ಮುಳ್ಳಿನ ಗದ್ದುಗೆ ಸಿದ್ದಪಡಿಸಿದ ಹರಕೆ ಹೊತ್ತ ಭಕ್ತರು

| Published : May 06 2024, 12:37 AM IST

ಸಾರಾಂಶ

ತಾಲೂಕಿನ ಕಸಬ ಹೋಬಳಿ ತೊರೇಹಳ್ಳಿ ಗ್ರಾಮದಲ್ಲಿರುವ ರಾಮದೇವರ ದೇಗುಲದಲ್ಲಿ ಹರಕೆ ಹೊತ್ತ ಭಕ್ತರು ಮುಳ್ಳಿನ ಗದ್ದುಗೆ ಸಿದ್ದಪಡಿಸಿರುತ್ತಾರೆ. ರಾಮಪ್ಪ ದೇವರು ಮುಖವಾಡ ಹೊತ್ತ ಅರ್ಚಕರ ಕೈಯಲ್ಲಿ ಬೆತ್ತ ಹಾಗೂ ಚಾಟಿ ಗ್ರಾಮಸ್ಥರಿಗೆ ಚುರುಕು ಮುಟ್ಟಿಸುತ್ತದೆ.

ಕನ್ನಡಪ್ರಭ ವಾರ್ತೆ ​ಗುಬ್ಬಿ

ತಾಲೂಕಿನ ಕಸಬ ಹೋಬಳಿ ತೊರೇಹಳ್ಳಿ ಗ್ರಾಮದಲ್ಲಿರುವ ರಾಮದೇವರ ದೇಗುಲದಲ್ಲಿ ಹರಕೆ ಹೊತ್ತ ಭಕ್ತರು ಮುಳ್ಳಿನ ಗದ್ದುಗೆ ಸಿದ್ದಪಡಿಸಿರುತ್ತಾರೆ. ರಾಮಪ್ಪ ದೇವರು ಮುಖವಾಡ ಹೊತ್ತ ಅರ್ಚಕರ ಕೈಯಲ್ಲಿ ಬೆತ್ತ ಹಾಗೂ ಚಾಟಿ ಗ್ರಾಮಸ್ಥರಿಗೆ ಚುರುಕು ಮುಟ್ಟಿಸುತ್ತದೆ.

​ದೇಗುಲದಿಂದ ಮೆರವಣಿಗೆ ಮೂಲಕ ಹಾದು ಹೋಗುವ ರಾಮಪ್ಪ ದೇವರ ಮುಖವಾಡ ಧರಿಸಿದ ಅರ್ಚಕರು ಮಾರ್ಗಮಧ್ಯೆ ಹಲವು ಭಕ್ತರ ಮನೆಯಲ್ಲಿ ವಿಶೇಷ ಪೂಜೆ ಸ್ವೀಕರಿಸುತ್ತಾರೆ. ದಾರಿಯುದ್ದಕ್ಕೂ ಅರೇವಾದ್ಯ, ಡೋಲುವಾದ್ಯಕ್ಕೆ ತಕ್ಕಂತೆ ನರ್ತಿಸುತ್ತಾ ಸಾಗುವ ದೇವರನ್ನು ರೇಗಿಸುವ ಯುವಕ ಪಡೆ ಚಾಟಿ ಏಟಿಗೆ ಮೈವೊಡ್ಡಿ ನಿಲ್ಲುವರು. ​ಮೈ ಮೇಲೆ ಬಾಸುಂಡೆ ಬಂದರೂ ಲೆಕ್ಕಿಸದೆ ರಾಮಪ್ಪ ದೇವರನ್ನು ದಾರಿಯುದ್ದಕ್ಕೂ ರೇಗಿಸುವ, ಸಿಟ್ಟಿಗೆಬ್ಬಿಸುವ ಕಾಯಕವನ್ನು ಯುವಕರು ನಿರಂತರವಾಗಿ ಮಾಡುತ್ತಾರೆ.

ಈ ರೀತಿ ಮಾಡುವುದು ಒಳಿತನ್ನು ಬಯಸಿದಂತೆ ಎನ್ನುವ ಯುವಕರು ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಮುಳ್ಳಿನ ಗದ್ದುಗೆವರೆಗೆ ಮೆರವಣಿಗೆ ಮೂಲಕ ಬರುವ ದೇವರ ಸುತ್ತುಗಟ್ಟುವ ಗ್ರಾಮಸ್ಥರ ಪೈಕಿ ಮಹಿಳೆಯರು ಸಹ ರಾಮಪ್ಪ ದೇವರನ್ನು ರೇಗಿಸುವ ಕೆಲಸ ಮಾಡುವರು. ​ನಿಟ್ಟೂರು ಹೋಬಳಿಯ ಪತ್ರೆಮತ್ತಿಘಟ್ಟ ಗ್ರಾಮದಲ್ಲಿ ರಾಮದೇವರ ಮೂಲ ದೇಗುಲವಿದೆ. ಇಲ್ಲಿ ಹರಕೆ ಕೊಟ್ಟಿರುವ ಭಕ್ತರು ದಾಸೋಹ ವ್ಯವಸ್ಥೆ ಮಾಡುತ್ತಾರೆ. ಅದರೆ ತೊರೇಹಳ್ಳಿಯಲ್ಲಿರುವ ರಾಮಪ್ಪ ದೇವರ ದೇಗುಲದಲ್ಲಿ ಮುಖವಾಡವೇ ಮೂಲ ವಿಗ್ರಹವಾಗಿದೆ.

ಪೆಟ್ಟಿಗೆಯಲ್ಲಿರಿಸುವ ರಾಮಪ್ಪ ಮುಖವಾಡವನ್ನು ವರ್ಷದಲ್ಲಿ ಎರಡು ಬಾರಿ ಗೌರಿಹಬ್ಬ ಮತ್ತು ಮಾರಮ್ಮನಹಬ್ಬದಲ್ಲಿ ಮಾತ್ರ ಹೊರ ತೆಗೆಯಲಾಗುವುದು. ನಾಯಕ ಸಮುದಾಯದವರ ಸಾವಿನ ಮನೆಯಲ್ಲಿ ಸೂತಕ ಕಳೆಯಲು ಮತ್ತು ಹೆಣ್ಣು ಮಕ್ಕಳ ವಸಗೆ ಕಾರ್ಯಕ್ರಮದಲ್ಲಿ ಪೂಜೆಗೆ ಕೂಡ ರಾಮಪ್ಪ ದೇವರನ್ನು ಪೆಟ್ಟಿಗೆಯಿಂದ ಹೊರ ತರಲಾಗುವುದು.