ಮತ್ತು ವಿವಿ ಪ್ಯಾಟ್‌ ಸೇರಿದಂತೆ ಅಗತ್ಯ ಸಾಮಾಗ್ರಿಗಳೊಂದಿಗೆ ಚುನಾವಣಾ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.

ಚುನಾವಣಾ ಕಾರ್ಯಕ್ಕೆ ಒಟ್ಟು 1,104 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಪೈಕಿ 358 ಶಾಲಾ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮತಗಟ್ಟೆಯಲ್ಲಿ ಕರಗ ವೈಭವ

ಮತದಾನ ಪ್ರಮಾಣ ಹೆಚ್ಚಿಸುವುದಕ್ಕೆ ಜಿಲ್ಲಾ ಚುನಾವಣಾ ಆಯೋಗ ಹಲವು ಕಸರತ್ತು ನಡೆಸಿದೆ. ಇದರ ಭಾಗವಾಗಿ ನಗರದಲ್ಲಿ ಒಟ್ಟು 224 ಮತಗಟ್ಟೆಗಳನ್ನು ವಿಷಯಾಧಾರಿತ ಸಜ್ಜುಗೊಳಿಸಿದೆ. ಈ ಪೈಕಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಐದು ಸಖೀ ಮತಗಟ್ಟೆ ಸ್ಥಾಪಿಸಲಾಗಿದೆ. ಅದೇ ರೀತಿ ತಲಾ ಒಂದರಂತೆ ಯುವ ಮತಗಟ್ಟೆ, ಅಂಗವಿಕರ ಮತಗಟ್ಟೆ ಸ್ಥಾಪಿಸಲಾಗಿದೆ. ಸಖೀ ಮತಗಟ್ಟೆಗಳನ್ನು ಪಿಂಕ್‌ ಬಣ್ಣದ ಬಲೂನು, ಬಟ್ಟೆಯಿಂದ ಸಿಂಗಾರಗೊಳಿಸಲಾಗಿದೆ. ಉಳಿದಂತೆ ವಿಶ್ವ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ, ಅರಣ್ಯ, ವನ್ಯಜೀವಿ, ನೀರಿನ ಸಂರಕ್ಷಣೆ, ನಾಡಿನ ಕಲೆ ಸಂಸ್ಕೃತಿ ಸಾರುವ ವಿಷಯಾಧಾರಿಸಿ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.ಮತಗಟ್ಟೆಗೆ ಹೋಗಲು ಉಚಿತ ಸಾರಿಗೆ

ಮತದಾನಕ್ಕೆ ಬರುವ ಅಂಗವಿಕರು ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡುತ್ತಿದೆ. ಸಾರಿಗೆ ಸೌಲಭ್ಯ ಬೇಕಾದ ಅಂಗವಿಕರು ಮತ್ತು ಹಿರಿಯ ನಾಗರಿಕರು, ಚುನಾವಣಾ ಆಯೋಗದ ಸಕ್ಷಮ್ ತಂತ್ರಾಂಶದ ಮೂಲಕ ನೋಂದಾಣಿ ಮಾಡಿಕೊಳ್ಳಬೇಕು. ಮತದಾನದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುತ್ತದೆ.ಬೆಳಗ್ಗೆ 5.30ಕ್ಕೆ ಅಣಕು ಮತದಾನ

ಮತಗಟ್ಟೆಗಳಲ್ಲಿ ರ್‍ಯಾಂಪ್‌, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತದೆ. ಚುನಾವಣಾ ಸಿಬ್ಬಂದಿ ಮತಗಟ್ಟೆಯಲ್ಲೇ ಗುರುವಾರ ರಾತ್ರಿ ವಾಸ್ತವ್ಯ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ 5.30ಕ್ಕೆ ಅಣುಕು ಮತದಾನ ಪ್ರಾರಂಭವಾಗಲಿದ್ದು, ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮತದಾನದ ಮುಗಿದ ಬಳಿಕ ಎಲ್ಲ ಮತಟ್ಟೆಗಳಿಂದ ಮತಯಂತ್ರಗಳನ್ನು 28 ಮಸ್ಟರಿಂಗ್ ಕೇಂದ್ರಗಳಿಗೆ ಚುನಾವಣಾ ಸಿಬ್ಬಂದಿಯೇ ತರುತ್ತಾರೆ. ರಾತ್ರಿ 9 ಗಂಟೆ ನಂತರ ಈ ಎಲ್ಲ ಮತಯಂತ್ರಗಳನ್ನು ಸಂಬಂಧಿಸಿದ ಲೋಕಸಭಾ ಕ್ಷೇತ್ರದ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಂಗೆ ಸಾಗಿಸಲಾಗುತ್ತವೆ.

