ಮಕ್ಕಳ ಉಚಿತ ಬೇಸಿಗೆ ಶಿಬಿರ ಸಮಾರೋಪ

| Published : May 06 2024, 12:31 AM IST

ಮಕ್ಕಳ ಉಚಿತ ಬೇಸಿಗೆ ಶಿಬಿರ ಸಮಾರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಮಕ್ಕಳ ಉಚಿತ ಬೇಸಿಗೆ ಶಿಬಿರ ಯಶಸ್ಸು ಕಂಡು ಸಮಾರೋಪವಾಯಿತು. 22 ದಿವಸಗಳ ಕಾಲ ಪಾಲ್ಗೊಂಡ ಶಿಬಿರದಲ್ಲಿ ಮೂವತ್ತಕ್ಕೂ ಅಧಿಕ ಮಕ್ಕಳು ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿರಾಜಪೇಟೆ ಹೆಗ್ಗಳ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಶಾಲಾ ಮಕ್ಕಳ ಉಚಿತ ಬೇಸಿಗೆ ಶಿಬಿರ ಯಶಸ್ಸು ಕಂಡು ಸಮಾರೋಪವಾಯಿತು. 22 ದಿವಸಗಳ ಕಾಲ ಜರುಗಿದ ಈ ಶಿಬಿರದಲ್ಲಿ ವಿವಿಧ ಶಾಲೆಗಳ ಮೂವತ್ತಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.

ಈ ಶಿಬಿರದಲ್ಲಿ ವಿರಾಜಪೇಟೆಯ ನುರಿತ ತರಬೇತುದಾರರಿಂದ ಮಕ್ಕಳಿಗೆ ಯೋಗ, ಕರಾಟೆ, ಮಾರ್ಷಲ್ ಆರ್ಟ್ಸ್, ಕ್ರಾಫ್ಟ್, ನೃತ್ಯ, ಸಂಗೀತ, ಆಂಗ್ಲ ಭಾಷೆ ಕಲಿಕೆ, ಕ್ರೀಡೆ, ಡ್ರಾಯಿಂಗ್, ಕ್ಷೇತ್ರ ಪರಿಚಯ ಇನ್ನೂ ಮುಂತಾದ ವಿಚಾರಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.

ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಆಯೋಜಕರಾದ ಶಾಲಾ ಮುಖ್ಯೋಪಾಧ್ಯಾಯಿನಿ ಕಮಲಮ್ಮ ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಅವರ ಸಹಕಾರ, ಇತರ ಇಲಾಖಾಧಿಕಾರಿಗಳು, ಗ್ರಾಮಸ್ಥರು, ದಾನಿಗಳು ಮತ್ತು ವಿಶೇಷವಾಗಿ ಸ್ಥಳೀಯರು ಮತ್ತು ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ರವೀಂದ್ರ ಅವರು ನೀಡಿದ ಸಹಕಾರದಿಂದ ಈ ಶಿಬಿರ ಯಶಸ್ಸನ್ನು ಕಂಡಿದೆ. ಮಕ್ಕಳ ಪೋಷಕರ ಪ್ರೋತ್ಸಾಹಕ್ಕೂ ನಾನು ಅಭಾರಿಯಾಗಿದ್ದೇನೆ ಎಂದರು. ಮಕ್ಕಳು ಹಲವಾರು ವಿಷಯಗಳನ್ನು ಈ ಶಿಬಿರದಿಂದ ಕಲಿತಿದ್ದು, ಗ್ರಾಮೀಣ ಮಕ್ಕಳಿಗೆ ಪ್ರಯೋಜನವಾಗಿದೆ ಎಂದರು.

ಶಿಕ್ಷಣ ಇಲಾಖಾ ಅಧಿಕಾರಿಗಳಾದ ವೆಂಕಟೇಶ್, ವನಜಾಕ್ಷಿ, ಎಸ್. ಡಿ. ಎಂ. ಸಿ. ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾಂತಿ, ಸದಸ್ಯರು, ಅಂಗನವಾಡಿ ಕಾರ್ಯಕರ್ತರಾದ ಸೌಮ್ಯ, ರತಿ, ಕೊಡಗು ಜಿಲ್ಲಾ ಅಕ್ಷರ ದಾಸೋಹ ಅಧ್ಯಕ್ಷೆ ಪ್ರಮೀಳಾ, ಪೋಷಕರು, ಗ್ರಾಮಸ್ಥರು ಹಾಜರಿದ್ದರು.