ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್ ಗ್ಯಾರಂಟಿ: ಸಂಯುಕ್ತಾ ಪಾಟೀಲ

| Published : Apr 26 2024, 12:52 AM IST

ಬಿಜೆಪಿ ನಿದ್ದೆಗೆಡಿಸಿದ ಕಾಂಗ್ರೆಸ್ ಗ್ಯಾರಂಟಿ: ಸಂಯುಕ್ತಾ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಿಜೆಪಿ ಮೈತ್ರಿಕೂಟದ ನಾಯಕರ ನಿದ್ದೆಗೆಡಿಸಿದ್ದು, ಸೋಲಿನ ಭೀತಿಯಿಂದ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ವಾಗ್ದಾಳಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಿಜೆಪಿ ಮೈತ್ರಿಕೂಟದ ನಾಯಕರ ನಿದ್ದೆಗೆಡಿಸಿದ್ದು, ಸೋಲಿನ ಭೀತಿಯಿಂದ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ವಾಗ್ದಾಳಿ ಮಾಡಿದ್ದಾರೆ.

ಬಾದಾಮಿ ತಾಲೂಕಿನ ಬೇಲೂರಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕೆ ಮಾಡಿದ್ದರು. ಈಗ ಅವರದೇ ಧಾಟಿಯಲ್ಲಿ ಚಿತ್ರನಟಿ ಶ್ರುತಿ ಮಾತನಾಡಿದ್ದಾರೆ. ಒಬ್ಬ ಮಹಿಳೆಯಾಗಿ ಈ ರೀತಿ ಸ್ತ್ರೀ ಸಮೂಹ ಅಪಮಾನ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

ಪಿಯುಸಿ ಟಾಪರ್‌ಗಳು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ನಮ್ಮ ಸಾಧನೆಗೆ ಕಾರಣವಾಗಿವೆ ಎಂದು ಹೇಳುತ್ತಿದ್ದಾರೆ. ಲಕ್ಷ ಲಕ್ಷ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಕೀಳುಮಟ್ಟದ ಟೀಕೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.

ಬೆಲೆ ಏರಿಕೆಯಿಂದ ಬಡ ಕುಟುಂಬಗಳಿಗೆ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳು ಈ ಕುಟುಂಬಗಳಿಗೆ ಆಸರೆಯಾಗಿವೆ. ಟೀಕೆ ಮಾಡುವವರಿಗೆ ಬಡ ಕುಟುಂಬಗಳ ಕಷ್ಟದ ಅರಿವು ಹೇಗಾಗಬೇಕು ಎಂದು ಪ್ರಶ್ನಿಸಿದರು.

ಅಡುಗೆ ಎಣ್ಣೆ, ಪೆಟ್ರೋಲ್, ಡಿಸೇಲ್, ಕೃಷಿ ಉಪಕರಣಗಳು, ರಸಗೊಬ್ಬರ, ಬಿತ್ತನೆ ಬೀಜ ಹೀಗೆ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗಿದೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದರು. ರೈತರ ಆದಾಯ ದ್ವಿಗುಣವಾಗಲಿಲ್ಲ. ಬದಲಿಗೆ ಅಗತ್ಯ ವಸ್ತುಗಳ ಬೆಲೆ ದ್ವಿಗುಣವಾಗಿದೆ ಎಂದು ಕುಟುಕಿದರು.

ಕರ್ನಾಟಕ ರಾಜ್ಯ ಸತತ ಎರಡು ಬರಗಾಲಕ್ಕೆ ತುತ್ತಾದಾಗ ನೆರವು ಕೇಳಿದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೆಪ ಹೇಳಿದರು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ನ್ಯಾಯ ಪಡೆದುಕೊಳ್ಳಬೇಕಾಯಿತು. ಕೋರ್ಟ್‌ ಹೇಳಿದ ನಂತರ ಹಣ ಬಿಡುಗಡೆಯ ಮಾತು ಹೇಳಿದ್ದಾರೆ ಎಂದು ಸಂಯುಕ್ತಾ ಪಾಟೀಲ ತರಾಟೆಗೆ ತೆಗೆದುಕೊಂಡರು.

ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಹಣ ಬಿಡುಗಡೆ ಮಾಡಿ ಎಂದು ರಾಜ್ಯದ ಸಿಎಂ, ಡಿಸಿಎಂ ಮನವಿ ಮಾಡಿದರೆ ಗ್ಯಾರಂಟಿ ಯೋಜನೆಗಳಿಗೆ ಬೊಕ್ಕಸ ಬರಿದು ಮಾಡಿ ದಿವಾಳಿಯಾಗಿ ಈಗ ನಮ್ಮ ಬಳಿ ಬಂದಿದ್ದೀರಿ ಎಂದು ಲಘುವಾಗಿ ಮಾತನಾಡಿದರು. ನಾವು ಕೇಂದ್ರ ಸರ್ಕಾರಕ್ಕೆ ಬಿಕ್ಷೆ ಕೇಳುತ್ತಿಲ್ಲ. ತೆರಿಗೆ ಪಾಲಿನ ನಮ್ಮ ಹಣ ಕೇಳುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಬರೆಯುವ ಕನಸು ನನ್ನದು. ರೈಲ್ವೆ ಯೋಜನೆ, ಕಳಸಾ-ಬಂಡೂರಿ ಯೋಜನೆ, ಯುಕೆಪಿ, ಜವಳಿ ಪಾರ್ಕ್‌ ಸ್ಥಾಪನೆಯ ಆಶಯ ನನ್ನದು. ಒಂದುಬಾರಿ ಅವಕಾಶ ಕೊಡಿ, ನಿಮ್ಮ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಸಂಯುಕ್ತ ಪಾಟೀಲ ಅವರನ್ನು ನಿಮ್ಮ ಉಡಿಗೆ ಹಾಕಿದ್ದೇವೆ. ಅವರನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದು ಎಂದು ಮತದಾರರಿಗೆ ಮನವಿ ಮಾಡಿದ ಅವರು, ಸಂಸತ್ತಿನಲ್ಲಿ ನಮ್ಮ ಸಮಸ್ಯೆಗಳಿಗೆ ಧ್ವನಿಯಾಗುವವರು ಬೇಕು. ಸಂಯುಕ್ತಾ ಪಾಟೀಲ ಅವರು ವಕೀಲರಾಗಿದ್ದು, ಅಪಾರ ಜ್ಞಾನ ಹೊಂದಿದ್ದಾರೆ. ಇಂಥವರು ಸಂಸತ್ತಿಗೆ ಆಯ್ಕೆಯಾಗಬೇಕು ಎಂದರು.

ಜಿಪಂ ಮಾಜಿ ಸದಸ್ಯ ಎಂ.ಆರ್. ಪಾಟೀಲ, ಎಂ.ಡಿ. ಯಲಿಗಾರ್, ಶಶಿಧರ್, ಎ.ಎಂ. ತಹಸೀಲ್ದಾರ್, ಬಸವರಾಜ ಡೊಳ್ಳಿನ, ಸಾವಕ್ಕ ಅಳಗುಂಡಿ, ಅನುರಾಧಾ ದೊಡ್ಡಮನಿ, ಮತ್ತಿತರರು ಉಪಸ್ಥಿತರಿದ್ದರು.