ದುರಾಡಳಿತ ಮುಚ್ಚಿಕೊಳ್ಳಲು ಕೋಮುಭಾವನೆ ಸೃಷ್ಟಿ

| Published : May 05 2024, 02:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಅಭಿವೃದ್ಧಿ ಪೂರಕ ಯೋಜನೆಗಳನ್ನು ಕೈಗೊಳ್ಳದೆ, ಸುಳ್ಳು ಭರವಸೆಗಳನ್ನು ನೀಡಿದ್ದಲ್ಲದೆ ತಮ್ಮ ಸರ್ಕಾರದ ದುರಾಡಳಿತ ಮುಚ್ಚಿಟ್ಟುಕೊಳ್ಳಲು ಬಿಜೆಪಿಯವರು ಹಿಂದೂ-ಮುಸ್ಲಿಂ ಎಂಬ ಕೋಮು ಭಾವನೆ ಮೂಡಿಸುತ್ತಿದ್ದಾರೆ. ಈ ಮೂಲಕ ಗಲಭೆ ಸೃಷ್ಟಿಸಿ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಬಿಜೆಪಿ ವಿರುದ್ಧ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಅಭಿವೃದ್ಧಿ ಪೂರಕ ಯೋಜನೆಗಳನ್ನು ಕೈಗೊಳ್ಳದೆ, ಸುಳ್ಳು ಭರವಸೆಗಳನ್ನು ನೀಡಿದ್ದಲ್ಲದೆ ತಮ್ಮ ಸರ್ಕಾರದ ದುರಾಡಳಿತ ಮುಚ್ಚಿಟ್ಟುಕೊಳ್ಳಲು ಬಿಜೆಪಿಯವರು ಹಿಂದೂ-ಮುಸ್ಲಿಂ ಎಂಬ ಕೋಮು ಭಾವನೆ ಮೂಡಿಸುತ್ತಿದ್ದಾರೆ. ಈ ಮೂಲಕ ಗಲಭೆ ಸೃಷ್ಟಿಸಿ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಬಿಜೆಪಿ ವಿರುದ್ಧ ಹರಿಹಾಯ್ದರು.

ತಾಲೂಕಿನ ತಂಗಡಗಿಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ವಿಜಯಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಅವರ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಮಹಿಳೆ ಸ್ವಾವಲಂಬಿಯಾಗಿ ಸಂಸಾರ ತಾನೇ ನಡೆಸಿಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಉತ್ತಮ ಜನಪರ ಆಡಳಿತ ನೀಡುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರದಿಂದ ಜನಸಾಮಾನ್ಯರಿಗೆ ಯಾವುದೇ ಗ್ಯಾರಂಟಿ ಕೊಡಲು ಸಾಧ್ಯವಿಲ್ಲದಿದ್ದರೂ, ಗ್ಯಾರಂಟಿ ಮೂಲಕ ಕಾಂಗ್ರೆಸ್‌ ಜನರನ್ನು ಸೋಮಾರಿಗಳನ್ನಾಗಿ ಮಾಡಿದೆ ಎಂದು ಟೀಕೆ ಮಾಡುತ್ತಿದೆ. ಸದ್ಯ ಕಾಂಗ್ರೆಸ್‌ ಪಕ್ಷಕ್ಕೆ ಜನರು ಬೆಂಬಲ ನೀಡುತ್ತಿರುವುದನ್ನು ಮನಗಂಡು ಹತಾಶೆ ಮನೋಭಾವದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಬಾಂಡ್‌ ಮೂಲಕ ₹9 ಸಾವಿರ ಕೋಟಿ ಲಂಚ ಪಡೆದುಕೊಂಡಿದ್ದಾರೆ. ಅದರ ಲೆಕ್ಕ ಕೊಡಿ ಎಂದರೆ ಬಾಂಡ್‌ ಮೂಲಕ ಪಡೆದ ಹಣದ ಬಗ್ಗೆ ಮಾಹಿತಿ ಕೊಡುತ್ತಿಲ್ಲ. ದೇಶದಲ್ಲಿನ ಯುವ ಜನಾಂಗಕ್ಕೆ ಉದ್ಯೋಗ ಕೊಡಲು ಸಾಧ್ಯವಾಗಲಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರು ಸಂಕಷ್ಟದಲ್ಲಿದ್ದಾರೆ. ಕಾರಣ ಜನರು ಬಿಜೆಪಿಯವರ ಪೊಳ್ಳು ಆಶ್ವಾಸನೆ ಹಾಗೂ ಭರವಸೆಗಳನ್ನು ನಂಬದೆ ಜನಪರವಾದ ಉತ್ತಮ ಆಡಳಿತ ನೀಡುವ ಕಾಂಗ್ರೆಸ್‌ ಬೆಂಬಲಿಸುವಂತೆ ಮನವಿ ಮಾಡಿದರು.

ವಿಜಯಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, 72 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ ಕೀರ್ತಿ ಕೇಂದ್ರದ ಕಾಂಗ್ರೆಸ್‌ ಸರ್ಕಾರಕ್ಕೆ ಸಲ್ಲುತ್ತದೆ. ಅಲ್ಲಿಂದ ಇಲ್ಲಿಯವರೆಗೆ ಯಾವ ಕೇಂದ್ರ ಸರ್ಕಾರಗಳು ರೈತರ ಸಾಲಮನ್ನಾ ಮಾಡಲು ಮನಸು ಮಾಡಲಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಹೊಣೆಗಾರಿಕೆ ಮರೆತು ಬಿಟ್ಟಿದೆ ಎಂದು ಆರೋಪ ಮಾಡಿದರು.

