ಎಲ್ಹೇರಿ ಗಂಗಾಧರ ಶ್ರೀಗಳ ಕಾರ್ಯ ಅನನ್ಯ: ಶಾಸಕ ಕಂದಕೂರು

| Published : May 19 2024, 01:46 AM IST

ಎಲ್ಹೇರಿ ಗಂಗಾಧರ ಶ್ರೀಗಳ ಕಾರ್ಯ ಅನನ್ಯ: ಶಾಸಕ ಕಂದಕೂರು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಗುರು ಪರಂಪರೆಯು ಮಾನವನ ಬದುಕಿಗೆ ಸನ್ಮಾರ್ಗವನ್ನು ತೋರುತ್ತಾ ಬಂದಿದೆ. ಸತ್ಸಂಗ, ಪ್ರವಚನಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಭಾರತದಲ್ಲಿ ಗುರು ಪರಂಪರೆಯು ಮಾನವನ ಬದುಕಿಗೆ ಸನ್ಮಾರ್ಗವನ್ನು ತೋರುತ್ತಾ ಬಂದಿದೆ. ಸತ್ಸಂಗ, ಪ್ರವಚನಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ವಾರಣಾಸಿ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀಗುರು ಕೊಟ್ಟೂರೇಶ್ವರರ 51ನೇ ಪುಣ್ಯ ಆರಾಧನಾ ಮಹೋತ್ಸವ ಹಾಗೂ ತ್ರಿಕಾಲ ಇಷ್ಟಲಿಂಗ ತಪೋಭೂಷಣ, ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಲಿಂ. ಗಂಗಾಧರ ಶಿವಾಚಾರ್ಯರ 2ನೇ ವರ್ಷದ ಪುಣ್ಯ ಆರಾಧನಾ ಮಹೋತ್ಸವದ ಅಂಗವಾಗಿ ಲಿಂ. ಶ್ರೀಗುರು ಗಂಗಾಧರ ಶ್ರೀಗಳ ಜೀವನ ದರ್ಶನ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ನಾಡಿಗೆ ಮಠ-ಮಂದಿರಗಳ ಕೊಡುಗೆ ಅಪಾರವಾಗಿದೆ. ಅಕ್ಷರ-ಅನ್ನದ ಜೋತೆಗೆ ಉತ್ತಮ ಸಂಸ್ಕಾರವನ್ನು ಮೂಡಿಸುವ ಕಾರ್ಯದಲ್ಲಿ ಇಲ್ಲಿನ ಮಠಮಾನ್ಯಗಳು ಖ್ಯಾತಿಯನ್ನು ಪಡೆದಿವೆ. ಈ ಭಾಗದ ಪ್ರಮುಖ ಮಠವಾದ ಎಲ್ಹೇರಿ ವಾರಣಾಸಿ ಹಿರೇಮಠದ ಹಿರಿಯ ಪೂಜ್ಯರಾದ ಲಿಂ. ಗಂಗಾಧರ ತಾತನವರು ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದರು.

ತಮ್ಮ ಇಡೀ ಜೀವನವನದ ಸಮಯವನ್ನು ನಿರಾಡಂಬರಾಗಿ ಪೂಜಾ ಪಾಠದಲ್ಲಿ ತೊಡಗಿ ಜನರನ್ನು ಸಂಸ್ಕಾರವಂತರನ್ನಾಗಿಸುವಲ್ಲಿ ಕಳೆದಿದ್ದಾರೆ. ಪೂಜ್ಯರು ತ್ರಿಕಾಲ ಪೂಜಾನಿಷ್ಠರಾಗಿ, ಮಹಾತಪಸ್ವಿಗಳಾಗಿ ಕರ್ನಾಟಕ, ಆಂದ್ರ ಮತ್ತು ತೆಲಗಾಂಣದಲ್ಲಿ ಪ್ರಮುಖ ಮಠಗಳನ್ನು ಸ್ಥಾಪಿಸಿ, ಜನತೆಗೆ ಧರ್ಮಭೋದೆಯನ್ನು ಮಾಡಿದ್ದಾರೆ, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಗಳ ಕಾರ್ಯ ಅನನ್ಯವಾದ್ದು. ಯಾವತ್ತೂ ಎಲ್ಹೇರಿ ವಾರಣಾಸಿ ಮಠದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದೇನೆ ಎಂದರು.

ಸಾನಿಧ್ಯ ವಹಿಸಿದ್ದ ವರಣಾಸಿ ಹಿರೇಮಠ ಎಲ್ಹೇರಿಯ ಕೊಟ್ಟೂರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿ, ಲಿಂ. ಗಂಗಾಧರ ತಾತನವರು ಮಹಾಮಹಿಮರು, ಅವರ ಸುದೀರ್ಘ ಜೀವನದಲ್ಲಿ ಅನೇಕ ಪವಾಡಗಳನ್ನು ಮಾಡಿದ್ದಾರೆ, ಮಹಾತ್ಮರ-ಸಂತರ ಚರಿತ್ರೆಯನ್ನು ತಿಳಿದುಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಪೂಜ್ಯರ ಬದುಕು-ವಿಚಾರ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಅವರು ಹಾಕಿದ ಸನ್ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದರು.

