ಮೋಟೆಬೆನ್ನೂರಿನಲ್ಲಿ ಚಿಲ್ಲೀ ಬೂತ್ ಸ್ಥಾಪನೆ

| Published : May 07 2024, 01:00 AM IST

ಸಾರಾಂಶ

ಬ್ಯಾಡಗಿ ಪಟ್ಟಣದ ಸೇರಿದಂತೆ ಮತಕ್ಷೇತ್ರದ ವ್ಯಾಪ್ತಿಯ 117 ಗ್ರಾಮಗಳಿಗೆ 39 ಸರ್ಕಾರಿ ಬಸ್ ಹಾಗೂ 2 ಖಾಸಗಿ ಟೆಂಪೋ ವಾಹನಗಳಲ್ಲಿ ಒಟ್ಟು 1066 ಚುನಾವಣಾ ಸಿಬ್ಬಂದಿ ನಿಯೋಜಿಸಿದ ಮತಗಟ್ಟೆಗೆ ಸುರಕ್ಷಿತವಾಗಿ ತೆರಳಿದರು.

ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ ಚುನಾವಣಾಧಿಕಾರಿ ಮಮತಾ ಹೊಸಗೌಡ್ರ ಕರೆಕನ್ನಡಪ್ರಭ ವಾರ್ತೆ ಬ್ಯಾಡಗಿ

ಮೇ 7ರಂದು (ಎರಡನೇ ಹಂತ) ನಡೆಯಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ಮಸ್ಟರಿಂಗ್ ಕಾರ್ಯ ಸೋಮವಾರ ನಡೆಯಿತು. 40 ಡಿಗ್ರಿ ಸೆಲ್ಸಿಯಸ್ ದಗದಗಿಸುವ ಬಿಸಿಲ ಬೇಗೆಯ ನಡುವೆ ಚುನಾವಣಾ ಸಿಬ್ಬಂದಿ ಅತೀ ಉತ್ಸಾಹದಿಂದ ಪಟ್ಟಣದ ಸೇಂಟ್ ವಿಯೆನ್ನಾ ಶಾಲೆ ಆವರಣದಿಂದ ಸಂಬಂಧಿಸಿದ ಮತಗಟ್ಟೆಗೆ ತೆರಳಿದರು.

ಬ್ಯಾಡಗಿ ಪಟ್ಟಣದ ಸೇರಿದಂತೆ ಮತಕ್ಷೇತ್ರದ ವ್ಯಾಪ್ತಿಯ 117 ಗ್ರಾಮಗಳಿಗೆ 39 ಸರ್ಕಾರಿ ಬಸ್ ಹಾಗೂ 2 ಖಾಸಗಿ ಟೆಂಪೋ ವಾಹನಗಳಲ್ಲಿ ಒಟ್ಟು 1066 ಚುನಾವಣಾ ಸಿಬ್ಬಂದಿ ನಿಯೋಜಿಸಿದ ಮತಗಟ್ಟೆಗೆ ಸುರಕ್ಷಿತವಾಗಿ ತೆರಳಿದರು.

ಒಟ್ಟು 212567 ಮತದಾರರು:ತಾಲೂಕಿನ 66 ಗ್ರಾಮಗಳು ಸೇರಿದಂತೆ ರಾಣೆಬೆನ್ನೂರಿನ 25, ಹಾವೇರಿ ತಾಲೂಕಿನ 26 ಒಟ್ಟು 117 ಗ್ರಾಮಗಳಲ್ಲಿ ಮತದಾನ ಕಾರ್ಯ ನಡೆಯಲಿದೆ. ಮತಕ್ಷೇತ್ರದಲ್ಲಿ 107609 ಪುರುಷರು ಹಾಗೂ 104955 ಮಹಿಳೆಯರು ಇತರರು 3 ಸೇರಿದಂತೆ ಒಟ್ಟು 212567 ಮತದಾರರಿದ್ದು, ಮತಗಟ್ಟೆ ಸಂಖ್ಯೆ-109 (ಇಂಗಳಗೊಂದಿ) 242 ಮತದಾರರಿದ್ದು ಅತೀ ಕಡಿಮೆ ಎನಿಸಿದರೇ, ಮತಗಟ್ಟೆ ಸಂಖ್ಯೆ 137 (ಬ್ಯಾಡಗಿ ಎನ್‌ಬಿಬಿ ಸ್ಕೂಲ್) ರಲ್ಲಿ ಒಟ್ಟು 1526 ಮತದಾರರಿದ್ದು ಅತೀ ಹೆಚ್ಚು ಎನಿಸಿದೆ.

ಒಟ್ಟು 1066 ಸಿಬ್ಬಂದಿ

ಮತದಾನ ಕಾರ‍್ಯ ಸುಗಮವಾಗಿ ನಡೆಸುವ ಉದ್ದೇಶದಿಂದ ಶೇ. 10ರಷ್ಟು ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ 266 ಪಿಆರ್‌ಒ, 266 ಎಪಿಆರ್‌ಒ ಹಾಗೂ 542 ಮತಗಟ್ಟೆ ಸಿಬ್ಬಂದಿ ಸೇರಿದಂತೆ ಒಟ್ಟು 1066 ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ, ಇದಕ್ಕಾಗಿ 55 ಜನ ಮೈಕ್ರೋ ಅಬ್ಸರ್ವರ್ ಸಿಬ್ಬಂದಿ ನಿಯೋಜಿಸಲಾಗಿದೆ.