ಜಿಎಸ್‌ಟಿ ಮೂಲಕ ಕೇಂದ್ರಕ್ಕೆ ಸಂದಾಯವಾಗಿರುವ ಹಣವನ್ನು ಮರಳಿ ರಾಜ್ಯಕ್ಕೆ ಕೊಡದೇ, ಬರಗಾಲ ನಿರ್ವಹಣೆಗಾಗಿ ರೈತರಿಗೆ ಬರ ಪರಿಹಾರ ರೂಪದಲ್ಲಿ ಕೊಡಿ ಎಂದರೂ ಹಣ ಕೊಡುತ್ತಿಲ್ಲ. ಆದರೆ ದೇಶದಲ್ಲಿನ ಶ್ರೀಮಂತ ಬಂಡವಾಳಶಾಹಿಗಳಾದ ಅದಾನಿ, ಅಂಬಾನಿ ಸೇರಿದಂತೆ ಸುಮಾರು ೨೧ ಜನ ಶ್ರೀಮಂತರು ದೇಶಕ್ಕೆ ಕೊಡಬೇಕಾದ ₹14 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಮತ್ತು ಮಧ್ಯಮ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ಶಿವಶಂಕರಗೌಡ ಹಿರೇಗೌಡರ, ಶಾಂತಗೌಡ ಪಾಟೀಲ(ನಡಹಳ್ಳಿ), ಮಲ್ಲಿಕಾರ್ಜುನ ಮದರಿ, ಸಿ.ಬಿ.ಅಸ್ಕಿ, ರಾಯನಗೌಡ ತಾತಾರಡ್ಡಿ, ಹಣಮಂತ ಕುರಿ, ಅಪ್ಪು ನಾಡಗೌಡ, ವೈ.ಎಚ್.ವಿಜಯಕರ, ಮಲ್ಲಣ್ಣ ಅವರಾಧಿ, ಎಸ್.ಎಸ್.ಹುಲ್ಲೂರ, ರಾಜೇಂದ್ರ ರಾಯಗೊಂಡ, ಬಾಪುರಾಯ ದೇಸಾಯಿ(ಹಡಗಲಿ), ಸುರೇಶ ನಾಡಗೌಡ, ಶ್ರೀಶೈಲ ಮರೋಳ, ರಾಜುಗೌಡ ಕೊಂಗಿ, ಬಸವರಾಜ ಇಸ್ಲಾಂಪೂರ, ಅಶೋಕ ತಂಗಡಗಿ, ಜಿ.ಜಿ.ಮೋಟಗಿ, ಬಸವರಾಜ ತಾಳಿಕೋಟಿ, ಮುತ್ತು ದೇಸಣಗಿ, ಮಹಾಂತೇಶ ಹೊಳಿ, ಶಂಕ್ರಪ್ಪ ಹೊಳಿ, ಷಡಕ್ಷರಯ್ಯ ಹಿರೇಮಠ, ಸದ್ದಾಂ ಕುಂಟೋಜಿ ಸೇರಿದಂತೆ ಹಲವರು ಇದ್ದರು.

----------

ಕೋಟ್‌

ಮೋದಿಯವರ ಹಾಗೆ ಜಾತಿ- ಧರ್ಮಗಳ ಮಧ್ಯೆ ವೈಷಮ್ಯ ಸೃಷ್ಟಿಸಿ ಜನರ ದಾರಿ ತಪ್ಪಿಸಿಲ್ಲ. ಸುಳ್ಳು ಭರವಸೆಗಳನ್ನು ಕೊಟ್ಟಿಲ್ಲ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬ ಕಾರಣಕ್ಕೆ ನಮ್ಮ ದುಡಿಮೆಗೆ ಕೂಲಿ ರೂಪದಲ್ಲಿ ಮತ ನೀಡಿ ಎಂದು ಕೇಳುತ್ತಿದ್ದೇವೆ.

- ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ, ಕರ್ನಾಟಕ ರಾಜ್ಯ

ಸಾಬೂನು ಮತ್ತು ಮಾರ್ಜಕ ನಿಮಗದ ಅಧ್ಯಕ್ಷ

-------

ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರನ್ನು ಸಾಲ ಮುಕ್ತರನ್ನಾಗಿ ಮಾಡಲಾಗುತ್ತದೆ. ಕಳೆದ ಮೂರು ಬಾರಿ ವಿಜಯಪುರ ಜಿಲ್ಲೆಯ ಸಂಸದರಾಗಿರುವ ರಮೇಶ ಜಿಗಜಿಣಗಿಯವರಿಂದ ಜಿಲ್ಲೆಗೆ ಅವರ ಸಾಧನೇ ಶೂನ್ಯವಾಗಿದೆ. ಈ ಬಾರಿ ದೇಶದಲ್ಲಿ ಮೋದಿ ಹವಾ ಕಡಿಮೆಯಾಗಿದೆ. ಈಗ ಕಾಂಗ್ರೆಸ್‌ ಗಾಳಿ ಬೀಸುತ್ತಿದ್ದು, ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಿ.

- ರಾಜು ಆಲಗೂರ, ಕಾಂಗ್ರೆಸ್‌ ಅಭ್ಯರ್ಥಿ