ಲೋಕಸಭಾ ಚುನಾವಣೆಗೆ ಹರಪನಹಳ್ಳಿ ಸಜ್ಜು

| Published : May 06 2024, 12:34 AM IST

ಸಾರಾಂಶ

70 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ವಿಕಲಚೇತನರಿಗೆ ಅನುಕೂಲವಾಗಲೆಂದು ಪ್ರತಿ ಮತಗಟ್ಟೆಗೆ ವೀಲ್ ಚೇರ್ ನ್ನು ಇಡಲಾಗಿದೆ.

ಹರಪನಹಳ್ಳಿ: ಮೇ 7ರಂದು ನಡೆಯಲಿರುವ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಹರಪನಹಳ್ಳಿ ತಾಲೂಕು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ತಾಲೂಕಿನಲ್ಲಿ 253 ಮತಗಟ್ಟೆಗಳಿವೆ. ಅವುಗಳಲ್ಲಿ ಬೆಣ್ಣಿಹಳ್ಳಿ, ತೆಲಿಗಿ, ಹಲುವಾಗಲು ಗ್ರಾಮಗಳು ಹಾಗೂ ಪಟ್ಟಣದ ಉಪ್ಪಾರಗೇರಿ, ಸ.ಹಿ.ಪ್ರಾ ಶಾಲೆ, ಪುರಸಭಾ ಕಾರ್ಯಾಲಯಗಳಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಸ.ಪ.ಪೂ ಕಾಲೇಜಿನಲ್ಲಿ ಯುವ ಮತಗಟ್ಟೆ, ಸ.ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದರಿ ಮತಗಟ್ಟೆ, ಪುರಸಭೆ ಕಚೇರಿಯಲ್ಲಿ ವಿಕಲಚೇತನರ ಮತಗಟ್ಟೆ ಹೀಗೆ ವಿವಿಧ ಮತಗಟ್ಟೆಗಳನ್ನು ಸ್ಥಾಪನೆ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ.

1,12,969 ಪುರುಷ, 1,10,985 ಮಹಿಳೆಯರು ಹಾಗೂ 19 ಇತರೆ ಸೇರಿ ಒಟ್ಟು 2,23,973 ಮತದಾರರು ಇದ್ದಾರೆ.

70 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ವಿಕಲಚೇತನರಿಗೆ ಅನುಕೂಲವಾಗಲೆಂದು ಪ್ರತಿ ಮತಗಟ್ಟೆಗೆ ವೀಲ್ ಚೇರ್ ನ್ನು ಇಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.

26 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಟ್ಟಣದ ತರಳ ಬಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ವ್ಯವಸ್ಥೆ ಮಾಡಲಾಗಿದೆ.

ಸ.ಕಿ. ಪ್ರಾಥಮಿಕ ಶಾಲೆ ಈಶಾಪುರ ಗ್ರಾಮದ ಮತಗಟ್ಟೆ ಯೊಂದರಲ್ಲಿ ಕೇವಲ 432 ಮತದಾರರಿದ್ದು, ಇದು ಅತಿಚಿಕ್ಕ ಮತಗಟ್ಟೆಯಾಗಿದ್ದು, ಹರಪನಹಳ್ಳಿ ಪಟ್ಟಣದ ಸ.ಮಾ.ಹಿ. ಪ್ರಾ ಶಾಲೆ ಕುರುಬಗೇರಿ ಶಾಲೆಯ ಮತಗಟ್ಟೆ ಯೊಂದರಲ್ಲಿ ಅತಿಹೆಚ್ಚು ಅಂದರೆ 1505 ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ. ಇದೇ ಪ್ರಥಮ ಬಾರಿಗೆ ಮತ ಚಲಾಯಿಸಲು ಅರ್ಹರಾಗಿರುವ ಯುವ ಮತದಾರರು 6964 ಜನ ಇದ್ದಾರೆ.

ಅರಣ್ಯ ಉಳಿಸಲು ಜಾಗೃತಿ:

ಹರಪನಹಳ್ಳಿ ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಅರಣ್ಯ ಮತದಾನ ಕೇಂದ್ರ ಸ್ಥಾಪಿಸಿ ಮರ ಗಿಡಗಳನ್ನು ಉಳಿಸಿ, ಬೆಳೆಸಲು, ಕಾಡು ಪ್ರಾಣಿಗಳ ರಕ್ಷಣೆ ಕುರಿತು ಮತದಾರರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಭದ್ರತೆ:

ಭದ್ರತೆ ಕುರಿತು ಮಾಹಿತಿ ನೀಡಿದ ಡಿವೈಎಸ್ಪಿ ವೆಂಕಟಪ್ಪ ನಾಯಕ 2 ಡಿವೈಎಸ್ಪಿ, 4 ಸಿಪಿಐಗಳು, 10 ಪಿಎಸ್ ಐಗಳು, 15 ಎಎಸ್ ಐಗಳು, 250 ಪೇದೆ, ಮುಖ್ಯ ಪೇದೆಗಳು, 276 ಗೃಹ ರಕ್ಷಕದಳ, ಡಿಆರ್, ಕೆಎಸ್‌ ಆರ್ ಪಿ ತಲಾ ಒಂದೊಂದು ವಾಹನಗಳು, ನಾಗಲ್ಯಾಂಡ್ ಪ್ಯಾರಾ ಮಿಲಿಟರಿ ಪಡೆಯ 90 ಜನರು, 16 ಸೆಕ್ಟರ್ ಮೊಬೈಲ್, 4 ಸೂಪರ್‌ವೈಸರ್ ಮೊಬೈಲ್ ಹೀಗೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಶಾಂತಿಯುತ ಮತದಾನಕ್ಕೆ ತಾಲೂಕಿನಲ್ಲಿ ತಾಲೂಕು ಆಡಳಿತ ಸಕಲ ಸಿದ್ದತೆ ಕೈಗೊಳ್ಳಲಾಗಿದೆ.