ಯಕ್ಷಗಾನದಲ್ಲಿ ಹೊಸ ಪ್ರಯೋಗ ಮಾಡಿದ ಧಾರೇಶ್ವರರು: ಕೃಷ್ಣ ಯಾಜಿ ಬಳ್ಕೂರ

| Published : May 07 2024, 01:04 AM IST

ಯಕ್ಷಗಾನದಲ್ಲಿ ಹೊಸ ಪ್ರಯೋಗ ಮಾಡಿದ ಧಾರೇಶ್ವರರು: ಕೃಷ್ಣ ಯಾಜಿ ಬಳ್ಕೂರ
Share this Article
  • FB
  • TW
  • Linkdin
  • Email

ಸಾರಾಂಶ

28 ವರ್ಷಗಳ ಸುದೀರ್ಘ ಅವಧಿಯ ಮೇಳದ ಮುಖ್ಯ ಭಾಗವತರಾಗಿ ಮುನ್ನಡೆಸಿದ ಕೀರ್ತಿ ಇವರದಾಗಿದ್ದು, ಯಕ್ಷರಂಗಕ್ಕೆ ಧಾರೇಶ್ವರ ಅವರ ಕೊಡುಗೆ ಅಪಾರ ಎಂದು ಕೃಷ್ಣ ಯಾಜಿ ಬಳ್ಕೂರ ತಿಳಿಸಿದರು.

ಗೋಕರ್ಣ: ಹಿರಿಯ ಕಲಾವಿದರಿಗೆ ಗೌರವ ನೀಡಿ ಕಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಯಕ್ಷಗಾನದಲ್ಲಿ ಹೊಸ ಪ್ರಯೋಗವನ್ನು ಯಶಸ್ವಿಯಾಗಿಸಿ ಯಕ್ಷ ರಂಗದಲ್ಲಿ ಹೊಸ ದಿಕ್ಕು ತೋರಿಸಿದವರು ಸುಬ್ರಹ್ಮಣ್ಯ ಧಾರೇಶ್ವರರು ಎಂದು ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ ಬಳ್ಕೂರ ತಿಳಿಸಿದರು.

ಇತ್ತೀಚೆಗೆ ನಿಧನರಾದ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಇಲ್ಲಿನ ಯಂಗಸ್ಟಾರ್ ಕ್ಲಬ್ ವತಿಯಿಂದ ಧಾರೇಶ್ವರ ಶ್ರದ್ಧಾಂಜಲಿ ಯಕ್ಷತರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿ, 28 ವರ್ಷಗಳ ಸುದೀರ್ಘ ಅವಧಿಯ ಮೇಳದ ಮುಖ್ಯ ಭಾಗವತರಾಗಿ ಮುನ್ನಡೆಸಿದ ಕೀರ್ತಿ ಇವರದಾಗಿದ್ದು, ಯಕ್ಷರಂಗಕ್ಕೆಇವರ ಕೊಡುಗೆ ಅಪಾರ ಎಂದರು.

ಹಾಸ್ಯ ಕಲಾವಿದ ರಮೇಶ ಭಂಡಾರಿ ಮಾತನಾಡಿ, ಅದೆಷ್ಟೂ ಕಲಾವಿದರ ಬದುಕಿಗೆ ಬೆಳಕಾದವರು ಧಾರೇಶ್ವರ ಭಾಗವತರು. ನಮ್ಮ ಬಾಳಿಗೆ ದಾರಿ ತೋರಿದವರನ್ನು ಇಂದಿನ ದಿನದಲ್ಲಿ ಮರೆಯುತ್ತಿರುವುದು ಹೆಚ್ಚಾಗಿದೆ ಎಂದು ವಿಷಾದಿಸಿದ ಅವರು, ತನಗೆ ಅನ್ನ ನೀಡಿದ ಈ ಹಿರಿಯ ಚೇತನಕ್ಕೆ ತಾನು ಚಿರಋಣಿ ಎಂದು ಭಾವುಕರಾದರು.

ತೀರ್ಥಹಳ್ಳಿಯ ಹಿರಿಯ ಕಲಾವಿದ ಗೋಪಾಲ ಆಚಾರ್ಯ ಮಾತನಾಡಿ, ಯಕ್ಷಗಾನದಲ್ಲಿ ಹೊಸ ಕಲ್ಪನೆಯನ್ನು ಕಾರ್ಯರೂಪಕ್ಕೆ ತಂದವರು ಧಾರೇಶ್ವರರು ಎಂದ ಅವರು, ತಮ್ಮ ಒಡನಾಟದ ದಿನಗಳ ನೆನಪನ್ನು ಹಂಚಿಕೊಂಡರು.