ಒಟ್ಟು 242 ಬೂತ್

ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 242 ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 48 ಸೂಕ್ಷ ಮತಗಟ್ಟೆ ಹಾಗೂ ಮತಗಟ್ಟೆ ಸಂಖ್ಯೆ-04 (ದೇವಗಿರಿ) ಮತಗಟ್ಟೆ ಸಂಖ್ಯೆ-28 (ಸಂಗೂರು) ಹಾಗೂ ಮತಗಟ್ಟೆ ಸಂಖ್ಯೆ-77 (ಕುರುಬಗೊಂಡ) ಇವುಗಳನ್ನು ಅತೀಸೂಕ್ಷ ಮತಗಟ್ಟೆಗಳೆಂದು ಗುರ್ತಿಸಲಾಗಿದೆ.

ಚಿಲ್ಲೀ ಬೂತ್ ಸೇರಿ 5 ವಿಶೇಷ ಮತಗಟ್ಟೆ

ಮತಕ್ಷೇತ್ರ ವ್ಯಾಪ್ತಿಯಲ್ಲಿ 2 ಪಿಂಕ್ ಬೂತ್‌ಗಳನ್ನು ನಿರ್ಮಿಸಲಾಗಿದ್ದು ಬ್ಯಾಡಗಿ ಪಟ್ಟಣದ ಮತಗಟ್ಟೆ ಸಂಖ್ಯೆ-139 ಹಾಗೂ 107 (ಇಂಗಳಗೊಂದಿ) ಇವುಗಳನ್ನು ಪಿಂಕ್ ಬೂತ್‌ಗಳಾಗಿ ಪರಿವರ್ತಿಸಲಾಗಿದೆ. ಬ್ಯಾಡಗಿ ಪಟ್ಟಣದ ಮೆಣಸಿನಕಾಯಿ ವ್ಯಾಪಾರಕ್ಕೆ ಹೆಸರಾಗಿದ್ದು, ವಿಶ್ವ ಪಾರಂಪರಿಕ ನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಈ ಹಿನ್ನೆಲೆಯಲ್ಲಿ ಮೋಟೆಬೆನ್ನೂರಿನ (ಮತಗಟ್ಟೆ ಸಂಖ್ಯೆ 80) ಚಿಲ್ಲಿ ಬೂತ್ ನಿರ್ಮಿಸಲಾದೆ, ಮತಗಟ್ಟೆ ಸಂಖ್ಯೆ-130 ರಲ್ಲಿ ಯಂಗ್ ಆಫೀಸರ್ ಬೂತ್, ಮತಗಟ್ಟೆ ಸಂಖ್ಯೆ-98 (ಶಂಕರೀಪುರ) ವಿಶೇಷ ಚೇತನರ ಬೂತ್ ಸ್ಥಾಪಿಸಲಾಗಿದೆ.

ಬಿಗಿ ಬಂದೋಬಸ್ತ್‌

ಸುಗಮ ಮತದಾನ ಕಾರ್ಯದ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದೆ. ಎಸ್‌ಪಿ ಅಂಶುಕುಮಾರ್ ಮಾರ್ಗದರ್ಶನದಲ್ಲಿ 1 ಡಿಎಸ್‌ಪಿ, 3 ಸಿಪಿಐ, 12 ಪಿಎಸ್‌ಐ, 15 ಎಎಸ್‌ಐ, 344 ಎಚ್‌ಸಿ, ಪಿಸಿ, ಹೋಮ್‌ಗಾರ್ಡ ಸೇರಿ) 36 ಸಿಆರ್‌ಪಿಎಫ್, 84 ಸೆಕ್ಟರ್ ಮೊಬೈಲ್ ಅಧಿಕಾರಿಗಳು, 22 ರೆವಿನ್ಯೂ ಸೆಕ್ಟರ್ ಅಧಿಕಾರಿಗಳು, 36 ಕೇರಳ ಆರ್ಮಡ್ ಪೊಲೀಸ್, 1 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿದ್ದು ಆಯಕಟ್ಟಿನ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.

ರುಚಿಯಾದ ಭೋಜನ

ಮತಗಟ್ಟೆ ಸಿಬ್ಬಂದಿಗೆ ಉತ್ತರ ಕರ್ನಾಟಕದ ಪ್ರಸಿದ್ಧವಾದ ಗೋಧಿ ಪಾಯಸ ಹಾಗೂ ಮುಳಗಾಯಿ ಪಲ್ಯ ಸಿದ್ದಪಡಿಸಲಾಗಿತ್ತು, ಇದಕ್ಕೂ ಮುನ್ನ ಬೆಳಗ್ಗೆ ಉಪಹಾರಕ್ಕಾಗಿ ಉಪ್ಪಿಟ್ಟು ಮತ್ತು ಕೇಸರಿಬಾತ್ ಸಿದ್ಧಪಡಿಸ ಲಾಗಿತ್ತು.

ಮತಪ್ರಮಾಣ ಹೆಚ್ಚಿಸಿ

ಕ್ಷೇತ್ರದ ಮತದಾರರಿಗೆ ಮತದಾನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ, ಯಾರೊಬ್ಬರೂ ಹೊರಗುಳಿಯದೇ ಚುನಾವಣೆಯ ಹಬ್ಬದಲ್ಲಿ ಪಾಲಗೊಂಡು ಮತದಾನ ಮಾಡುವ ಮೂಲಕ ಈ ಬಾರಿ ಮತದಾನ ಪ್ರಮಾಣದಲ್ಲಿ ಶೇಕಡಾವಾರು ಹೆಚ್ಚಿಸಬೇಕು.

ಮಮತಾ ಹೊಸಗೌಡ್ರ ಸಹಾಯಕ ಚುನಾವಣಾಧಿಕಾರಿ