ಬಿಸಿಲ ಝಳಕ್ಕೆ ನೆರಳಿನ ವ್ಯವಸ್ಥೆ

ಬೇಸಿಗೆಯ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಸಿಲ ತಾಪಕ್ಕೆ ಅಂಜಿ ಜನರು ಮತದಾನದಿಂದ ದೂರ ಉಳಿಯ ಬಾರದೆಂಬ ಕಾರಣಕ್ಕೆ ಮತಗಟ್ಟೆಯಲ್ಲಿ ನೆರಳಿನ ವ್ಯವಸ್ಥೆಗೆ ಮಾಡಿದೆ. ಜತೆಗೆ, ಕುಡಿಯುವುದಕ್ಕೆ ನೀರಿನ ವ್ಯವಸ್ಥೆ ಸೇರಿದಂತೆ ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗಿದೆ.

ಎಲ್ಲೆಲ್ಲಿ ಸ್ಟ್ರಾಂಗ್‌ ರೂಂ?

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ವಸಂತನಗರದ ಅರಮನೆ ರಸ್ತೆಯ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸಂಗ್ರಹಿಸಲಾಗುವುದು. ಬೆಂಗಳೂರು ಉತ್ತರ ಕ್ಷೇತ್ರದ ಮತಯಂತ್ರಗಳನ್ನು ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಸಂಗ್ರಹಿಸಲಾಗುವುದು. ಜೂನ್‌ 4ರಂದು ಅಲ್ಲಿಯೇ ಮತ ಎಣಿಕೆ ನಡೆಯಲಿದೆ.ಜಿಲ್ಲಾ ಚುನಾವಣಾಧಿಕಾರಿ ವಿವಿಧ ಕಡೆ ಪರಿಶೀಲನೆ

ಬೆಂಗಳೂರು ನಗರ ಜಿಲ್ಲೆಯ ಮೂರು ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ (ಏ.26) ನಡೆಯಲಿರುವ ಮತದಾನದ ಸಿದ್ಧತೆ ಕುರಿತು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಗುರುವಾರ ಪರಿಶೀಲನೆ ನಡೆಸಿದರು.

ಗುರುವಾರ ನಗರ ಜಿಲ್ಲಾ ಚುನಾವಣಾಧಿಕಾರಿ ಯಲಹಂಕಯ ಶೇಷಾದ್ರಿಪುರ ಕಾಲೇಜು, ಬ್ಯಾಟರಾಯನಪುರದ ಬಿಇಎಲ್ ಹೈ ಸ್ಕೂಲ್, ದಾಸರಹಳ್ಳಿಯ ಕ್ರೈಸ್ಟ್ ಯೂನಿವರ್ಸಿಟಿ, ಗೊವಿಂದರಾಜನಗರದ ಡಾ। ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಆರ್.ಆರ್.ನಗರದ ಜ್ಞಾನಾಕ್ಷಿ ವಿದ್ಯಾನಿಕೇತನನ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಗರದ 3 ಲೊಕಸಭಾ ಕ್ಷೇತ್ರ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಬಂದು ಮತಗಟ್ಟೆಗಳಿಗೆ ಅಗತ್ಯವಿರುವ ಇವಿಎಂ, ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ಸೇರಿದಂತೆ ಎಲ್ಲಾ ಮತಗಟ್ಟೆ ಸಾಮಗ್ರಿಗಳನ್ನು ಪಡೆದುಕೊಂಡಿದ್ದಾರೆ. ಬಿಎಂಟಿಸಿ, ಕೆಎಸ್‌ ಆರ್ ಟಿಸಿ ಇತರೆ ವಾಹನಗಳ ಮೂಲಕ ಮತಗಟ್ಟೆಗಳಿಗೆ ಪೊಲೀಸ್ ಬಂದೋಬಸ್ತ್ ಮೂಲಕ ತೆರಳಲಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲೂ ವಸತಿ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ‌‌ ಎಂದು ತಿಳಿಸಿದರು.

ಮತದಾನ ಆರಂಭಕ್ಕೂ ಮುನ್ನ ಅಣುಕು ಮತದಾನದ ನಡೆಯಲಿದೆ. ಈ ವೇಳೆ ಇವಿಎಂನಲ್ಲಿ ಲೋಪದೋಷಗಳು ಕಂಡುಬಂದರೆ ಸೆಕ್ಟರ್ ಅಧಿಕಾರಿ ಮೂಲಕ ಕನಿಷ್ಠ 10 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ಮಾರ್ಗ ಅಧಿಕಾರಿಯು ಪರ್ಯಾಯ ವ್ಯವಸ್ಥೆ ಮಾಡಲಿದ್ದಾರೆ ಎಂದು ತಿಳಿಸಿದರು.

