ನಾಲಿಗೆ ಹರಿಬಿಡುವವರ ವಿರುದ್ಧ ಹೋರಾಟ: ಬ್ರಾಹ್ಮಣ ಮಹಾಸಂಘ ನಿರ್ಧಾರ

| Published : May 06 2024, 12:33 AM IST

ಸಾರಾಂಶ

ಬ್ರಾಹ್ಮಣ ಸಮಾಜದ ಅವಹೇಳನ ಸಹಿಸಲ್ಲ, ಹೋರಾಟಕ್ಕೆ ಅಣಿ ಆಗ್ತೇವೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ನೂತನ ಜಿಲ್ಲಾಧ್ಯಕ್ಷ ರಮೇಶ ಕುಲಕರ್ಣಿಅಧ್ಯಕ್ಷತೆಯಲ್ಲಿ ನಡೆದ ಸಮಾಜದ ಸಮಾಲೋಚನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಬ್ರಾಹ್ಮಣರ ಬಗ್ಗೆ ಕೆಲವರು ಅನಗತ್ಯವಾಗಿ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಅವಹೇಳನಕಾರಿ ಪದಗಳನ್ನು ಬಳಸಿ ಸಮಾಜದ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ. ವಿನಾ ಕಾರಣ ಸಮಾಜದ ವಿರುದ್ಧ ಹೇಳಿಕೆ ಕೊಡುವವರಿಗೆ ತಕ್ಕ ಪಾಠ ಕಲಿಸಲು, ಕಾನೂನಾತ್ಮಕ ಹೋರಾಟ ಸೇರಿದಂತೆ ಬೀದಿಗಿಳಿದು ಸಹ ಹೋರಾಟ ಮಾಡುವುದಕ್ಕೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾ ಘಟಕ ನಿರ್ಧರಿಸಿದೆ.

ಶನಿವಾರ ನಗರದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ನೂತನ ಜಿಲ್ಲಾಧ್ಯಕ್ಷ ರಮೇಶ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಮಾಲೋಚನಾ ಸಭೆಯಲ್ಲಿ ಜರುಗಿ, ವೇದಿಕೆ ಸಿಕ್ಕರೆ ಕೆಲವರು ಬ್ರಾಹ್ಮಣರ ಬಗ್ಗೆ ಕೀಳಾಗಿ ಮಾತನಾಡುವ, ನಿಂದಿಸುವ ಕೆಟ್ಟ ಚಾಳಿ ಹಾಕಿಕೊಂಡಿದ್ದಾರೆ. ಇಂಥವರಿಗೆ ಪಾಠ ಕಲಿಸಲು ಮಹಾಸಂಘದ ಸಾರಥ್ಯದಲ್ಲಿ ಸೈದ್ಧಾಂತಿಕ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಮೇಶ ಕುಲಕರ್ಣಿ, ಬ್ರಾಹ್ಮಣ ಮಹಾಸಂಘದ ಸಂಘಟನೆ ಜಿಲ್ಲೆಯಲ್ಲಿ ತಳಮಟ್ಟದಿಂದ ಬಲಪಡಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಶೀಘ್ರವೇ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಿಸಲಾಗುವುದು. ಬಳಿಕ ಎಲ್ಲ ತಾಲೂಕು ಘಟಕ ರಚಿಸಿ, ನಂತರ ಹೋಬಳಿ ಮಟ್ಟಕ್ಕೂ ಸಂಘಟನೆ ವಿಸ್ತರಿಸಲಾಗುವುದು ಎಂದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಪ್ರತಿ ವರ್ಷ ಸರ್ಕಾರ 100 ಕೋಟಿ ರು. ಅನುದಾನ ಕಲ್ಪಿಸಿ, ಸಮಾಜದವರ ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಕಾಲಮಿತಿ ಯೋಜನೆ ಹಾಕಿಕೊಳ್ಳಬೇಕು. ಜಿಲ್ಲಾ ಕೇಂದ್ರದಲ್ಲಿ ನಿಗಮದ ಪ್ರತ್ಯೇಕ ಕಚೇರಿ, ಅಧಿಕಾರಿಗೆ ನಿಯೋಜಿಸಿ ವಿವಿಧ ಯೋಜನೆಗಳ ಲಾಭ ಸಮಾಜದವರಿಗೆ ಮುಟ್ಟಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನ್ಯಾಯವಾದಿ ನರೇಶ ಪಾಠಕ್ ಮಾತನಾಡಿ, ನಮ್ಮ ಸಂಘಟನೆ ಶೂನ್ಯಕ್ಕೆ ಸಮಾನವಿರುವ ಕಾರಣ ಸಿಕ್ಕಸಿಕ್ಕವರು ಸಮಾಜಕ್ಕೆ ಟೀಕಿಸುವ ಮಟ್ಟಕ್ಕೆ ಬಂದಿದ್ದಾರೆ. ನಾವು ಒಗ್ಗಟ್ಟು ಪ್ರದರ್ಶಿಸಿ, ವಿನಾಕಾರಣ ನಮ್ಮನ್ನು ನಿಂದಿಸಿ ಸಮಾಜದ ಭಾವನೆಗೆ ಧಕ್ಕೆ ತರುವವರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದು ಅನಿವಾರ್ಯ. ಒಂದು ಸಮಾಜಕ್ಕೆ ತುಚ್ಛವಾಗಿ ಕಂಡು ಟೀಕಿಸಿ ಹೀಯಾಳಿಸುವುದು, ಅವರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಕ್ಕನ್ನು ಸಂವಿಧಾನವು ಯಾರಿಗೂ ನೀಡಿಲ್ಲ ಎಂದರು.