ಹಿರಿಯ ಯಕ್ಷಗಾನ ಕಲಾವಿದ ಅನಂತ ಹಾವಗೋಡಿ ಮಾತನಾಡಿ, ಇಲ್ಲೆ ಹುಟ್ಟಿ ಬೆಳೆದು ಅಂದಿನ ದಿನದಲ್ಲಿ ಒಟ್ಟಿಗೆ ಸಂಗೀತಾಭ್ಯಾಸ, ನಾಟಕಗಳ ಮೂಲಕ ಜತೆಯಾಗಿ ಕಳೆದ ದಿನಗಳನ್ನು ವಿವರಿಸಿ, ಎಲೆಕ್ಟ್ರಿಷಿಯನ್ ಕೆಲಸದಿಂದ ಪ್ರಸಿದ್ಧ ಯಕ್ಷಗಾನ ಭಾಗವತರಾದ ಬಗೆಯನ್ನು ತಿಳಿಸಿದರು.

ಯಂಗಸ್ಟಾರ್ ಕ್ಲಬ್‍ನ ಹಿರಿಯ ಸದಸ್ಯ ವೇ. ದತ್ತಾತ್ರೇಯ ಹಿರೇಗಂಗೆ ಮಾತನಾಡಿ, ಯಕ್ಷ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಪುಣ್ಯ ಕ್ಷೇತ್ರದ ಹಿರಿಮೆ ಹೆಚ್ಚಿಸಿದವರು ಧಾರೇಶ್ವರ ಭಾಗವತರು ಎಂದರು.

ಭಾಗವತರಾದ ವಿ. ಗಣಪತಿ ಭಟ್, ಸ್ತ್ರೀ ವೇಷಧಾರಿ ಸುಬ್ರಹ್ಮಣ್ಯ ಯಲಗುಪ್ಪಾ, ಯಂಗಸ್ಟಾರ್ ಕ್ಲಬ್‍ನ ವೇ. ನಾಗರಾಜ ಜೋಗ ಭಟ್ ಮಾತನಾಡಿದರು.

ಯಂಗ್ ಸ್ಟಾರ್ ಕ್ಲಬ್ ಅಧ್ಯಕ್ಷ ನಾಗಕುಮಾರ ಗೋಪಿ, ಅನಂತ ಅಡಿ, ಶಂಕರ ಗೋಪಿ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಸುಬ್ರಹ್ಮಣ್ಯ ಯಲಗುಪ್ಪಾ ಹಾಗೂ ವಿ. ಗಣಪತಿ ಭಟ್‍ ಅವರಿಂದ ಯಕ್ಷಗಾನದ ಪದ್ಯ ಮೂಲಕ ಗಾನ ನಮನ ಸಲ್ಲಿಸಲಾಯಿತು. ಅದರಂತೆ ದಿ. ಸುಬ್ರಹ್ಮಣ್ಯ ಧಾರೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.

ನಂತರ ನಡೆದ ಕೃಷ್ಣಾರ್ಜುನ ಯಕ್ಷಗಾನ ಪ್ರದರ್ಶನ ನೆರೆದಿದ್ದ ಅಪಾರ ಸಂಖ್ಯೆಯ ಜನರನ್ನು ಮನರಂಜಿಸಿತು. ರಾಮಕೃಷ್ಣ ಹಿಲ್ಲೂರು, ವಿ. ಗಣಪತಿ ಭಟ್ ಭಾಗತಿಕೆಯಲ್ಲಿ ಪ್ರಖ್ಯಾತ ಕಲಾವಿದರಾದ ಕೃಷ್ಣಯಾಜಿ ಬಳ್ಳೂರು, ಗೋಪಾಲ ಆಚಾರ್ಯ ತೀರ್ಥಹಳ್ಳಿ, ಅನಂತ ಹಾವಗೋಡಿ, ಶಂಕರ ನೀಲ್ಕೋಡು, ರಮೆಶ ಭಂಡಾರಿ, ಮತ್ತಿತರ ಕಲಾವಿದರು ತಮ್ಮ ಮನೋಜ್ಞ ಅಭಿನಯದಲ್ಲಿ ಎಲ್ಲರ ಗಮನ ಸೆಳೆದರು.