ಶ್ರೀಗುರು ಕೊಟ್ಟೂರೇಶ್ವರ ಮಠ ಹರ್ಲಾಪುರದ ಶ್ರೀ ಅಭಿನವ ಡಾ. ಕೊಟ್ಟೂರೇಶ್ವರ ಮಹಾಸ್ವಾಮೀಜಿಗಳು ಲಿಂ. ಗುರುಗಂಗಾಧರ ಶ್ರೀಗಳ ಜೀವನ ದರ್ಶನ ಪುರಾಣ ಪ್ರವಚನ ಆರಂಭಿಸಿದರು.

ಅಂಬರೀಶ ನಗನೂರ, ಬಸವರಾಜ ಹಿರೇಮಠ ನಾಗಡದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಈ ವೇಳೆ ಡಾ. ವೀರಭದ್ರಪ್ಪ ಶಿವರಾಯ ಎಲ್ಹೇರಿ, ಬಸವರಾಜ ಎನ್. ಕಣೇಕಲ್, ಬಸನಶಂಕರಸ್ವಾಮಿ ಶಂಕರನೋರ್, ಸುಭಾಷೌಡ ಕಂದಕೂರ, ಮಲ್ಲಕಾರ್ಜುನಗೌಡ ಇಟಗಿ ಕಂದಕೂರ, ಸೂಗಪ್ಪ ಪಾಟೀಲ್ ಗಣಪೂರ್, ವಿಷ್ಣುಕಾಂತಗೌಡ ಗಣಪೂರ, ಮಲ್ಲಿಕಾರ್ಜುನ ಅರುಣಿ ಗಾಜರಕೋಟ ಸೇರಿದಂತೆ ಅನೇಕರು ಇದ್ದರು.

ಮೇ 21ರಂದು ಪುಣ್ಯಾರಾಧನೆ, ಪುರಾಣ ಮಹಾಮಂಗಲ: ಮೇ 21ರಂದು ಎಲ್ಹೇರಿ ಗ್ರಾಮದ ವಾರಣಾಸಿ ಹಿರೇಮಠದಲ್ಲಿ ಲಿಂ. ಕೊಟ್ಟೂರೇಶ್ವರ, ಲಿಂ. ಗಂ ಗಾಧರ ಶ್ರೀಗಳ ಪುಣ್ಯಾರಾಧನೆ ನಿಮಿತ್ತವಾಗಿ ನಡೆದ ಪುರಾಣವು ಸಂಜೆ 5.30ಕ್ಕೆ ಮಹಾ ಮಂಗಲಗೊಳ್ಳುವುದು. ಇದಕ್ಕೂ ಮುಂಚೆ ಬೆಳಿಗ್ಗೆ 7ಗಂಟೆಗೆ ಉಭಯ ಪೂಜ್ಯರ ಗದ್ದುಗೆಗೆ ಮಹಾರಾರುದ್ರಾಬಿಷೇಕ, ಮಧ್ಯಾಹ್ನ 12 ಗಂಟೆಗೆ 101 ಮುತೈದೆಯರಿಗೆ ಊಡಿತುಂಬುವ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ಪಲ್ಲಕ್ಕಿ ಮೆರವಣಿಗೆಯು ಪುರವತರ ಕುಣಿತ ನಂದಿಕೋಲು ಸೇವೆ ಮಂಗಳವಾದ್ಯಗಳೊಂದಿಗೆ ನೆರವೇರುವುದು.

ಸಂಜೆ ನಡೆಯುವ ಧರ್ಮಸಭೆಯಲ್ಲಿ ಸೇಡಂ ಶಿವಶಂಕರೇಶ್ವರ ಶ್ರೀಗಳು, ಮಳಖೇಡದ ಅಭಿನವ ಕಾರ್ತಿಕೇಶ್ವರ ಶ್ರೀಗಳು, ಕೊತ್ತಲ ಬಸವೇಶ್ವರ ಸದಾಶಿವ ಶ್ರೀಗಳು, ಸಾನಿಧ್ಯವಹಿಸಿಲಿದ್ದಾರೆ.

ಸಚಿವ ಶರಣಪ್ರಕಾಶ ಪಾಟೀಲ್, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ನ್ಯಾಯವಾದಿ ಎಸ್ ಬಿ ಪಾಟೀಲ, ಕಲ್ಯಾಣಪ್ಪ ಪಾಟೀಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಎಲ್ಹೇರಿ-ಮಳಖೇಡ ಉಭಯ ಮಠದ ಪೂಜ್ಯರಾದ ಕೊಟ್ಟೂರೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.