ಸಮಾಜದ ಪ್ರಮುಖರಾದ ಚಂದ್ರಕಾಂತ ಕುಲಕರ್ಣಿ, ಹೇಮಲತಾ ಜೋಶಿ, ರಾಜೇಶ ಕುಲಕರ್ಣಿ, ಡಾ. ಮಹೇಶ ಪತಗಿ, ಗೋಪಾಲ ಕುಲಕರ್ಣಿ, ಮಾಣಿಕರಾವ್‌ ಕುಲಕರ್ಣಿ, ಉಮೇಶ ಕುಲಕರ್ಣಿ ತಾಳಮಡಗಿ, ಸತೀಶ ಕುಲಕರ್ಣಿ ಕೊಳಾರ್, ಸುನೀಲ ಪಾಟೀಲ್, ಪ್ರಭಾಕರ ಕುಲಕರ್ಣಿ, ದಿನಕರ ಕುಲಕರ್ಣಿ ಇತರರು ಮಾತನಾಡಿ, ಬ್ರಾಹ್ಮಣ ಮಹಾಸಂಘಕ್ಕೆ ಶಕ್ತಿ ತುಂಬಲು ಎಲ್ಲರೂ ಒಂದಾಗುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ. ಉತ್ತಮ ವ್ಯಕ್ತಿತ್ವ, ಸಮಾಜಪರ ಚಿಂತನೆಯುಳ್ಳ ರಮೇಶ ಕುಲಕರ್ಣಿ ನೇತೃತ್ವದಲ್ಲಿ ಬೀದರ್ ಸಂಘ ರಾಜ್ಯದಲ್ಲೇ ಮಾದರಿಯಾಗಿ ಮಾಡುವುದಕ್ಕೆ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಹೇಳಿದರು.

ಪ್ರಮುಖರಾದ ಭೀಮಸೇನರಾವ್‌ ಕಾನಿಹಾಳ, ದೀಪಕ ಮನ್ನಳ್ಳಿ ಸೇರಿದಂತೆ ಇತರರಿದ್ದರು. ಸಮಾಜದ ಹಲವರು ಪಾಲ್ಗೊಂಡು ಸಲಹೆ-ಸೂಚನೆ ನೀಡಿದರು. ಪ್ರತಿ ತಿಂಗಳು ಕಡ್ಡಾಯ ಸಮಾಜದ ಎಲ್ಲರೂ ಸೇರಿ ಸಭೆ ನಡೆಸಲು ತೀರ್ಮಾನಿಸಲಾಯಿತು.

ಬೀದರ್ ಜಿಲ್ಲೆಯಲ್ಲಿ ಬ್ರಾಹ್ಮಣರು 40 ಸಾವಿರ ಮತದಾರರಿದ್ದೇವೆ. ಆದರೆ ಸಂಘಟನೆ ಬಲ ಪ್ರದರ್ಶಿಸದ ಕಾರಣಕ್ಕೆ ಎಲ್ಲ ಪಕ್ಷದವರು ಕಡೆಗಣಿಸುತ್ತಿದ್ದಾರೆ. ನಾವು ಒಗ್ಗಟ್ಟನ್ನು ಪ್ರದರ್ಶಿಸಿದಾಗಲೇ ಪ್ರಾತಿನಿಧ್ಯ, ಸ್ಥಾನಗಳು ಹುಡುಕಿಕೊಂಡು ಬರುತ್ತವೆ. ರಾಜ್ಯ ಸರ್ಕಾರದಿಂದ ಪರಶುರಾಮ ಜಯಂತಿ ಆಚರಣೆ, ಸಮಾಜದ ವಿವಿಧ ಬೇಡಿಕೆ ಸಂಬಂಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುತ್ತದೆ.

- ರಮೇಶ ಕುಲಕರ್ಣಿ, ಬ್ರಾಹ್ಮಣ ಮಹಾಸಂಘ ಜಿಲ್ಲಾಧ್ಯಕ್ಷ