ಮತಗಟ್ಟೆಯ 200 ಮೀ. ಒಳಗೆ

ಪಕ್ಷಗಳ ಬೂತ್‌ ಸ್ಥಾಪಿಸುವಂತಿಲ್ಲ

ಕನ್ನಡಪ್ರಭ ವಾರ್ತೆ ಬೆಂಗಳೂರು

ಚುನಾವಣೆ ವೇಳೆ ವಿವಿಧ ಪಕ್ಷಗಳು ಚುನಾವಣಾ ಬೂತ್‌ಗಳನ್ನು (ತಾತ್ಕಾಲಿಕ ಕಚೇರಿಗಳು) ಸ್ಥಾಪಿಸಲು ಚುನಾವಣಾ ಆಯೋಗವು ಕೆಲವು ನಿರ್ದೇಶನದೊಂದಿಗೆ ಅವಕಾಶ ನೀಡಿದ್ದು, ಮತದಾನ ಕೇಂದ್ರದಿಂದ 200 ಮೀ. ವ್ಯಾಪ್ತಿಯೊಳಗೆ ಚುನಾವಣಾ ಬೂತ್‌ಗಳನ್ನು ಸ್ಥಾಪಿಸಬಾರದು ಎಂದು ನಿರ್ದೇಶನ ನೀಡಿದೆ.

ನೆರಳಿಗಾಗಿ ತಾತ್ಕಾಲಿಕ ಟೆಂಟ್‌ಗಳನ್ನು ಹಾಕಿಕೊಳ್ಳಬಹುದಾಗಿದೆ. ಪ್ರತಿ ಬೂತ್‌ಗಳಲ್ಲಿ ಕೇವಲ ಒಂದು ಟೇಬಲ್‌ ಮತ್ತು ಎರಡು ಕುರ್ಚಿಗಳನ್ನು ಮಾತ್ರ ಹಾಕಿರಬೇಕು. ಈ ಬಗ್ಗೆ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ಮೊದಲೇ ಲಿಖಿತವಾಗಿ ಮಾಹಿತಿ ನೀಡಬೇಕು. ಅಧಿಕಾರಿಗಳು ವಿಚಾರಿಸಿದಾಗ ಪಡೆದಿರುವ ಅನುಮತಿ ಪತ್ರವನ್ನು ತೋರಿಸಬೇಕು ಎಂದು ಆಯೋಗವು ಸೂಚಿಸಿದೆ.

ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಅಥವಾ ಆವರಣದಲ್ಲಿ ಇಂತಹ ಬೂತ್‌ಗಳನ್ನು ತೆರೆಯಬಾರದು. ಯಾವುದೇ ಶಿಕ್ಷಣ ಸಂಸ್ಥೆಗಳು ಅಥವಾ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಸ್ಥಳಗಳಲ್ಲಿ ಬೂತ್‌ಗಳನ್ನು ತೆರೆಯಬಾರದು. ಬೂತ್‌ಗಳಲ್ಲಿ ಬಳಸುವ ಬ್ಯಾನರ್‌ ಗಾತ್ರವು 4/8 ಅಡಿಗಳನ್ನು ಮೀರಬಾರದು. ಬೂತ್‌ಗಳ ಸ್ಥಾಪನೆ ಮತ್ತು ಸಂಬಂಧಿಸಿದ ಚಟುವಟಿಕೆಗಳ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚದ ಖಾತೆಗೆ ಹಾಕಲಾಗುತ್ತದೆ ಎಂದು ಹೇಳಿದೆ.

ಯಾವುದೇ ಸಂದರ್ಭದಲ್ಲಿಯೂ ಬೂತ್‌ಗಳಲ್ಲಿ ಯಾವುದೇ ಜನಸಂದಣಿಯಾಗದಂತೆ ನೋಡಿಕೊಳ್ಳಬೇಕು. ಮತದಾರರು ತೆರಳುವ ಮಾರ್ಗದಲ್ಲಿ ಯಾವುದೇ ಅಡೆತಡೆಗಳನ್ನು ಉಂಟು ಮಾಡಬಾರದು ಅಥವಾ ಇತರ ಅಭ್ಯರ್ಥಿಗಳ ಬೂತ್‌ಗಳಿಗೆ ಹೋಗುವುದನ್ನು ತಡೆಯಬಾರದು. ಮತದಾನದ ದಿನದಂದು ಮತಗಟ್ಟೆಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ಯಾವುದೇ ಚುನಾವಣಾ ಪ್ರಚಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.