ಸಾಧನೆಗೆ ಶಿಕ್ಷಣವೇ ಅಡಿಪಾಯ: ನಾಗಮ್ಮ

| Published : May 07 2024, 01:03 AM IST

ಸಾರಾಂಶ

ರಾಮನಗರ: ವ್ಯಾಸಂಗದ ಅವಧಿಯಲ್ಲಿ ಸುಖ ಬಯಸದೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಸುಖ ಜೀವನ ನಡೆಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗಮ್ಮ ಹೇಳಿದರು.

ರಾಮನಗರ: ವ್ಯಾಸಂಗದ ಅವಧಿಯಲ್ಲಿ ಸುಖ ಬಯಸದೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಸುಖ ಜೀವನ ನಡೆಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗಮ್ಮ ಹೇಳಿದರು.

ನಗರದ ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಸಾಧನೆ ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ. ಯಾರಲ್ಲಿ ಶ್ರದ್ಧೆ ಇರುತ್ತದೋ ಅವರು ಶಿಕ್ಷಣದಲ್ಲಿ ಉನ್ನತಿ ಸಾಧಿಸಬಹುದು. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ, ಪ್ರಾಂಶುಪಾಲರ, ಅಧಿಕಾರಿಗಳ, ಪಾಲಕರ ಪಾತ್ರ ದೊಡ್ಡದಿರುತ್ತದೆ ಎಂದು ತಿಳಿಸಿದರು.

ಈ ಹಿಂದೆ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯಲು ಉತ್ತಮ ಅವಕಾಶಗಳಿರಲಿಲ್ಲ. ಈಗ ಕಾಲ ಬದಲಾಗಿದ್ದು ಹೆಣ್ಣುಮಕ್ಕಳಿಗೆ ಅತ್ಯುನ್ನತ ಶಿಕ್ಷಣ ಸಿಗುತ್ತಿದೆ. ಸಮಾಜದಲ್ಲಿ ಮಹಿಳೆಯರು ಇಂದು ಉನ್ನತ ಸ್ಥಾನಮಾನ ಪಡೆದಿದ್ದಾರೆ. ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವ ನೀವು ಮುಂದೆ ಏನು ಮಾಡಬೇಕು ಎಂಬುದನ್ನು ಚೆನ್ನಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಜಗತ್ತಿನಲ್ಲಿ ಜಾತಿ ಧರ್ಮ ಪಂಥ ಮೀರಿದ್ದು ಶಿಕ್ಷಣ. ಸಾರ್ವಜನಿಕರ ಬದುಕಿನಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಶಿಕ್ಷಣ ಕಲಿಸುತ್ತದೆ. ಶಿಕ್ಷಣದಿಂದಲೇ ಇಂದು ಜಗತ್ತು ಇಷ್ಟೊಂದು ಮುಂದುವರೆದಿದೆ. ಶಿಕ್ಷಣ ಸಂಸ್ಥೆಗಳು ಜಗತ್ತಿನ ದೇವಾಲಯಗಳಿದ್ದಂತೆ. ಕೈಹಿಡಿದು ನಡೆಸುವ ಶಕ್ತಿ ಶಿಕ್ಷಣಕ್ಕೆ ಇದೆ. ಮಾನಸಿಕ ಬೆಳವಣಿಗೆ ಶಿಸ್ತು, ಸಂಯಮ ಕಲಿಸುವ ಜೊತೆಗೆ ವಿದ್ಯಾರ್ಥಿ ಜೀವನವನ್ನು ಸುಂದರವಾಗಿಸುತ್ತದೆ. ವಿದ್ಯಾರ್ಥಿಗಳು ದಿನದ 24 ಗಂಟೆಗಳಲ್ಲಿ ಕನಿಷ್ಠ 12 ಗಂಟೆಯಾದರೂ ಓದಬೇಕು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಿದರೆ ಮುಂದೆ ಉನ್ನತ ಸ್ಥಾನಮಾನಗಳು ಕೈಬೀಸಿ ಕರೆಯುತ್ತವೆ. ವಿದ್ಯಾರ್ಥಿಗಳು ಮುಂದೆ ಮತ್ತಷ್ಟು ಸಾಧನೆ ಮಾಡಿ ಉತ್ತಮ ವಿದ್ಯಾಬ್ಯಾಸ ಕೈಗೊಂಡು ತಮ್ಮ ಶಾಲಾ ಕಾಲೇಜು ಗ್ರಾಮ ಹೆತ್ತ ತಂದೆ ತಾಯಿಗಳಿಗೆ ಕೀರ್ತಿ ತನ್ನಿ ಎಂದರು.

ಗೌಸಿಯಾ ತಾಂತ್ರಿಕ, ಶೈಕ್ಷಣಿಕ ಟ್ರಸ್ಟ್ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ ಖಾನ್ ಮಾತನಾಡಿ, ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿ ಉತ್ತಮ ಸಾಧಕರಾಗಲು ಪ್ರೋತ್ಸಾಹಿಸುತ್ತಾ ಬರುತ್ತಿದೆ. ಶೃದ್ಧೆ, ವಿನಯ, ಭಯ, ಭಕ್ತಿಯಿಂದ ಶಿಕ್ಷಣ ಪಡೆದಾಗ ಜೀವನದಲ್ಲಿ ಯಶಸ್ಸು ನಮ್ಮದಾಗುತ್ತದೆ. ಇಂದಿನ ಯುವ ಸಮುದಾಯ ಉತ್ತಮ ಆಲೋಚನೆ ಮಾಡಿ ಉನ್ನತ ಶಿಕ್ಷಣ ಪಡೆದು ದೇಶಕ್ಕೆ ಹೆಮ್ಮೆ ತರಬೇಕು. ಶಿಕ್ಷಣ ಪಡೆಯುವಾಗ ನಿಮ್ಮಲ್ಲಿ ಗುರಿ ಇರಲಿ. ಆ ಗುರಿ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

ಗೌಸಿಯಾ ಪಿಯು ಕಾಲೇಜು ಪ್ರಾಂಶುಪಾಲ ನಜರುಲ್ಲಾಖಾನ್ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪದವಿಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದ 64 ವಿದ್ಯಾರ್ಥಿಗಳಿಗೆ, ಕಾಲೇಜು ಮುಖ್ಯಸ್ಥರಿಗೆ ಮಕ್ಕಳ ಪಾಲಕರಿಗೆ ಗೌಸಿಯಾ ಕಾಲೇಜು ವತಿಯಿಂದ ಇಂದಿನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಇದು ನಮ್ಮ ಸಂಸ್ಥೆಯ ಗೌರವಕ್ಕೆ ಸಾಕ್ಷಿಯಾಗಿದೆ ಎಂದರು.

ಗೌಸಿಯಾ ಸಂಸ್ಥೆ ಅಧ್ಯಕ್ಷ ಡಾ. ಅಹಮದ್ ಷರೀಫ್ ಸಿರಾಜ್, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಜಾಹಿರ್ ಹಸನ್ ಮತ್ತಿತರರು ಉಪಸ್ಥಿತರಿದ್ದರು.

6ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ಪಿಯು ಕಾಲೇಜು ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಅತಿಥಿಗಳೊಂದಿಗೆ ಇರುವುದು.