ದಲಿತರು ಕಾಂಗ್ರೆಸ್‌ನ ಪಿಲ್ಲರ್‌ಗಳು: ಭೀಮನಾಯ್ಕ ಬಣ್ಣನೆ

| Published : May 05 2024, 02:12 AM IST

ದಲಿತರು ಕಾಂಗ್ರೆಸ್‌ನ ಪಿಲ್ಲರ್‌ಗಳು: ಭೀಮನಾಯ್ಕ ಬಣ್ಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಅತ್ಯಂತ ಕೀಳುಮಟ್ಟಕ್ಕೆ ಇಳಿದು ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ.

ಹಗರಿಬೊಮ್ಮನಹಳ್ಳಿ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮರೆತು, ಹಸಿ ಸುಳ್ಳುಗಳ ಮೂಲಕ ಮಹಿಳೆಯರ ಘನತೆಗೆ ಧಕ್ಕೆ ಬರುವಂತೆ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಕೆಎಂಎಫ್ ರಾಜ್ಯಾಧ್ಯಕ್ಷ ಎಸ್.ಭೀಮನಾಯ್ಕ ಹೇಳಿದರು.

ಪಟ್ಟಣದ ಅಶೋಕ ಫಾರಂ ಹೌಸ್‌ನಲ್ಲಿ ನಡೆದ ದಲಿತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಮೋದಿ ಅತ್ಯಂತ ಕೀಳುಮಟ್ಟಕ್ಕೆ ಇಳಿದು ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ದಲಿತ ಸಮುದಾಯದವರು ಯಾವಾಗಲೂ ಕಾಂಗ್ರೆಸ್‌ನ ಪಿಲ್ಲರ್‌ಗಳು. ೧೦ ವರ್ಷದ ಅಧಿಕಾರದ ಅವಧಿಯಲ್ಲಿ ದಲಿತ ಸಮಾಜದ ಪರ ಕೆಲಸ ಮಾಡಿದ್ದೇನೆ. ಪಟ್ಟಣದ ಚಿಂತ್ರಪಳ್ಳಿ ಬಳಿ ಬೃಹತ್ ಅಂಬೇಡ್ಕರ್ ಭವನ, ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣ ಮಾಡಲಾಗಿದೆ. ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ ಮಾಡುವುದರಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದೇನೆ. ಪ್ರತಿ ಹಳ್ಳಿಗೂ ಸುಸಜ್ಜಿತ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ₹೧೬೦ ಕೋಟಿ ಅನುದಾನದಲ್ಲಿ ಎಸ್‌ಸಿ, ಎಸ್‌ಟಿ, ಮೊರಾರ್ಜಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಶ್ರೀರಾಮುಲು ತಂಗಿ ಶಾಂತಾ ಸಂಸದರಾದಾಗ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಅಖಂಡ ಜಿಲ್ಲೆಯ ಮತದಾರರು ಪ್ರಬುದ್ಧ, ಪ್ರಾಮಾಣಿಕ ರಾಜಕಾರಣಿ ಆಯ್ಕೆಗೆ ತುದಿಗಾಲಲ್ಲಿ ನಿಂತಿದ್ದಾರೆ. ನಮ್ಮ ಅಭ್ಯರ್ಥಿ ತುಕಾರಾಂ ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ ಎಂದು ಬಣ್ಣಿಸಿದರು.

ದಲಿತ ಸಮಾಜದ ಹಿರಿಯ ಮುಖಂಡ ಹೆಗ್ಡಾಳ್ ರಾಮಣ್ಣ ಮಾತನಾಡಿ, ದಲಿತ ಸಮಾಜದ ಯುವಕರು ಜಾಗೃತರಾಗಬೇಕಿದೆ. ನಮ್ಮ ಸಮಾಜದ ಬಡವರಿಗೆ ಭೂಮಿ, ವಸತಿ ಸೌಲಭ್ಯ ಕೊಟ್ಟದ್ದು ಕಾಂಗ್ರೆಸ್ ಎಂಬುದನ್ನು ಮರೆಯಬಾರದು. ದೇಶಕ್ಕೆ ತುರ್ತು ಪರಿಸ್ಥಿತಿ ಬಂದಾಗ ದಲಿತರನ್ನು ಕಾಪಾಡಿದ್ದು ಕಾಂಗ್ರೆಸ್. ಮೋದಿ ಮೋದಿ ಎಂದು ಅರ್ಥವಿಲ್ಲದೇ ಕುಣಿಯುವ ಯುವಕರು ಇತಿಹಾಸ ಅರಿಯಬೇಕಿದೆ ಎಂದರು.

ಇದೇ ವೇಳೆ ಬಿಜೆಪಿ ಮುಖಂಡ ಪೂಜಾರ್ ಸಿದ್ದಪ್ಪ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಜಗಜೀವನ್‌ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ (ಲಿಡ್ಕರ್) ಅಧ್ಯಕ್ಷ ಮುಂಡ್ರಗಿ ನಾಗರಾಜ, ಕೆಪಿಸಿಸಿ ಸದಸ್ಯ ಎಲ್.ಮಾರೆಣ್ಣ, ಕೊಟ್ಟೂರು ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಪರುಶುರಾಮ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಕೀಲ ಕೋರಿ ಗೋಣಿಬಸಪ್ಪ, ಹಬೊಹಳ್ಳಿ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಆನಂದೇವನಹಳ್ಳಿ ಪ್ರಭಾಕರ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸೊನ್ನದ ಗುರುಬಸವರಾಜ, ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ, ನೂರ್ ಅಹಮದ್, ಚಿಂತ್ರಪಳ್ಳಿ ದೇವೇಂದ್ರ, ಪಪಂ ಸದಸ್ಯರಾದ ಜಗದೀಶ್, ವಸಂತ, ವಕೀಲರಾದ ಸತ್ಯನಾರಾಯಣ, ದುರುಗೇಶ್, ಮುಖಂಡರಾದ ಮೇಘರಾಜ, ಬಾಚಿಗೊಂಡನಹಳ್ಳಿ ಮಹೇಶ, ಬೆಣಕಲ್ ಪ್ರಕಾಶ್, ವರಲಹಳ್ಳಿ ಶಿವಕುಮಾರ, ವಿಷ್ಣು, ಹನುಮಂತ, ಕರಿಬಸವರಾಜ, ದೇವೇಂದ್ರ ಇತರರಿದ್ದರು. ಕಾರ್ಯಕ್ರಮವನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಹೆಗ್ಡಾಳ್ ಪರುಶುರಾಮ ನಿರ್ವಹಿಸಿದರು.